More

    ಕಲ್ಪತರು 251: ಅದ್ವಿತೀಯಗುರುಗಳ ದ್ವಿತೀಯ ಮಂತ್ರಾಲಯ

    ಕಲ್ಪತರು 251: ಅದ್ವಿತೀಯಗುರುಗಳ ದ್ವಿತೀಯ ಮಂತ್ರಾಲಯದಾವಣಗೆರೆ ಜಿಲ್ಲೆಗೆ ಸೇರಿದ ಐತಿಹಾಸಿಕ ನಗರೀ ಹೊನ್ನಾಳಿ. ಇಲ್ಲಿರುವ ಶ್ರೀ ರಾಘವೇಂದ್ರತೀರ್ಥರ ದಿವ್ಯಸನ್ನಿಧಾನದಿಂದ ಇದು ‘ದ್ವಿತೀಯ ಮಂತ್ರಾಲಯ’ ಎಂದೇ ಪ್ರಥಿತವಾಗಿದೆ. ತಮ್ಮ ಅಂತರಂಗಭಕ್ತ ಶ್ರೀನಿವಾಸಾಚಾರ್ಯ ಬಿದರಹಳ್ಳಿಯವರನ್ನು ಅಗಲಿರಲಾರದ ಗುರುರಾಯರು ತುಂಗಭದ್ರೆಯ ತೀರದಲ್ಲಿ ಆಚಾರ್ಯರಿಗೆ ಅಭಿಮುಖವಾಗಿ ನೆಲೆನಿಂತರೆಂದು ಅನೇಕ ಸಂಶೋಧಕರ, ಭಕ್ತರ ಅಭಿಪ್ರಾಯ. ವಸ್ತುತಃ ರಾಯರು ಮಂಚಾಲೆಯಲ್ಲಿ ವೃಂದಾವನ ಪ್ರವೇಶಿಸಿದ ಎರಡೇ ವರ್ಷಗಳೊಳಗೆ ಇಲ್ಲಿಗೆ ರೂಪಾಂತರದಿಂದ ಬಂದು ನೆಲೆಸಿದರೆಂದು ಇಂದಿಗೂ ಅಲ್ಲಿನ ಗ್ರಾಮಸ್ಥರ ನಂಬುಗೆ. ಇದು ನಿಜವಾದರೆ ಮಂತ್ರಾಲಯ, ಬಿಚ್ಚಾಲೆಯ ತರುವಾಯ ಕಾಣಸಿಗುವ ರಾಯರ ಮೊದಲ ಪ್ರತಿಷ್ಠಾಪಿತ ಬೃಂದಾವನ ಹೊನ್ನಾಳಿಯದ್ದೇ ಆಗುತ್ತದೆ. ಗುರುರಾಯರು ಇಲ್ಲಿಗೆ ಧಾವಿಸಿ ಬಂದ ಕಥೆ ಬಹಳ ರೋಚಕ.

    ಒಮ್ಮೆ ಹೊನ್ನಾಳಿಯ ಅಗ್ರಹಾರದ ರಾಮಾಚಾರ್ಯ ಎಂಬ ಗುರುಭಕ್ತರಿಗೆ ಶ್ರೀರಾಘವೇಂದ್ರತೀರ್ಥರು ಕನಸಿನಲ್ಲಿ ಬಂದು, ‘ನಾನು ನಿಮ್ಮ ಊರಿಗೆ ತುಂಗಭದ್ರೆಯ ತೀರದಿ ಬಂದು ನೆಲೆಸುವೆ’ ಎಂದು ಆಶೀರ್ವದಿಸಿದರು. ಇದರಿಂದ ಪ್ರೇರಿತರಾದ ರಾಮಾಚಾರ್ಯರು ತಮ್ಮ ಶಿಷ್ಯಮಂಡಲಿಯೊಂದನ್ನು ಮಂಚಾಲೆಗೆ ಕಳುಹಿಸಿ ಅಲ್ಲಿಂದ ಗುರುರಾಯರ ಮೃತ್ತಿಕೆಯನ್ನು ಬೇಡಿತರಲು ಆದೇಶಿಸಿದರು. ಇತ್ತ ಹೊನ್ನಾಳಿಯಲ್ಲಿ ನಿಗದಿತ ದಿನಾಂಕದಂದು ರಾಮಾಚಾರ್ಯರು ತಮ್ಮ ಪರಿವಾರ ಹಾಗೂ ಗುರುರಾಯರ ಭಕ್ತರೊಂದಿಗೆ ತುಂಗಭದ್ರೆಯ ತೀರದಲ್ಲಿ ರಾಯರ ಮೃತ್ತಿಕೆಗಾಗಿ ಕಾಯುತ್ತಿದ್ದರು.

    ಅಂದಿನ ಕಾಲದಲ್ಲಿ ಮೃತ್ತಿಕಾದಿಗಳನ್ನು ಶ್ರದ್ಧಾಭಕ್ತಿಗಳಿಂದ ನಡೆದೇ ತರಬೇಕಾಗಿದ್ದ ಕಾರಣ ಮೃತ್ತಿಕೆಯು ಸಕಾಲಕ್ಕೆ ಹೊನ್ನಾಳಿಯನ್ನು ತಲುಪಲಿಲ್ಲ. ಬೃಂದಾವನ ಪ್ರತಿಷ್ಠಾಪನಾದಿನವೂ ರಾಮಾಚಾರ್ಯರ ಕನಸಿನಲ್ಲಿ ಗುರುರಾಯರಿಂದಲೇ ನಿಗದಿಯಾಗಿದ್ದ ಕಾರಣ ಭಕ್ತರು ಸ್ವಲ್ಪ ಆತಂಕಕ್ಕೊಳಗಾಗಿದ್ದರು.

    ಆಗ ಕಾವಿಬಟ್ಟೆ ಧರಿಸಿದ್ದ ವೃದ್ಧ ಯೋಗಿಯೊಬ್ಬರು ಪ್ರತಿಷ್ಠಾಪನಾಸ್ಥಳಕ್ಕೆ ಬಂದರು. ಬಂದವರೇ ನೆರೆದವರನ್ನು ಸಮಾಧಾನಪಡಿಸುತ್ತ ಬೃಂದಾವನ ಪ್ರತಿಷ್ಠಾಪೂರ್ವದಲ್ಲಿ ಮಾಡಬೇಕಾದ ಸ್ಥಳ ಶುದ್ಧ್ಯಾದಿಗಳನ್ನು ನಾನೇ ಮಾಡುತ್ತೇನೆಂದು ಗರ್ಭಗುಡಿಯನ್ನು ಪ್ರವೇಶಿಸಿದರು. ಆದರೆ ಬಹಳ ಹೊತ್ತಾದರೂ ಬಾಗಿಲು ತೆರೆದುಕೊಳ್ಳದಿರಲು ರಾಮಾಚಾರ್ಯರು ಸ್ವಯಂ ಅದರ ಕದ ತೆರೆದು ಪ್ರವೇಶಿಸಲು ಅವರಿಗೆ ಮಹದಾಶ್ಚರ್ಯವೇ ಕಾದಿತ್ತು. ಅಲ್ಲಿ ಯಾರೂ ಇರಲಿಲ್ಲ. ವೃಂದಾವನ ಆಗಲೇ ಮುಚ್ಚಳಿಕೆಯೊಂದಿಗೆ ಪ್ರತಿಷ್ಠಾಪನೆಗೊಂಡಿತ್ತು. ಗರ್ಭಗುಡಿಯಿಂದ ಹೊರಹೋಗಲು ಬೇರೆ ದಾರಿಯೂ ಇಲ್ಲ. ಒಳಬಂದ ಸಂನ್ಯಾಸಿಗಳು ಅಲ್ಲಿರದಿದ್ದರೂ ಒಂದು ಹಿತ್ತಾಳೆ ತಟ್ಟೆಯ ತುಂಬ ಮಂತ್ರಾಕ್ಷತೆ, ಒಂದು ನರಸಿಂಹ ಸಾಲಿಗ್ರಾಮ ಹಾಗೂ ಪ್ರಾಣದೇವರ ವಿಗ್ರಹ ಮಾತ್ರ ಬೃಂದಾವನದ ಮೇಲಿತ್ತು. ಇದಾವುದೂ ಸಂನ್ಯಾಸಿಗಳ ಗರ್ಭಗುಡಿ ಪ್ರವೇಶಕ್ಕೆ ಮುನ್ನ ಅಲ್ಲಿರಲಿಲ್ಲ.

    ಆಗ ಎಲ್ಲರಿಗೂ ಮನವರಿಕೆಯಾದದ್ದು ಇಷ್ಟೇ – ‘ಸಾಕ್ಷಾತ್ ಗುರುರಾಯರೇ ಸಾಮಾನ್ಯ ಸಂನ್ಯಾಸಿಯಂತೆ ಬಂದಿರುವರು. ತಾವೇ ನಿಶ್ಚಯಿಸಿದ ಮುಹೂರ್ತಕ್ಕೆ ಸರಿಯಾಗಿ ರಾಯರು ಬೃಂದಾವನ ಪ್ರವೇಶಿಸಿದ್ದಾರೆ’ ಎಂದು. ಇಂದು ಹೊನ್ನಾಳಿಯಲ್ಲಿರುವ ಗುರುರಾಯರ ವೃಂದಾವನದ ಶಿಲೆಯನ್ನು ತಂದುಕೊಟ್ಟವರು ಅಲ್ಲಿಯೇ ಎರಡು ಕಿ.ಮಿ. ದೂರದಲ್ಲಿರುವ ಪಂಚಪೀಠದ ಶಾಖಾಮಠದ ಹಿರೇಕಲ್ ಮಠದವರು. ರಾಯರ ವೃಂದಾವನದ ಶಿಲೆಯು ಆ ಹಿರೇಕಲ್ ಮಠದ ಬಾವಿಯಲ್ಲಿತ್ತು. ಸ್ವಯಂ ರಾಯರೇ ಅಲ್ಲಿನ ಸ್ವಾಮಿಗಳ ಕನಸಿನಲ್ಲಿ ಕಾಣಿಸಿಕೊಂಡು ಆ ಶಿಲೆಯನ್ನು ಕಳುಹಿಸಿಕೊಡಲು ಆದೇಶಿಸಿದ್ದರಂತೆ.

    ತುಂಗೆ-ಭದ್ರೆ ಇವರಿಬ್ಬರೂ ಕೂಡ್ಲಿ ಗ್ರಾಮದಲ್ಲಿ ಜೊತೆಗೂಡಿ ರಾಯರ ಸಪರ್ಯೆಗೆ ಹೊನ್ನಾಳಿಯತ್ತ ಧಾವಿಸಿ ಹರಿದುಬರುವರು. ಬಿದರಹಳ್ಳಿಯ ಶ್ರೀನಿವಾಸಾಚಾರ್ಯರು ಗುರುರಾಯರ ವಿಶೇಷಪ್ರೇಮಕ್ಕೆ ಪಾತ್ರರಾಗಿ ಅವರಿಂದ ‘ತೀರ್ಥ’ ಎಂಬ ಬಿರುದನ್ನು ಪಡೆದವರು. ಅವರು ಪಾಂಚಭೌತಿಕಶರೀರವನ್ನು ತ್ಯಾಗಮಾಡಿದ್ದು ಕ್ರಿ.ಶ. 1673ರಲ್ಲಿ, ಅಂದರೆ ರಾಯರು ಮಂಚಾಲೆಯಲ್ಲಿ ವೃಂದಾವನ ಪ್ರವೇಶಿಸಿದ ಎರಡು ವರ್ಷಗಳ ಬಳಿಕ.

    ಮೊದಲು ಬಿದರಹಳ್ಳಿಯಲ್ಲಿದ್ದ ಶ್ರೀನಿವಾಸಾಚಾರ್ಯರು ತರುವಾಯ ಹರಿಹರಕ್ಕೆ ಬಂದು ಅಲ್ಲಿಂದ ಹೊನ್ನಾಳಿಗೆ ಬಂದು ಸುಮಾರು ಎಂಟು ವರ್ಷಗಳ ಕಾಲ ತಮ್ಮ ನಿರ್ಯಾಣಕ್ಕೂ ಪೂರ್ವದಲ್ಲಿ ಅಲ್ಲಿ ನೆಲೆಸಿದ್ದರು. ಈಗ ಹೊನ್ನಾಳಿಯ ರಾಯರ ಮಠವಿರುವ ಅಗ್ರಹಾರದಲ್ಲಿ ಅಂದು 600ಕ್ಕೂ ಮಿಗಿಲಾದ ವೇದವಿದ್ವಾಂಸರ ಮನೆಗಳಿದ್ದವಂತೆ. ತಮ್ಮ ದಿವ್ಯದೃಷ್ಟಿಯಿಂದ ಮಾಂಸ ಮಾರುವವನೊಬ್ಬನ ಬಳಿಯಲ್ಲಿದ್ದ ಅನಂತಪದ್ಮನಾಭದೇವರ ಸಾಲಿಗ್ರಾಮವನ್ನು ಪಡೆಯಲು ಶ್ರೀನಿವಾಸಾಚಾರ್ಯರು ವಸ್ತುತಃ ಹೊನ್ನಾಳಿಗೆ ಬಂದದ್ದಂತೆ.

    ಇಲ್ಲಿನ ಸಂತೆಮೈದಾನದಲ್ಲಿ ವ್ಯಾಸರಾಜಪ್ರತಿಷ್ಠಿತ ಪ್ರಾಣದೇವರನ್ನು, ವಿಜಯೀಂದ್ರತೀರ್ಥಪ್ರತಿಷ್ಠಿತ ಶ್ರೀನಿವಾಸದೇವರನ್ನೂ ಕಾಣಬಹುದು. ಹಿಂದೆ ಪುರಂದರದಾಸರೂ ಇಲ್ಲಿಗೆ ಬಂದಾಗ ‘ಕಂಡು ಕಂಡು ನೀ ಎನ್ನ ಕೈಬಿಡುವುದೇ ಕೃಷ್ಣ… ಹೊನ್ನೂರ ಪುರವಾಸ’ ಎಂದು ಸ್ತುತಿಸಿದ್ದರಂತೆ. ಆ ಕೇಶವನ ವಿಗ್ರಹವೇ ಇಂದು ರಾಯರ ಮಠದ ಪ್ರಾಕಾರದಲ್ಲಿ ಸ್ಥಾಪಿತವಾಗಿದೆ. ಶ್ರೀಯಾದವಾರ್ಯ ಕರಾರ್ಚಿತ ಪ್ರಾಣದೇವರನ್ನೂ ಶ್ರೀನಿವಾಸತೀರ್ಥರ ತಪೋಭೂಮಿಯಲ್ಲಿ ಕಾಣಬಹುದು.

    ಅಂತೂ ಇಂತಹ ಭೂಭಾಗಕ್ಕೆ ಸಾಕ್ಷಾತ್ ರಾಯರೇ ಬಂದು ನೆಲೆಸಿ ಮಂಚಾಲೆಯಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಭಕ್ತರನ್ನು ಸಲಹುತ್ತಿದ್ದಾರೆ.

    (ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts