More

    ಪಿಂಚಣಿದಾರರಿಗೆ ಸೌಕರ್ಯ ಒದಗಿಸಲು ಪ್ರಧಾನ ಅಂಚೆ ಕಚೇರಿಯ ಅಂಚೆ ಸಹಾಯಕ ಗುರುಬಸವರಾಜ್ ಮನವಿ

    ಕಂಪ್ಲಿ: ಪಿಂಚಣಿ ಪಡೆಯಲು ಬರುವವರಿಗೆ ಕೆಲವು ಸೌಕರ್ಯಗಳನ್ನು ಒದಗಿಸಬೇಕು ಮತ್ತು ತಮ್ಮೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು ಎಂದು ನಾನಾ ಪಿಂಚಣಿ ಪಡೆವ ವಯೋವೃದ್ಧರು ಪ್ರಧಾನ ಅಂಚೆ ಕಚೇರಿಯ ಅಂಚೆ ಸಹಾಯಕ ಗುರುಬಸವರಾಜ್ ಅವರನ್ನು ಮಂಗಳವಾರ ಕೋರಿದರು.

    ಪಟ್ಟಣದ ಹಳೆಯ ಬಸ್‌ನಿಲ್ದಾಣ ಬಳಿಯ ಅಂಚೆ ಕಚೇರಿಗೆ ಮಂಗಳವಾರ ಭೇಟ ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ನಾನಾ ಯೋಜನೆಗಳಡಿ ಪಿಂಚಣಿ ಪಡೆಯಲು ಬರುವ ಹಿರಿಯ ಜೀವಗಳಿಗೆ, ಅಂಗವಿಕಲರಿಗೆ ಅಂಚೆ ಕಚೇರಿ ಆವರಣದಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲ. ಮರದ ನೆರಳೇ ಗತಿ. ಮಳೆ ಬಂದರೆ ತಕ್ಷಣ ಎದ್ದು ಹೋಗಲೂ ಆಗದ ಆಶಕ್ತರು ಮಳೆ ನೀರಿನಲ್ಲಿ ತೋಯಿಸಿಕೊಳ್ಳಬೇಕು. ಪಿಂಚಣಿ ವಿತರಿಸುವ ಅಂಚೆಕಚೇರಿಯ ಸಿಬ್ಬಂದಿ ಸಮಾಧಾನದಿಂದ ವರ್ತಿಸುವುದಿಲ್ಲ. ಬಹುಹೊತ್ತು ಕಾಯಿಸುತ್ತಾರೆ. ಮಾಹಿತಿ ಕೇಳಿದರೆ ಸೂಕ್ತ ತಿಳಿವಳಿಕೆ ನೀಡುವುದಿಲ್ಲ. ಮೈಯಲ್ಲಿ ಹುಷಾರಿಲ್ಲದಿದ್ದರೂ, ಅಂಚೆ ಕಚೇರಿಗೆ ಬರದಷ್ಟು ಆಶಕ್ತರಾಗಿದ್ದರೂ ಖಾತೆದಾರರೆ ಬರಬೇಕು ಎಂದು ಪಟ್ಟು ಹಿಡಿಯುತ್ತಾರೆ. ಕೆಲ ಸಿಬ್ಬಂದಿಯಂತೂ ತುಂಬಾ ಒರಟಾಗಿ ಮಾತನಾಡಿಸುತ್ತಾರೆ. ಆದ್ದರಿಂದ ಪಿಂಚಣಿ ಹಣ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಹಿರಿಯ ಪಿಂಚಣಿದಾರರಾದ ಅಕ್ಕಮ್ಮ, ಲಕ್ಷ್ಮಮ್ಮ, ಕಣಿವೆಮ್ಮ, ತಂಗಮ್ಮ, ದುರುಗಮ್ಮ, ಹುಲಿಗೆಮ್ಮ ಇತರರು ಒತ್ತಾಯಿಸಿದರು.

    ಕಸಾಪ ಮಾಜಿ ಅಧ್ಯಕ್ಷ ಅಗಳಿ ಪಂಪಾಪತಿ ಮಾತನಾಡಿ, ಅಂಚೆ ಕಚೇರಿಗೆ ಪಿಂಚಣಿ ಪಡೆಯಲು ಬರುವ ಪಿಂಚಣಿದಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಂಚೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಒತ್ತಾಯಿಸಿದರು.

    ಪ್ರಧಾನ ಅಂಚೆ ಕಚೇರಿಯ ಅಂಚೆ ಸಹಾಯಕ ಗುರುಬಸವರಾಜ್ ಮತ್ತು ಬಝಾರ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಕೆ.ಕಲಾವತಿ ಮಾತನಾಡಿ, ಡಿಕ್ಯೂಬ್ ವ್ಯವಸ್ಥೆ ಜಾರಿಗಾಗಿ ಸದ್ಯ ಸಿಬ್ಬಂದಿ ತರಬೇತಿ ಪಡೆಯುತ್ತಿದ್ದಾರೆ. ಡಿಕ್ಯೂಬ್ ವ್ಯವಸ್ಥೆ ಜಾರಿಗೊಂಡಲ್ಲಿ ಮನೆ ಮನೆಗೆ ತೆರಳಿ ಹಣ ವಿತರಿಸಲಾಗುವುದು. ಪಿಂಚಣಿದಾರರಿಗೆ ಸೂಕ್ತ ತಿಳಿವಳಿಕೆ ನೀಡಲಾಗುವುದು. ಆಶಕ್ತ ಪಿಂಚಣಿದಾರರು ಅಂಚೆ ಕಚೇರಿಗೆ ಬರದೆ ಹಣ ಪಡೆದುಕೊಳ್ಳುವ ಕ್ರಮ ತಿಳಿಸಿಕೊಡಲಾಗುತ್ತಿದೆ. ಪಿಂಚಣಿದಾರರಿಗೆ ಅನುಕೂಲ ಒದಗಿಸಿಕೊಡುತ್ತಿದ್ದು, ಈಗ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಸ್ವಲ್ಪ ತೊಂದರೆಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts