More

    ಕಂಬಳ ಓಟಗಾರರ ಸಾಮರ್ಥ್ಯ ಗುರುತಿಸಿದ ಸಾಯ್

    ಮಂಗಳೂರು: ಕಂಬಳ ಓಟಗಾರರಲ್ಲಿ ವೇಗವಾಗಿ ಓಡುವ ಸಾಮರ್ಥ್ಯ ಇರುವುದನ್ನು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಗುರುತಿಸಿದ್ದು, ಸೂಕ್ತ ತರಬೇತಿ ಬಳಿಕ ಟ್ರಯಲ್ ನಡೆಸಬೇಕೆಂಬ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ.
    ಶನಿವಾರ ಮತ್ತು ಭಾನುವಾರ ಪೈವಳಿಕೆ ಬೋಳಂಗಳ ಅಣ್ಣತಮ್ಮ ಜೋಡುಕರೆ ಕಂಬಳವನ್ನು ಸಾಯ್ ದಕ್ಷಿಣ ಭಾರತ ನಿರ್ದೇಶಕ ಅಜಯ್ ಕುಮಾರ್ ಬೆಹಲ್, ಕೋಚ್‌ಗಳಾದ ಕುರಿಯನ್ ಪಿ. ಮ್ಯಾಥ್ಯೂ ಮತ್ತು ಹರೀಶ್ ವೀಕ್ಷಿಸಿದ್ದಾರೆ. 39 ಪದಕಗಳೊಂದಿಗೆ ದಾಖಲೆ ಮಾಡಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಸಹಿತ ಎಲ್ಲ ಓಟಗಾರರ ಓಟವನ್ನು ಮೆಚ್ಚಿ, ಟ್ರಾೃಕ್‌ನಲ್ಲೂ ವೇಗವಾಗಿ ಓಡಬಹುದಾದ ಸಮರ್ಥ ಓಟಗಾರರು ಲಭಿಸಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೂ ಮೊದಲು ಸೂಕ್ತ ತರಬೇತಿ, ಮಾರ್ಗದರ್ಶನ ಬೇಕೆಂಬುದನ್ನು ಮನಗಂಡಿದ್ದಾರೆ.

    ಪ್ರಾಥಮಿಕ ತರಬೇತಿ: ವೇಗದ ಓಟಗಾರನೆಂಬ ದಾಖಲೆ ನಿರ್ಮಿಸಿದ ಶ್ರೀನಿವಾಸ ಗೌಡರಿಗೆ ಟ್ರಯಲ್ ನಡೆಸುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸಾಯ್ ಅಧಿಕಾರಿಗಳಿಗೆ ಸೂಚಿಸಿದಂತೆ ಭೇಟಿ ನೀಡಿದ್ದ ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ನೇತೃತ್ವದ ತಂಡ, ತಕ್ಷಣಕ್ಕೆ ಭಾಗವಹಿಸುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಮಾರ್ಚ್ 7ರಂದು ಕೊನೆಯ ಕಂಬಳ ನಡೆಯಲಿದ್ದು, ಅದುವರೆಗೆ ಭಾಗವಹಿಸಲಾಗದು. ಬಳಿಕ ಕೆಲಕಾಲ ವಿಶ್ರಾಂತಿ ಪಡೆಯಬೇಕಿದೆ. ನಂತರ ಪ್ರಾಥಮಿಕ ತರಬೇತಿ ನೀಡಿ ಶ್ರೀನಿವಾಸ ಗೌಡರಿಗೆ ಟ್ರಯಲ್ಸ್ ನಡೆಸಬಹುದು ಎಂದು ತಿಳಿಸಿದ್ದರು.

    ಸಾಯ್ ಅಧಿಕಾರಿಗಳು ಪೈವಳಿಕೆ ಕಂಬಳ ವೀಕ್ಷಿಸಿದ ಬಳಿಕ ಓಟಗಾರರ ಮೇಲೆ ಅವರಿಗೆ ಭರವಸೆ ಮೂಡಿದೆ. ಅದರಂತೆ ನಾವು ಮೂಡುಬಿದಿರೆ ಆಳ್ವಾಸ್‌ನಲ್ಲಿರುವ ಸಿಂಥೆಟಿಕ್ ಟ್ರಾೃಕ್‌ನಲ್ಲಿ ಮಾರ್ಚ್ ಬಳಿಕ ಸೂಕ್ತ ತರಬೇತಿ ನೀಡಿ, ಮೇ ಹೊತ್ತಿಗೆ ಬೆಂಗಳೂರಿನಲ್ಲಿ ಟ್ರಯಲ್ಸ್ ನಡೆಸುವಂತೆ ಮನವಿ ಮಾಡಿದ್ದೇವೆ. ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಮಟ್ಟದ ಕೋಚ್‌ಗಳಿದ್ದಾರೆ, ಅಥವಾ ಸಾಯ್ ಕೋಚ್‌ಗಳನ್ನೇ ಕರೆಸಬಹುದು ಎಂದು ಕಡಂಬ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
    ಅಭಿಷೇಕ್ ಪಾವಂಜೆ, ಕಡಂದಲೆ ನಿತೀಶ್ ಶೆಟ್ಟಿ, ಪೆರ್ನೆ ನಜೀರ್, ನಿಶಾಂತ್ ಶೆಟ್ಟಿ ಬಜಗೋಳಿ ಮುಂತಾದ ಯುವ ಓಟಗಾರರು ಕಂಬಳದಲ್ಲಿದ್ದಾರೆ. ಆನಂದ ಇರ್ವತ್ತೂರು, ಹಕ್ಕೇರಿ ಸುರೇಶ್ ಶೆಟ್ಟಿಯಂಥ ಹಿರಿಯ ಓಟಗಾರರೂ ಇದ್ದಾರೆ. ಎಲ್ಲರನ್ನೂ ಸಿಂಥೆಟಿಕ್ ಟ್ರಾೃಕ್ ತರಬೇತಿಗೆ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ.

    ಸೋಲು- ಗೆಲುವಿನ ಬಗ್ಗೆ ಚಿಂತಿಸದೆ ಪ್ರಾಮಾಣಿಕ ಪ್ರಯತ್ನದಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಕಂಬಳ ಕ್ರೀಡೆಗೂ ಒಳ್ಳೆಯ ಕಾಲ ಹಾಗೂ ಒಂದು ಯೋಗ ಬಂದಿದೆ. ಗೆಲುವು ಬಂದಾಗ ಹಿಗ್ಗದೆ, ಸೋಲು ಬಂದಾಗ ಕುಗ್ಗದೆ ಸಮತೋಲನದಲ್ಲಿರಬೇಕು. ಸ್ಥಿಮಿತ ಕಳೆದುಕೊಳ್ಳಬಾರದು.
    – ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

    ನಮ್ಮ ಶ್ರೀನಿವಾಸ ಗೌಡ ಬೂಟು ಧರಿಸಿದವರೇ ಅಲ್ಲ. ಓಟಕ್ಕೂ ಮೊದಲು ಗ್ರೌಂಡ್ ಪ್ರಾಕ್ಟೀಸ್ ಬೇಕು. ಮಾನಸಿಕ ಮತ್ತು ದೈಹಿಕವಾಗಿ ಫಿಟ್ ಆಗಬೇಕಿದೆ. ಇಂಥ ಪ್ರಾಥಮಿಕ ತರಬೇತಿ ಟ್ರಯಲ್ಸ್‌ಗೂ ಮೊದಲು ನಡೆಸಬೇಕು. ಇದು ಶ್ರೀನಿವಾಸ ಗೌಡರಿಗೆ ಮಾತ್ರವಲ್ಲ, ಇತರ ಕಂಬಳ ಓಟಗಾರರೂ ಭಾಗವಹಿಸಬಹುದು. ಕಂಬಳ ಓಟಗಾರರಲ್ಲದವರು ಭಾಗವಹಿಸುವ ಕುರಿತೂ ಆಹ್ವಾನಿಸುವ ಚಿಂತನೆ ಇದೆ.
    – ಗುಣಪಾಲ ಕಡಂಬ, ಸಂಚಾಲಕ, ಕಂಬಳ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts