More

    ಕನಕಪುರದ ಸಂಗಮ ಬಳಿ ಆತಂಕ ಸೃಷ್ಟಿಸಿದ ಸ್ಫೋಟಕಗಳು

    ಕನಕಪುರ: ತಾಲೂಕಿನ ಸಂಗಮ ವನ್ಯಜೀವಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಬೊಮ್ಮಸಂದ್ರ ಗ್ರಾಮದ ಬಳಿ ಸ್ಫೋಟಕಗಳು ಸಿಡಿದು ಆತಂಕಕ್ಕೆ ಕಾರಣವಾಗಿದೆ.

    ಗುರುವಾರ (ಮೇ 7) ಸಂಜೆ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರದ ಕಾವೇರಿ ನದಿ ಬಳಿ ಸ್ಫೋಟ ಸಂಭವಿಸಿದ್ದು, ಭಾರಿ ಶಬ್ದದಿಂದ ಜನ ಭಯಭೀತರಾದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಲ್ಟಿ ಪ್ಲೈ ಮಾರ್ಟರ್ ಲಾಂಚರ್‌ನಲ್ಲಿದ್ದ ಕಿಟ್‌ನಲ್ಲಿ ಆರು ಸ್ಫೋಟಕಗಳಿದ್ದು, ಐದು ಸಿಡಿದಿವೆ. ಶುಕ್ರವಾರ ಬೆಳಗಿನಿಂದ ಸಂಜೆಯವರೆಗೂ ಸ್ಫೋಟಕಗಳು ಉಳಿದು ಮತ್ತೆ ಸ್ಫೋಟಿಸಿದರೆ ಪ್ರಾಣಿ ಸಂಕುಲಕ್ಕೆ ತೊಂದರೆಯಾಗಬಹುದೆಂದು ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ಬೀಡುಬಿಟ್ಟು ಪರಿಶೀಲಿಸಿದರು.

    ಶನಿವಾರ ಮತ್ತು ಭಾನುವಾರ ರಜೆ ಇದ್ದುದರಿಂದ ಮೌಖಿಕವಾಗಿ ಮಾಹಿತಿ ನೀಡಲಾಗಿತ್ತು. ಸೋಮವಾರ ಸಾತನೂರು ಪೊಲೀಸರೊಂದಿಗೆ ಮತ್ತೆ ಸ್ಥಳ ಪರಿಶೀಲಿಸಿ ಸಾತನೂರು ಠಾಣೆಯಲ್ಲಿ ಬೊಮ್ಮಸಂದ್ರ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ರಾಮನಗರ ಜಿಲ್ಲಾ ಎಸ್‌ಪಿ ಅನೂಪ್ ಶೆಟ್ಟಿ, ಬೆಂಗಳೂರು ಗರುಡ ಪಡೆ ಅಧಿಕಾರಿಗಳು ಮತ್ತು ಕನಕಪುರ ಸಿಪಿಐ ಪ್ರಕಾಶ್, ಸಂಗಮ ವನ್ಯಜೀವಿ ವಲಯದ ಆರ್‌ಎ್ಒ ಕಿರಣಕುಮಾರ್ ಕರತಂಗಿ, ಸಾತನೂರು ಎಸ್‌ಐ ಮುರಳಿ ಸ್ಥಳಕ್ಕೆ ಭೇಟಿ ನೀಡಿದ್ದರು.

    ಬಯಲಿಗೆ ಬಂದಿದ್ದು ಹೇಗೆ?: ಸ್ಫೋಟಕ್ಕೆ ಸಂಬಂಧಿಸಿದಂತೆ ಬೊಮ್ಮಸಂದ್ರದ ಹರೀಶ ಮತ್ತು ಕಾವೇರಿ ಎಂಬಿಬ್ಬರು ಕಿತ್ತಾಡಿಕೊಂಡು ಅಲ್ಲಲ್ಲಿ ಈ ವಿಚಾರವನ್ನು ಮಾತನಾಡುತ್ತಿದ್ದಾರೆಂದು ಹೇಳಲಾಗಿದೆ. ಘಟನೆಯಿಂದ ಆತಂಕ ಹಾಗೂ ಕುತೂಹಲ ಹುಟ್ಟುಹಾಕಿರುವುದರಿಂದ ಸ್ಫೋಟದಲ್ಲಿ ಯಾರ‌್ಯಾರು ಭಾಗಿಯಾಗಿದ್ದಾರೆ? ಎಂಬ ಪ್ರಶ್ನೆ ಪೊಲೀಸರನ್ನು ಕಾಡತೊಡಗಿದೆ.

    ತಾಮ್ರಕ್ಕಾಗಿ ಕೃತ್ಯ?: 15 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸೈನಿಕರು ಬಂದೂಕು ಪ್ರದರ್ಶನ ಹಾಗೂ ಮದ್ದುಗುಂಡುಗಳ ಸ್ಫೋಟಕಗಳ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಈ ಮಲ್ಟಿಪ್ಲೈ ಮಾರ್ಟರ್ ಲಾಂಚರ್ ಬಿದ್ದಿದ್ದು, ಕಳೆದ ವರ್ಷ ಜೋರು ಮಳೆಯಲ್ಲಿ, ಕಾವೇರಿ ನದಿ ತುಂಬಿ ಹರಿದಿದ್ದರಿಂದ ಸ್ಫೋಟಕ ತುಂಬಿದ ಬಾಕ್ಸ್ ನದಿ ದಡಕ್ಕೆ ಬಂದಿದೆ. ಅದನ್ನು ಕಂಡ ಗ್ರಾಮಸ್ಥರು ಬಾಕ್ಸ್ ತೆಗೆದು ನದಿ ದಡದಲ್ಲಿ ಗುಂಡಿ ತೆಗೆದು ಅದರಲ್ಲಿಟ್ಟು ಬೆಂಕಿ ಹಚ್ಚಿದ್ದಾರೆ. ನಂತರ ಗ್ರಾಮದತ್ತ ವಾಪಸಾಗಿದ್ದಾರೆ. ಬೆಂಕಿಯ ಶಾಖ ಹೆಚ್ಚಾದಂತೆ ಬಾಕ್ಸ್‌ನಲ್ಲಿದ್ದ ಸ್ಫೋಟಕಗಳು ಸಿಡಿದಿದೆ. ಮೊದಲೆಲ್ಲ ಬೊಮ್ಮಸಂದ್ರ ನಿವಾಸಿಗಳು ತಾಮ್ರ ಸಿಗುತ್ತದೆ ಎಂದು ಈ ರೀತಿ ಮಾಡುತ್ತಿದ್ದರಂತೆ. ಹಾಗೆಯೇ ಇದರಲ್ಲಿಯೂ ತಾಮ್ರ ಸಿಗುತ್ತದೆ ಎಂದು ಈ ರೀತಿ ಮಾಡಿರಬಹುದು ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಾಂಬ್ ನಿಷ್ಕ್ರಿಯ ದಳ ಭೇಟಿ: ಪ್ರಕರಣದ ತನಿಖೆ ನಡೆಸಲು ಬೆಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಕ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ. ಜೀವಂತ ಇರುವ ಸ್ಫೋಟಕವನ್ನು ಬೆಂಡಗೋಡು ಗ್ರಾಮದ ಬಳಿಯ ಅರಣ್ಯ ಚೆಕ್‌ಪೋಸ್ಟ್ ಬಳಿ ಮರಳಿನ ಮೂಟೆಗಳ ನಡುವೆ ಇಡಲಾಗಿದೆ. ಜೀವಂತವಾಗಿರುವ ಸ್ಫೋಟಕವನ್ನು ಕೋರ್ಟ್ ಗಮನಕ್ಕೆ ತಂದು ನಿಷ್ಕ್ರಿಯಗೊಳಿಸಲಾಗುವುದು ಎಂದು ಸಂಗಮ ವನ್ಯಜೀವಿ ವಲಯ ಅರಣ್ಯದ ಡಿಆರ್‌ಎ್ಒ ಶಿವಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts