More

    ಬಾಲ್ಯವಿವಾಹ ತಡೆಗೆ ಕಠಿಣಕ್ರಮ ಅಗತ್ಯ, ತಹಸೀಲ್ದಾರ್ ಗೌಸಿಯಾಬೇಗಂ ಹೇಳಿಕೆ

    ಕಂಪ್ಲಿ: ಬಾಲ್ಯವಿವಾಹ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಬುಧವಾರ ಬಾಲ್ಯವಿವಾಹ ತಡೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

    ಆಧಾರ್‌ಕಾರ್ಡ್ ವ್ಯಕ್ತಿ ಗುರುತಿನ ಪುರಾವೆಯಾಗಿದ್ದು, ವಯಸ್ಸಿನ ದಾಖಲೆಯಾಗದಿದ್ದರಿಂದ ಆರೋಗ್ಯ ಇಲಾಖೆಯಲ್ಲಿ ತಾಯಿಕಾರ್ಡ್ ನೀಡುವಾಗ ಜನ್ಮದಿನಕ್ಕಾಗಿ ಅಧಿಕೃತ ದಾಖಲೆ ಪಡೆದುಕೊಳ್ಳಬೇಕಿದೆ. ಬಾಲ್ಯವಿವಾಹ ನಿಷೇಧಾಧಿಕಾರಿಗಳು ಬಾಲ್ಯವಿವಾಹ ತಡೆಯಲು ವಿಫಲರಾದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ಬಾಲ್ಯವಿವಾಹ ತಡೆಯಲು ಪೊಲೀಸರು ಸುಮೋಟೋ ಪ್ರಕರಣ ದಾಖಲೆಗೆ ಮುಂದಾಗಬೇಕು. ಅಪ್ರಾಪ್ತರ ರಕ್ಷಣೆಗೆ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಪ್ರಾಮಾಣಿಕರಾಗಿ ಕರ್ತವ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಪಾಲಕರಿಲ್ಲದ 47ಮಕ್ಕಳಿಗೆ ರಕ್ಷಣೆ ಒದಗಿಸಲಾಗಿದೆ. ನಾನಾ ಕಾರಣಗಳಿಂದ 40 ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಣೆಯಾಗಿಲ್ಲ. ಇವನ್ನು ಕೊಡಿಸುವ ಯತ್ನ ಮುಂದುವರಿದಿದೆ ಎಂದರು.

    ಇದನ್ನೂ ಓದಿ: ಬಾಲ್ಯವಿವಾಹ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತದೆ : ನ್ಯಾಯಾಧೀಶ ಎನ್.ಆರ್.ಲೋಕಪ್ಪ ಕಳವಳ

    ಚೈಲ್ಡ್ ರೈಟ್ಸ್ ತಾಲೂಕು ಸಂಯೋಜಕರಾದ ನೇತ್ರಾ, ಚಿದಾನಂದ ಮಾತನಾಡಿ, ಬಾಲ್ಯವಿವಾಹಗಳ ಸಾಕ್ಷಿ ಕೊರತೆಯಿಂದ ಎಫ್‌ಐಆರ್ ದಾಖಲಿಸಲು ತೊಂದರೆಯಾಗುತ್ತಿದೆ. ಬಾಲ್ಯ ವಿವಾಹ ತಡೆಯಲು ಶಾಲಾ ಮುಖ್ಯಶಿಕ್ಷಕರು, ನಿಷೇಧಾಧಿಕಾರಿಗಳ ಸಹಕಾರ ದೊರಕುತ್ತಿಲ್ಲ ಎಂದು ಅಲವೊತ್ತುಕೊಂಡರು. ಪ್ರಸಕ್ತ ಸಾಲಿನಲ್ಲಿ 1098ಗೆ 24ಕರೆ ಬಂದಿದ್ದು ಇದರಲ್ಲಿ 11ಬಾಲ್ಯ ವಿವಾಹಕ್ಕೆ ಸಂಬಂಧಿಸಿವೆ.

    ಇದರಲ್ಲಿ ನಾಲ್ಕು ಬಾಲ್ಯ ವಿವಾಹ ಜರುಗಿದ್ದು, ಏಳನ್ನು ತಡೆಯಲಾಗಿದೆ. ಇಬ್ಬರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮೂವರನ್ನು ವಸತಿ ನಿಲಯಕ್ಕೆ ಸೇರಿಸಿದೆ. ಒಂದು ಮಗುವಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ತಾಪಂ ಎಡಿಎ ಕೆ.ಎಸ್.ಮಲ್ಲನಗೌಡ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ತಿಪ್ಪೇಶಪ್ಪ, ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್, ಸಿಡಿಪಿಒ ಮೋಹನ್ ಎಸ್.ಕಾಳಾಪುರ, ಅಧಿಕಾರಿಗಳಾದ ಲತೀಫಾಬೇಗಂ, ಪಿ.ಬಸವರಾಜ್, ಜಿ.ವೀರೇಶ್, ಎಸ್.ಡಿ.ರಮೇಶ್, ನವಜೀವನ ಸಂಸ್ಥೆಯ ಸಂಯೋಜಕಿ ಹುಲಿಗೆಮ್ಮ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts