More

    ಮೂಲಾ ನಕ್ಷತ್ರದಲ್ಲೇ ಕನಕಾಚಲಪತಿ ರಥೋತ್ಸವ- ಶಾಸಕ ಬಸವರಾಜ ದಢೇಸುಗೂರು ಹೇಳಿಕೆ

    ಕನಕಗಿರಿ: ಕರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವರ ರಥೋತ್ಸವದ ಸಮಯ ಬದಲಾಗಿದ್ದು, ಈ ವರ್ಷ ಸಂಪ್ರದಾಯದಂತೆ ಮೂಲಾ ನಕ್ಷತ್ರದಲ್ಲೇ ರಥೋತ್ಸವ ಜರುಗಲಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಜಾತ್ರೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ವರ್ಷಗಳಿಂದ ಜಾತ್ರೆ ನಡೆಯದ ಕಾರಣ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ತಾಂತ್ರಿಕ ಕಾರಣ ಮೊದಲ ವರ್ಷ ರಥೋತ್ಸವ ಅಪೂರ್ಣವಾಗಿತ್ತಲ್ಲದೆ, ಕಳೆದ ವರ್ಷ ಬೆಳಗ್ಗೆಯೇ ನಡೆದಿತ್ತು. ಆದರೆ, ಈ ವರ್ಷ ಮಾ.24ರಂದು ರಥೋತ್ಸವ ಜರುಗಲಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಪಾಳ್ಗೊಳ್ಳಲಿದ್ದಾರೆ. ಅಂದು ಸಂಪ್ರದಾಯದಂತೆ ಮೂಲಾ ನಕ್ಷತ್ರದಲ್ಲೇ ರಥ ಎಳೆಯಲಾಗುವುದು ಎಂದರು.

    ಸಾರಿಗೆ ಇಲಾಖೆಯದ್ದೆ ಚರ್ಚೆ: ಜಾತ್ರೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಗಂಗಾವತಿ ಬಸ್ ಡಿಪೋ ಮ್ಯಾನೇಜರ್ ಸಂಜೀವ ಮೂರ್ತಿ ಬಸ್ ಸಂಚಾರದ ಬಗ್ಗೆ ವಿವರಣೆ ನೀಡಿದರು. ಜಾತ್ರೆಗೆ ವಿಶೇಷ ಬಸ್‌ಗಳನ್ನು ಬಿಡಲಾಗುವುದು. 50-60 ಜನರಿದ್ದರೂ ಬಸ್ ಸೌಕರ್ಯ ಒದಗಿಸಲಾಗುವುದು ಎಂದರು.

    ಬಳ್ಳಾರಿ-ಕನಕಗಿರಿ ಬಸ್ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ರೈಲ್ವೆ ಸಮಯಕ್ಕೆ ಗಂಗಾವತಿಗೆ ತಲುಪಲು ಬಸ್ ವ್ಯವಸ್ಥೆ ಮಾಡಬೇಕೆಂದು ಸಭಿಕರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಪೋ ಮ್ಯಾನೇಜರ್ ಸಂಜೀವ ಮೂರ್ತಿ, ಶಾಸಕರು ಈ ಮೊದಲು ಸೂಚಿಸಿದ್ದಾಗ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ ಎಂದರು.

    ಪಟ್ಟಣದಿಂದ ಬೆಂಗಳೂರು, ಮಂಗಳೂರಿಗೆ ತೆರಳುತ್ತಿದ್ದ ಬಸ್ ಸಂಚಾರವೂ ಸ್ಥಗಿತಗೊಂಡಿವೆ ಎಂದು ಅಧಿಕಾರಿಯನ್ನು ಸಭಿಕರು ತರಾಟೆಗೆ ತೆಗೆದುಕೊಂಡರು. ಮಂಗಳೂರು ಬಸ್ ನಮ್ಮ ಘಟಕದಲ್ಲ. ಕುಷ್ಟಗಿ ಡಿಪೋದ್ದು ಎಂದು ಸಮಜಾಯಿಷಿ ನೀಡಲು ಮುಂದಾದರು. ಅಲ್ಲದೆ, ಬೆಂಗಳೂರಿಗೆ ಸಾರಿಗೆ ಆರಂಭಿಸುವುದಾಗಿ ಅಧಿಕಾರಿ ತಿಳಿಸಿದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ತಾಪಂ ಎಡಿ ಚಂದ್ರಶೇಖರ ಕಂದಕೂರು, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ, ವೈದ್ಯ ಭರಮ ನಾಯಕ, ಎಸಿಡಿಪಿಒ ವಿಮಲಪ್ಪ ಇತರರಿದ್ದರು.

    ವಿವಿಧ ಇಲಾಖೆಗಳಿಗೆ ಸೂಚನೆ
    ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುವುದರಿಂದ ರಥ ಎಳೆಯಲಿಕ್ಕೆ ತೊಂದರೆಯಾಗದಂತೆ ಪೊಲೀಸ್ ಭದ್ರತೆ ಒದಗಿಸಬೇಕು. ರಾಜಬೀದಿಯಲ್ಲಿ ರಥ ಸಾಗಲಿಕ್ಕೆ ತಾತ್ಕಾಲಿಕವಾಗಿ ರಸ್ತೆ ಕಾಮಗಾರಿ ನಿರ್ವಹಿಸಬೇಕು. ತಾಪಂಯಿಂದ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ, ಪಪಂಯಿಂದ ಮೂಲ ಸೌಕರ್ಯ ಕಲ್ಪಿಸಬೇಕು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts