ಹೊಸಪೇಟೆ: ಗಿಡಗಳಲ್ಲಿ ಹೂಗಳು ಅರಳಿ ನಿಂತಿವೆ. ಆದರೆ, ಮಾರುಕಟ್ಟೆ, ಗ್ರಾಹಕರಿಲ್ಲ ಎಂದು ಸಗಟು ವ್ಯಾಪಾರಿಗಳು ಖರೀದಿಸುತ್ತಿಲ್ಲ. ಹೀಗಾಗಿ ಹೂಗಳು ಉದುರಿ ಮಣ್ಣು ಪಾಲಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಆ ಪೈಕಿ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಒಂದು ಎಕರೆಯಲ್ಲಿ ಕನಕಾಂಬರ ಬೆಳೆದ ರೈತ ಎತ್ನಟ್ಟಿ ಯಂಕಪ್ಪ ಪರಿಸ್ಥಿತಿ ಅದಕ್ಕೆ ಹೊರತಾಗಿಲ್ಲ. ವ್ಯಕ್ತಿಯ ನಡುವಿನ ಮಟ್ಟಕ್ಕೆ ಬೆಳೆದ ಹಸಿರ ಗಿಡಗಳ ಮೇಲೆ ಕೇಸರಿಯಂತೆ ಕೀರಿಟ ಹೊತ್ತು ಅರಳಿ ನಿಂತಿವೆ ಕನಕಾಂಬರ. ಹೂ ಕೀಳಿಸಿದರೂ ನಗರ ಸೇರಿ ಗ್ರಾಮಗಳಲ್ಲೂ ಕೊಳ್ಳುವವರಿಲ್ಲ. ಹೀಗಾಗಿ ಗಿಡದಲ್ಲೇ ಬಿಟ್ಟಿದ್ದು, ಬಾಡಿ ನೆಲಕ್ಕೆ ಬೀಳುತ್ತಿವೆ. ಈ ಹಿಂದೆ ನಿತ್ಯ 10 ಕೆಜಿ ಹೂವು ಕೀಳುತ್ತಿದ್ದೆವು. ಇದೀಗ ತಿಂಗಳಿಗೆ ಕನಿಷ್ಠ ಎಕರೆಗೆ 30 ಸಾವಿರ ರೂ. ನಷ್ಟ ಅನುಭವಿಸುತ್ತಿದ್ದೇನೆ. ಹೂ ಬಿಡಿಸುವ ಕೂಲಿಕಾರ್ಮಿಕರಿಗೆ ಹಣ ನೀಡಲಾಗುತ್ತಿಲ್ಲ ಎಂದು ಕೊರಗುವ ರೈತ ಯಂಕಪ್ಪ, ರೈತರ ನೆರವಿಗಿದ್ದೇವೆ ಎಂದು ಸರ್ಕಾರ ಭರವಸೆ ನೀಡಿದರೆ ಸಾಲದು, ಹೂ ಬೆಳೆಗಾರರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಸಹಾಯವಾಣಿ ಆರಂಭ
ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಫಸಲು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುವಂತೆ ಸಹಾಯವಾಣಿ ಆರಂಭಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.ಜಿಲ್ಲಾ ಸಹಾಯವಾಣಿ ಕೇಂದ್ರದ ದೂ.ಸಂ. 08392-278179 ಅಥವಾ ಹಿರಿಯ ಸಹಾಯಕ ನಿರ್ದೇಶಕರ ದೂ.ಸಂ.08392-278177, 8971902792 ಕರೆ ಮಾಡಬಹುದು. ಹಡಗಲಿ 08399-240136, 8861697989, ಹಬೊಹಳ್ಳಿ 08397-238396 9886685592, ಹೊಸಪೇಟೆ 08394-222414, 9980354739, ಕೂಡ್ಲಿಗಿ 08391-220258, 9743575488, ಸಂಡೂರು 08395-260389 8123461114, ಸಿರಗುಪ್ಪ 08396-222066, 9448839059, ಹರಪನಹಳ್ಳಿ 08398-280076, 9964183994 ಕರೆ ಮಾಡಿ ನೆರವು ಪಡೆಯಬಹುದು. ಮೇ 3 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾಹಿತಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.