More

    ಬಹುಮತ ಸಾಬೀತಿಗೂ ಮುನ್ನವೇ ಸಿಎಂ ಸ್ಥಾನಕ್ಕೆ ಕಮಲ್​ನಾಥ್​ ರಾಜೀನಾಮೆ: ಮತ್ತೆ ಅಧಿಕಾರ ಹಿಡಿಯುವತ್ತ ಬಿಜೆಪಿ ಹೆಜ್ಜೆ

    ಭೋಪಾಲ್​​: ವಿಶ್ವಾಸಮತ ಯಾಚನೆಯ ಸೋಲಿನಿಂದಾಗುವ ಮುಖಭಂಗವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಬಹುಮತ ಸಾಬೀತಿಗೂ ಮುನ್ನವೇ ಸಿಎಂ ಕಮಲ್​ನಾಥ್​ ರಾಜೀನಾಮೆ ನೀಡಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

    ಕಾಂಗ್ರೆಸ್​ಗೆ ಕರ್ನಾಟಕದಲ್ಲಿ ಎದುರಾದ ಸ್ಥಿತಿಯೂ ಮಧ್ಯಪ್ರದೇಶದಲ್ಲಿ ಮತ್ತೊಮ್ಮೆ ಎದುರಾಗಿದ್ದು, ಶಾಸಕರ ರಾಜೀನಾಮೆಯಿಂದಾಗಿ ಅಧಿಕಾರವನ್ನು ಕಳೆದುಕೊಳ್ಳುವಂತಾಗಿದೆ.

    ಗುರುವಾರ ಸುಪ್ರೀಂಕೋರ್ಟ್​ ನೀಡಿದ್ದ ಆದೇಶದ ಅನ್ವಯ ಸಿಎಂ ಕಮಲ್​ನಾಥ್​ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸದನ ಪರೀಕ್ಷೆಗೂ ಮುನ್ನವೇ ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಕಮಲ್​ನಾಥ್​ ರಾಜೀನಾಮೆ ನಿರ್ಧಾರವನ್ನು ಘೋಷಿಸಿದರು.

    ಇದಕ್ಕೂ ಮುನ್ನ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು ಬಿಜೆಪಿಯು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿದರು. ಶಾಸಕರನ್ನು ಬೆಂಗಳೂರಿನಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದರ ಘಟನೆ ಹಿಂದಿನ ಸತ್ಯ ಏನೆಂಬುದನ್ನು ದೇಶದ ಜನತೆ ನೋಡಿದ್ದಾರೆ. ಸತ್ಯ ಹೊರಬರಲೇಬೇಕು. ಜನರು ಅಂಥವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ಶಾಸಕರಿಬ್ಬರ ಸಾವು ಹಾಗೂ 22 ಬಂಡಾಯ ಶಾಸಕರ ರಾಜೀನಾಮೆಯಿಂದ ಸದನ ಬಲ 206ಕ್ಕೆ ಕುಸಿದಿತ್ತು. ಕಮಲ್​ನಾಥ್​ ಸರ್ಕಾರದ ಬಹುಮತ ಸಾಬೀತಿಗೆ 104 ಸ್ಥಾನಗಳ ಅವಶ್ಯಕತೆ ಇತ್ತು. ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ್ದ ಬಿಎಸ್​ಪಿ(2), ಎಸ್​ಪಿ(1) ಮತ್ತು ಪಕ್ಷೇತರ(4) ಶಾಸಕರು ಈಗಲೂ ಕಾಂಗ್ರೆಸ್​ಗೆ ಬೆಂಬಲ ನೀಡಿದರೂ ಸಹ ಬಹುಮತ ಸಾಬೀತುಪಡಿಸವಲ್ಲಿ ಕಾಂಗ್ರೆಸ್​ಗೆ ಕಷ್ಟವಾಗುತ್ತಿತ್ತು. ಹೀಗಾಗಿ ಸದನದಲ್ಲಿ ಎದುರಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಕಮಲ್​ನಾಥ್​ ರಾಜೀನಾಮೆ ನೀಡಿದ್ದಾರೆ. ಇತ್ತ 107 ಸ್ಥಾನವನ್ನು ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯುವತ್ತ ಗೆಲುವಿನ ನಗೆ ಬೀರಿದೆ. (ಏಜೆನ್ಸೀಸ್​)

    ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: 16 ಶಾಸಕರ ರಾಜೀನಾಮೆ ಅಂಗೀಕಾರದಿಂದ ಸಿಎಂ ಕಮಲ್​ನಾಥ್​ಗೆ ಮತ್ತಷ್ಟು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts