More

    ಕಂಬಳದ ಶ್ರೀನಿವಾಸ ಗೌಡರಿಗೆ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ ಲಕ್ಷ ರೂ. ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಕಂಬಳ ಕ್ರೀಡೆಯಲ್ಲಿ ದಾಖಲೆ ವೇಗದಲ್ಲಿ ಓಡಿ ಭಾರತದ ಉಸೇನ್ ಬೋಲ್ಟ್ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಶ್ರೀನಿವಾಸಗೌಡ ಅವರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ 1 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ.

    ಕಂಬಳ ಕ್ರೀಡೆಯಲ್ಲಿ ಅತಿ ವೇಗವಾಗಿ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ ಶ್ರೀನಿವಾಸಗೌಡ ಅವರನ್ನು ನಗರದಲ್ಲಿ ಸೋಮವಾರ ಅಭಿನಂದಿಸಿದ ಬಳಿಕ ಉಪಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.

    “ಶ್ರೀನಿವಾಸಗೌಡ ಅವರು ತಮ್ಮ ಪ್ರತಿಭೆ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಕಂಬಳ ಬೇಕು-ಬೇಡ ಎನ್ನುವವರು, ಅದಕ್ಕೆ ಅಡಚಣೆ ಉಂಟುಮಾಡುವವರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಅವರನ್ನು ಪ್ರೋತ್ಸಾಹಿಸುವುದರ ಜತೆಗೆ ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುವವರನ್ನು ಹುರಿದುಂಬಿಸುವ ಉದ್ದೇಶದಿಂದ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ 1 ಲಕ್ಷ ರೂ. ಅಲ್ಪ ಕಾಣಿಕೆ ನೀಡುವುದಾಗಿ” ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

    “ಮಣ್ಣಿನ ನೆಲ, ಸಿಂಥೆಟಿಕ್ ಟ್ರಾಕ್ ನಲ್ಲೇ ಓಡಿ ದಾಖಲೆ ಮಾಡುವುದು ಕಷ್ಟ. ಅಂತಹದ್ದರಲ್ಲಿ ಶ್ರೀನಿವಾಸ ಗೌಡ ಅವರು ಕೆಸರು ಗದ್ದೆಯಲ್ಲಿ ಓಡಿ 100 ಮೀಟರ್ ಓಟದಲ್ಲಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯೇನೂ ಅಲ್ಲ. ಕ್ರೀಡೆಯಲ್ಲಿ ನಮ್ಮವರು ಸಮರ್ಥರಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಅವರಲ್ಲಿರುವ ಪ್ರತಿಭೆ ಇನ್ನಷ್ಟು ಅರಳಲಿ. ಕರಾವಳಿಯ ನಾಗರಿಕರ ಪ್ರೋತ್ಸಾಹ, ಸಹಕಾರದಿಂದ ಆ ಭಾಗದ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ಇಂದು ದೇಶದ ಗಮನ ಸೆಳೆದಿದೆ. ಇದರೊಂದಿಗೆ ಶ್ರೀನಿವಾಸಗೌಡ ಅವರ ಸಾಧನೆಯಿಂದಾಗಿ ಅದು ಇಡೀ ವಿಶ್ವದ ಗಮನ ಸೆಳೆದಿದೆ. ಕಂಬಳದಲ್ಲಿ ಕೋಣಗಳನ್ನು ಓಡಿಸುವ ತರಬೇತಿ ನೀಡಲೆಂದೇ ಅಕಾಡೆಮಿ ಮಾಡಿಕೊಂಡಿದ್ದಾರೆ ಎಂಬುದನ್ನು ಕೇಳಿ ಸಂತಸವಾಯಿತು. ಇಂತಹ ಅದ್ಭುತ ವ್ಯವಸ್ಥೆಗಳಿಂದಲೇ ಸಾಂಸ್ಕೃತಿವಾಗಿ ನಮ್ಮತನವನ್ನು ಕಂಬಳ ಕ್ರೀಡೆ ಮೂಲಕ ಕಾಣುವಂತಾಗಿದೆ,” ಎಂದರು.

    “ತಮ್ಮ ಊರಿನ ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳ ಕ್ರೀಡೆ ಬಗ್ಗೆ ಜನ ಆಸಕ್ತಿ ತೋರಿ ಆದ್ಯತೆ ನೀಡುತ್ತಿರುವುದು ಇತರ ಭಾಗದ ಜನರಿಗೂ ಪ್ರೇರಣೆಯಾಗಿದೆ. ಕೋಣಗಳ ಮಾಲೀಕರು ಕೋಟ್ಯಂತರ ರೂ. ವೆಚ್ಚ ಮಾಡಿ ಅವುಗಳನ್ನು ಸಾಕಿ ಕಂಬಳಕ್ಕೆ ಸಿದ್ಧಪಡಿಸುವ ಮೂಲಕ ಈ ಕ್ರೀಡೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಕಂಬಳ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಿದ್ದು, ಈಗಾಗಲೇ ಹಲವು ಬಾರಿ ಕಂಬಳ ವೀಕ್ಷಿಸಿರುವ ಮುಖ್ಯಮಂತ್ರಿಗಳು, ಅದರ ಅಭಿವೃದ್ಧಿಗೆ ಪೂರ್ಣ ಬೆಂಬಲ ನೀಡಲು ಬದ್ಧರಾಗಿದ್ದಾರೆ. ಆ ಮೂಲಕ ಕರಾವಳಿ ಸಂಸ್ಕೃತಿಯ ದ್ಯೋತಕವಾಗಿರುವ ಕಂಬಳ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ” ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts