More

    ಶಾಲೆ-ಕಾಲೇಜು ಸಮಯಕ್ಕೆ ಬಸ್ ಬಿಡಿ: ಕನಕಗಿರಿ ಶಾಸಕರ ಕಚೇರಿ ಎದುರು ವಿದ್ಯಾರ್ಥಿಗಳ ಪ್ರತಿಭಟನೆ

    ಕನಕಗಿರಿ: ಶಾಲೆ-ಕಾಲೇಜು ಸಮಯಕ್ಕೆ ಬಸ್ ಬಿಡಬೇಕೆಂದು ಆಗ್ರಹಿಸಿ ಪಟ್ಟಣದ ಶಾಸಕರ ಕಚೇರಿ ಮುಂದೆ ತಿಪ್ಪನಾಳ, ಸುಳೇಕಲ್ ಹಾಗೂ ಗಂಗಾವತಿ ತಾಲೂಕಿನ ಅಳ್ಳಳ್ಳಿ ಗ್ರಾಮದ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

    ಎಸ್‌ಎಫ್‌ಐ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆಂದು ಹೇಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಬರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಸಮಯಕ್ಕೆ ಬಸ್ ಬಿಡುವಲ್ಲಿ ವಿಫಲರಾಗಿದ್ದಾರೆ. ಬಸ್ ಸಂಚಾರ ಆರಂಭಿಸುವಂತೆ ಸಂಬಂಧಿಸಿದ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲವಾಗಿದೆ. ಸಮಸ್ಯೆ ಬಗ್ಗೆ ಶಾಸಕರಿಗೆ ಅರಿವಿದ್ದರೂ ಪರಿಹಾರಕ್ಕೆ ಮುಂದಾಗದಿರುವುದು ಖಂಡನೀಯ. ಶೀಘ್ರವೇ ಕನಕಗಿರಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳ ಸಂಚಾರ ಆರಂಭಿಸಬೇಕು. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ವಿದ್ಯಾರ್ಥಿಗಳಾದ ನಾಗರಾಜ, ಶರಣಬಸಪ್ಪ ಮಾತನಾಡಿ, ಸುಳೇಕಲ್, ತಿಪ್ಪನಾಳ ಗ್ರಾಮಗಳಿಗೆ ಎಲ್ಲ ಬಸ್‌ಗಳನ್ನು ನಿಲುಗಡೆ ಮಾಡಬೇಕು. ಇಲ್ಲದಿದ್ದರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕ್‌ಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿ ಮುಖಂಡರಾದ ಹುಸೇನಪ್ಪ, ಪರಶುರಾಮ್ ಹುಲಿಹೈದರ್, ಮಾರುತೇಶ, ದೇವರಾಜ್, ರಾಜಾಹುಲಿ, ಶರಣಪ್ಪ ಶಿವರಾಜ್, ನಾಗರಾಜ್, ತ್ರಿವೇಣಿ, ಸಂಗೀತ, ಸೌಜನ್ಯ, ಶ್ರೀದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts