More

    ಗ್ರಾಪಂ ಕಚೇರಿಗೆ ಕಾರ್ಮಿಕರ ಮುತ್ತಿಗೆ

    ಉದ್ಯೋಗ ಖಾತ್ರಿಯಡಿ ಬಾಕಿ ಇರುವ 4 ತಿಂಗಳ ಕೂಲಿ ಹಣ ಪಾವತಿಗೆ ಒತ್ತಾಯ

    ಕನಕಗಿರಿ: ಬಾಕಿ ಇರುವ ಉದ್ಯೋಗ ಖಾತ್ರಿಯಡಿಯ ಕೂಲಿ ಹಣ ಪಾವತಿಸುವಂತೆ ಒತ್ತಾ ಯಿಸಿ ಕೂಲಿ ಕಾರ್ಮಿಕರು ಸೋಮವಾರ ಜೀರಾಳ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ಕೂಲಿ ಕಾರ್ಮಿಕ ಯಮನೂರಪ್ಪ ಮಾತನಾಡಿ, 4 ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲಾಗಿದೆ. ಇದುವರೆಗೂ ಕೂಲಿ ಹಣ ಕೊಟ್ಟಿಲ್ಲ. ಹಣ ಪಾವತಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಲಿ ನಂಬಿ ದುಡಿದ ಕುಟುಂಬಗಳ ಕಂಗಾಲಾಗಿವೆ. ಆದ್ದರಿಂದ, ಕೂಲಿ ಹಣ ಪಾವತಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

    ಕಾರ್ಮಿಕ ಮಹಿಳೆ ಮಲ್ಲಮ್ಮ ಮಾತನಾಡಿ, ಉದ್ಯೋಗ ಖಾತ್ರಿಯಡಿ 15 ದಿನ ಕೆಲಸ ಮಾಡಿದ್ದೇವೆ. ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ. ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಹಣ ಪಾವತಿಸಬೇಕು ಎಂದರು.
    ಈ ಸಂದರ್ಭ ರಮೇಶ ದಾಸ, ಲಕ್ಷ್ಮಣ, ನಾಗಮ್ಮ, ಸಿದ್ದಮ್ಮ, ರಾಮೇಶ್ವರಿ ಸೇರಿ ಜೀರಾಳ ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ಇದ್ದರು.

     

    ಕೂಲಿ ಕಾರ್ಮಿಕರಿಗೆ ಜಿಪಂ ವಿಭಾಗದಿಂದ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗಿದೆ. ಕೂಲಿ ಕಾರ್ಮಿಕರಿಗೆ ಜಿಪಂ ಹಣ ಪಾವತಿಸಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ಶೀಘ್ರ ಕೂಲಿ ಪಾವತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    | ಬಸವರಾಜ ಜೀರಾಳ ಗ್ರಾಪಂ ಪಿಡಿಒ


    ಉದ್ಯೋಗ ಖಾತ್ರಿ ಯೋಜನೆಯಡಿ ಜೀರಾಳ ಗ್ರಾಪಂನಲ್ಲಿ ನೀಡಿದ ಕೆಲಸಕ್ಕೆ ಕೂಲಿ ಪಾವತಿ ಮಾಡದೇ ಇರುವುದು ನನ್ನ ಗಮನಕ್ಕೆ ಇದೆ. ಕ್ರಿಯಾ ಯೋಜನೆ ಅನುಮೋದನೆಯಾಗದೇ ಕೆಲಸ ಮಾಡಿದ್ದಾರೆ. ಇದರಿಂದ ತೊಂದರೆಯಾಗಿದೆ. ಕ್ರಿಯಾ ಯೋಜನೆ ಅನುಮೋದನೆಗಾಗಿ ಜಿಪಂ ಕಳಿಸಲಾಗಿದೆ. 15 ದಿನದೊಳಗಾಗಿ ಹಣ ಪಾವತಿಸಲಾಗುವುದು.
    | ಚಿದಾನಂದ  ಜಿಪಂ ಎಇಇ, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts