More

    32 ಲಕ್ಷ ರೂ. ಉಳಿತಾಯ ಬಜೆಟ್

    ಕಂಪ್ಲಿ: ಇಲ್ಲಿನ ಪುರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ಶುಕ್ರವಾರ ಜರುಗಿದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್. ಹನುಮಂತ ಅವರು 2023-24ನೇ ಸಾಲಿನ 32,59,452 ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

    ನಾನಾ ಮೂಲಗಳಿಂದ 57,43,89,452 ರೂ. ಆದಾಯ, 57,11,30,000 ರೂ. ಖರ್ಚು ನಿರೀಕ್ಷಿಸಲಾಯಿತು. ನಗರೋತ್ಥಾನ ಯೋಜನೆಯಡಿ 10 ಕೋಟಿ ರೂ, ಗಣಿಬಾಧಿತ ಪ್ರದೇಶಾಭಿವೃದ್ಧಿ ಅನುದಾನ 5 ಕೋಟಿ ರೂ, ರಾಜ್ಯ ಹಣಕಾಸು ಆಯೋಗದಿಂದ 2.50 ಕೋಟಿ ರೂ, ಮನೆ ತೆರಿಗೆ 2 ಕೋಟಿ ರೂ, 15ನೇ ಹಣಕಾಸು ಯೋಜನೆಯಡಿ 4 ಕೋಟಿ ರೂ, ಕೆಕೆಆರ್‌ಡಿಬಿಯಿಂದ 50ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ.

    2 ಕೋಟಿ ರೂ.ವೆಚ್ಚದಲ್ಲಿ ವಾಲ್ಮೀಕಿ ವೃತ್ತದಿಂದ ಶುಗರ್ ಫ್ಯಾಕ್ಟರಿ ವರೆಗಿನ ರಸ್ತೆ ಅಭಿವೃದ್ಧಿ, 7.50 ಕೋಟಿ ರೂ.ನಲ್ಲಿ ಪಟ್ಟಣದ ರಸ್ತೆಗಳ ಪ್ರಗತಿ, 2 ಕೋಟಿ ರೂ.ಗಳಲ್ಲಿ ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿ, 5 ಕೋಟಿ ವೆಚ್ಚದಲ್ಲಿ ಒಂಬತ್ತು ಪಟ್ಟಣಗಳ ಕುಡಿವ ನೀರಿನ ಯೋಜನೆ ಅನುಷ್ಠಾನ, 4.30 ಕೋಟಿ ರೂ.ನಲ್ಲಿ ರಸ್ತೆ ಬದಿ ಚರಂಡಿಗಳ ನಿರ್ಮಾಣ, 35 ಲಕ್ಷ ರೂನಲ್ಲಿ ಪಟ್ಟಣದ ವೃತ್ತಗಳ ಅಭಿವೃದ್ಧಿ, 1 ಕೋಟಿ ವೆಚ್ಚದಲ್ಲಿ ಲಘುವಾಹನ, ಯಂತ್ರೋಪಕರಣ ಖರೀದಿ, 25 ಲಕ್ಷ ರೂ.ನಲ್ಲಿ ಪಾರ್ಕ್ ನಿರ್ಮಾಣ ಹಾಗೂ ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆಗೆ 3.26 ಕೋಟಿ ರೂ. ಖರ್ಚು ನಿರೀಕ್ಷಿಸಲಾಯಿತು. ಉಳಿತಾಯ ಬಜೆಟನ್ನು ಸದಸ್ಯರು ಸ್ವಾಗತಿಸಿ, ಒಪ್ಪಿಗೆ ಸೂಚಿಸಿದರು.

    ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಪಟ್ಟಣದಲ್ಲಿ ಬೀದಿದೀಪಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡುತ್ತಿದ್ದಾಗ, ಮಧ್ಯಪ್ರವೇಶಿಸಿದ ಸದಸ್ಯರಾದ ಕೆ.ಎಸ್.ಚಾಂದ್‌ಬಾಷ, ವೀರಾಂಜನೇಯಲು, ಸ್ವಂತ ಹಣದಿಂದ ವಾರ್ಡ್‌ಗಳಲ್ಲಿ ಬೀದಿದೀಪ ಹಾಕಿಸಿಕೊಂಡಿದ್ದೇವೆ ಎಂದರು. ಇದಕ್ಕೆ ಸದಸ್ಯ ಉಸ್ಮಾನ್ ಬೆಂಬಲಿಸಿ, ಬಿಜೆಪಿ ಸದಸ್ಯರಿಗೆ ಮಾತ್ರ ಅನುದಾನ ದೊರಕಿದ್ದು, ನನ್ನ ವಾರ್ಡ್‌ಗೆ ಹಣ ನೀಡಿಲ್ಲ ಎಂದು ಆರೋಪಿಸಿದರು. ಈ ವೇಳೆ ಸ್ಥಾಯಿಸಮಿತಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಧ್ಯಪ್ರವೇಶಿಸಿ, ಸಿಸಿಎಂಎಸ್ ಯೋಜನೆಯಡಿ ಬೀದಿದೀಪ ಒದಗಿಸಲಿದ್ದು ಸಮಸ್ಯೆ ಎದುರಾಗುವುದಿಲ್ಲ ಎಂದಾಗ, ಶಾಸಕರು ಪ್ರತಿಕ್ರಿಯಿಸಿ, ಅಗತ್ಯಬಿದ್ದರೆ ಡಿಸಿಯವರ ಗಮನಸೆಳೆದು ಅನುದಾನ ಮಂಜೂರು ಮಾಡಿಸುವುದಾಗಿ ಹೇಳಿದರು.
    ಸದಸ್ಯ ವಿ.ಎಲ್.ಬಾಬು ಮಾತನಾಡಿ, ಪಟ್ಟಣದಲ್ಲಿ 3900 ವಿದ್ಯುತ್ ಕಂಬಗಳಿದ್ದು , 1500 ಕಂಬಗಳನ್ನು ನಿರ್ವಹಣೆಗೊಳಿಸಿದ್ದು, ಉಳಿದ ಕಂಬಗಳಿಗೆ ವಿದ್ಯುತ್‌ದೀಪ ಅಳವಡಿಸಬೇಕಿದ್ದು, ಶಾಸಕರು ಅನುದಾನ ಒದಗಿಸುವಂತೆ ಕೋರಿದರು.

    ಸಾಮಾನ್ಯಸಭೆ: ಬಜೆಟ್ ನಂತರ ಸಾಮಾನ್ಯ ಸಭೆ ಜರುಗಿತು. ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಶಾಸಕರು ಸೂಚಿಸಿದರು. ಪಟ್ಟಣದ 11 ಆರ್‌ಒ ಪ್ಲಾಂಟ್‌ಗಳನ್ನು ಪುರಸಭೆ ಹಸ್ತಾಂತರಿಸಿಕೊಂಡು ಟೆಂಡರ್ ಕರೆಯುವಂತೆ, ಚರಂಡಿ ನೀರನ್ನು ವಿಜಯನಗರ ಕಾಲುವೆಗೆ ಬಿಡದಂತೆ ಸೂಕ್ತ ಕ್ರಮ ಕೈಗೊಳ್ಳಲು, ಕಬಡ್ಡಿ, ಶಟಲ್‌ಕಾಕ್ ಒಳಾಂಗಣ ನಿರ್ಮಾಣಕ್ಕೆ ಉದ್ಯಾನವನದ ಜಾಗ ಬಳಕೆ ಸೇರಿ ನಾನಾ ವಿಷಯ ಬಗ್ಗೆ ಚರ್ಚಿಸಲಾಯಿತು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್ ಹಾಗೂ ಸರ್ವ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts