More

    ಲೋಕ ಅಭ್ಯರ್ಥಿ ಗೆಲ್ಲಿಸಲು ಕಮಲ ಪಡೆ ಸಂಕಲ್ಪ

    ಬಾಗಲಕೋಟೆ: ಭಾರತೀಯರ ಆರಾಧ್ಯ ಪ್ರಭು ಶ್ರೀರಾಮನ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಹಾಗೂ ಬಿಜೆಪಿಯ ಭೀಷ್ಮ, ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದಕ್ಕಾಗಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು.

    ನವನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ರೈತ, ದಲಿತ ವಿರೋಧ ನೀತಿ ಕುರಿತು ಖಂಡನಾ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

    ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟಿ ಹಾಗೂ ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಬಾಗಲಕೋಟೆ ಜಿಲ್ಲೆಯ ಮಂಡಲಗಳ ಪದಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಿತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲು ಕಮಲ ಪಡೆ ಸಂಕಲ್ಪ ಮಾಡಿತು.

    ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ನಾಯಕತ್ವಕ್ಕಾಗಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವುದು ನಿಶ್ಚಿತ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಹೊಸ ಭಾರತಕ್ಕೆ ದಿಕ್ಸೂಚಿ ತೋರಿಸಿದ್ದಾರೆ. ಅನ್ನದಾತರು, ಮಹಿಳೆಯರು, ಯುವಕರು, ಕೂಲಿ ಕಾರ್ಮಿಕರ ವಿಭಾಗಗಳನ್ನು ಮಾಡಿ ಅವರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಭಾರತ ವಿಶ್ವಗುರುವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ. ಹೀಗಾಗಿ ಮೋದಿ ಅವರು ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆ 400 ಸಂಸತ್ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.

    ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, 2ನೇ ಸಲ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು. ಬಾಗಲಕೋಟೆ ಕ್ಷೇತ್ರ ಬಿಜೆಪಿ ಭದ್ರಕೋಟೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಇದು ದೇಶದ ಜನರ ಒಕ್ಕೊರಲ ಆಸೆಯಾಗಿದೆ. ಕೇಂದ್ರದಲ್ಲಿ ಕಮಲ ಪಕ್ಷದ ಆಡಳಿತ ಇದ್ದರೆ ಅಭಿವೃದ್ಧಿ ಸಾಧ್ಯ ಎಂದು ನಂಬಿಕೆ ಜನರದ್ದಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಃಸಿದ್ಧ ಎಂದರು. ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ರಾಜಶೇಖರ ಶಿಲವಂತ, ಬೆಳಗಾವಿ ವಿಭಾಗದ ಸಹಪ್ರಭಾರಿ ಬಸವರಾಜ ಯಂಕಂಚಿ ಇದ್ದರು. ಇದೇ ವೇಳೆ ಲೋಕಸಭಾ ಚುನಾವಣಾ ಕಾರ್ಯಾಲಯ ಪ್ರಾರಂಭಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts