More

    ಇಳುವರಿ ಕುಂಠಿತವಾದರೂ ಬೆಳೆಗಾರರಲ್ಲಿ ಹರ್ಷ

    ಕಾನಹೊಸಹಳ್ಳಿ: ಪ್ರತಿವರ್ಷ ಚಳಿಗಾಲದಲ್ಲಿ ವೀಳ್ಯೆದೆಲೆ ಬೆಳೆ ಇಳುವರಿ ಕುಂಠಿತವಾಗುತ್ತದೆ. ಎರಡು ವರ್ಷದ ಹಿಂದೆ ಒಂದು ಪೆಂಡೆಗೆ(30 ಪಿಚ್ಚಿ ಎಲೆ) 300 ರಿಂದ 500 ರೂ. ಇತ್ತು. ಎರಡು ವಾರದ ಹಿಂದೆ ಅಂದಾಜು 20 ಸಾವಿರ ರೂ.ಗೆ ತಲುಪಿತ್ತು. ಪ್ರಸ್ತುತ 12 ರಿಂದ 14 ಸಾವಿರ ರೂ.ಗೆ ಕುಸಿದಿದೆ. ಆದರೂ, ಬೆಳೆಗೆಗಾರರಲ್ಲಿ ಸಂತಸ ಮೂಡಿದೆ. ಎರಡು ದಶಕದಿಂದ ನೀರಿನ ಕೊರತೆ ನಡುವೆಯೂ ಉತ್ತಮ ಬೆಳೆ ಬಂದಿದೆ. ಚಳಿಗಾಲದ ಪರಿಣಾಮ ಇಳುವರಿ ಕುಂಠಿತಗೊಂಡಿದ್ದು, 10 ಪೆಂಡೆ ಎಲೆ ಕೊಯ್ಲು ಮಾಡುತ್ತಿದ್ದ ಬೆಳೆಗಾರರು ಮೂರರಿಂದ ನಾಲ್ಕು ಪೆಂಡೆ ಕೊಯ್ಲು ಮಾಡುತ್ತಿದ್ದಾರೆ.

    ಕುರಿಹಟ್ಟಿ, ಗುಂಡುಮುಣುಗು, ಭೀಮಸಮುದ್ರ, ಕರಡಿಹಳ್ಳಿ, ಚಿಕ್ಕಜೋಗಿಹಳ್ಳಿ, ಹೊಸಹಟ್ಟಿ, ಮಾಡ್ಲಾಕನಹಳ್ಳಿ, ಹುಲಿಕುಂಟೆ, ದಾಸೋಬನಹಳ್ಳಿ, ಹಿರೇಕುಂಬಳಗುಂಟೆ, ಕಕ್ಕುಪ್ಪಿ, ಮಡಕಲಕಟ್ಟೆ ಮತ್ತು ಇತರೆ ಗ್ರಾಮಗಳಲ್ಲಿ ಕೆಲ ರೈತರು ತಲಾ ಅರ್ಧ ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ವೀಳ್ಯೆದೆಲೆ ತೋಟ ಮಾಡಿದ್ದಾರೆ. ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ 84.52 ಹೆಕ್ಟೇರ್ ಮತ್ತು ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿ 26.69 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗಿದೆ.

    ಮದುವೆ, ಹಬ್ಬ ಮತ್ತು ಇತರೆ ಶುಭ ಕಾರ್ಯಗಳಿಗೆ ಎಲೆ ಬೇಕಾಗುತ್ತದೆ. ಹೀಗಾಗಿ ಸಹಜವಾಗಿ ಬೇಡಿಕೆ ಇದ್ದೇ ಇರುತ್ತದೆ. ಆದರೆ, ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಸ್ಥಳೀಯ ವೀಳ್ಯೆದೆಲೆಗೆ ವಿಜಯನಗರ, ಬಳ್ಳಾರಿಯೊಂದಿಗೆ ತುಮಕೂರು, ಚಿಂತಾಮಣಿ, ಪಾವಗಡ, ತಿಪಟೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾಸನ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತಮ ಬೇಡಿಕೆ ಇದೆ.

    ಈ ಬೆಳೆಗಾರರು ಬಹುತೇಕ ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುತ್ತಾರೆ. ಸೆಗಣಿ ಗೊಬ್ಬರ ಮತ್ತು ಸಣ್ಣ ಕಲ್ಲು ಮಿಶ್ರಿತ ಕೆಂಪು ಮಣ್ಣು ಬಳ್ಳಿಗೆ ಹಾಕುತ್ತಾರೆ. ಆಧುನಿಕ ಪದ್ಧತಿ ನಡುವೆ ಪಾರಂಪರಿಕ ಸಾವಯವ ಕೃಷಿ ಪದ್ಧತಿಯಂತೆ ಎಲೆ ಬೆಳೆಯುತ್ತಾರೆ. ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯಲ್ಲಿ ವೀಳ್ಯೆದೆಲೆೆ ತೋಟಗಾರಿಕೆ ಬೆಳೆ ಬೆಳೆಯುತ್ತಾರೆ. ಆದರೆ, ಎಲೆ ಮಾರಾಟದ ಅಂಗಡಿ ಕಾನಹೊಸಹಳ್ಳಿಯಲ್ಲಿ ಮಾತ್ರವಿದೆ. ಇಲ್ಲಿಗೆ ನೆರೆಯ ಆಂಧ್ರಪ್ರದೇಶ,ಕೊಟ್ಟೂರು, ಜಗಳೂರು ತಾಲೂಕಿನ ರೈತರು ನಿತ್ಯ ಸಂಜೆ ಅಂಗಡಿಗೆ ತರುತ್ತಾರೆ. ದಿನಕ್ಕೆ ಕನಿಷ್ಠ 35 ರಿಂದ 60 ಪೆಂಡೆಗಳು ಬರುತ್ತವೆ. ಇಲ್ಲಿ ನಿತ್ಯ ಮೂರರಿಂದ ಆರು ಲಕ್ಷ ರೂ.ವರೆಗೆ ವಹಿವಾಟು ನೆಡೆಯುತ್ತದೆ.

    ವೀಳ್ಯೆದೆಲೆ ಒಂದು ಪೆಂಡೆ ಕೊಯ್ಕು ಮಾಡಲು ಇಬ್ಬರಿಂದ ಮೂವರು ಕೆಲಸಗಾರರು ಬೇಕು. ನಿತ್ಯ ಒಬ್ಬರಿಗೆ 300 ರೂ. ನಂತೆ ಮೂವರಿಗೆ 900 ರೂ ಕೂಲಿಯಾಗುತ್ತೆ. ಎರಡು ವರ್ಷಗಳ ಹಿಂದೆ ಕೆಲಸಗಾರರಿಗೆ ನೀಡುವ ಕೂಲಿ ಹಣದಷ್ಟು ಒಂದು ಪೆಂಡೆ ಮಾರಿದರು ಬರುತ್ತಿರಲಿಲ್ಲ. ಎರಡು ವರ್ಷದಿಂದ ಒಂದು ಪೆಂಡೆಗೆ ಕನಿಷ್ಠ 10 ರಿಂದ 20 ಸಾವಿರ ರೂ.ಗೆ ಏರಿಕೆಯಾಗಿದೆ. ಜನಸಾಮಾನ್ಯರಿಗೆ ಕೈಗೆಟಕದಷ್ಟು ಹೊರೆಯಾಗಿದೆ. ಒಂದೇ ಎಲೆಗೆ ಕನಿಷ್ಠವೆಂದರೂ 1.5 ರೂ. ನಿಂದ ಎರಡು ನೀಡಿ ಖರೀದಿಸಬೇಕಿರುವ ಅನಿವಾರ್ಯತೆ ಉಂಟಾಗಿತ್ತು. ಕಳೆದೊಂದು ವಾರದಿಂದ ಸ್ವಲ್ಪಮಟ್ಟಿಗೆ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ರೈತರು.

    25 ವರ್ಷದಿಂದ ವೀಳ್ಯೆದೆಲೆ ವ್ಯಾಪಾರ ಮಾಡುತ್ತಾ ಬಂದಿರುವೆ, ಈಗಲೂ ಕಾನಹೊಸಹಳ್ಳಿ ಅಂಗಡಿ ಇದೆ. ಈಗಿನ ಬೆಲೆಯಷ್ಟು ಯಾವಾಗಲೂ ಸಿಕ್ಕಿಲ್ಲ. ನಿತ್ಯ ಅಂಗಡಿಗೆ ಮೊದಲು ನೂರಾರು ಪೆಂಡೆಗಳು ಬರುತ್ತಿದ್ದವು. ಚಳಿಗಾಲವಾಗಿರುವ ಕಾರಣ ಅರ್ಧದಷ್ಟು ಕಡಿಮೆಯಾಗಿದೆ. ಅಲ್ಲದೆ ಒಂದು ವಾರದದಿಂದ ಬೆಲೆ ಸಹ ಕಡಿಮೆಯಾಗಿದೆ.
    | ಎಂ.ಎಚ್.ಹನುಮಂತಪ್ಪ, ವೀಳ್ಯೆದೆಲೆ ಅಂಗಡಿ ವರ್ತಕ. ಕಾನಹೊಸಹಳ್ಳಿ.

    ಸದ್ಯ ಉತ್ತಮ ಬೆಲೆ ಇದೆ. ಆದರೆ, ಚಳಿಗಾಲದಲ್ಲಿ ಎಲೆಚುಕ್ಕೆ ರೋಗ ಕಾಡುತ್ತದೆ. ವರ್ಷಕ್ಕೊಂದು ಬಾರಿ ಬಳ್ಳಿ ಇಳಿಕೆ ಮಾಡುವ ಕಾರಣ ಸಹಜವಾಗಿ ಇಳುವರಿ ಕುಂಠಿತವಾಗುತ್ತದೆ. ರೋಗ ನಿಯಂತ್ರಣಕ್ಕೆ ಬರಲು ಇನ್ನೂ ಎರಡು ತಿಂಗಳಬೇಕು.
    | ಅಜ್ಜಪ್ಪ, ರೈತ. ಹೊಸಹಟ್ಟಿ.

    ವೀಳ್ಯೆದೆಲೆ ಬೆಳೆಯುವ ರೈತರ ಸಂಖ್ಯೆ ಕಡಿಮೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಮಾಡಿಕೊಳ್ಳಲು ಅವಕಾವಿದೆ ಮತ್ತು ನರೇಗಾ ಯೋಜನೆ ಮೂಲಕ ವೀಳ್ಯೆದೆಲೆ ತೋಟ ಅಭಿವೃದ್ದಿ ಮಾಡಿಕೊಳ್ಳಬಹುದಾಗಿದೆ. ರೈತರು ಮಾರುಕಟ್ಟೆ ನೋಡಿಕೊಳ್ಳಬೇಕು. ಸಾವಯವ ಮತ್ತು ನೈಸರ್ಗಿಕ ಏಕೈಕ ಬೆಳೆಯಾಗಿದೆ.
    | ಹನುಮಪ್ಪನಾಯಕ, ಸಹಾಯಕ ತೋಟಗಾರಿಕಾ ನಿರ್ದೇಶಕ, ಕೂಡ್ಲಿಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts