More

    ಪಶ್ಚಿಮಘಟ್ಟದ ಕಳಿಂಗ ಕಪ್ಪೆ ಬಗ್ಗೆ ನಿಮಗೆಷ್ಟು ಗೊತ್ತು?

    ಶಿರಸಿ: ಭಾರತದ ಪೂರ್ವ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆಂದು ನಂಬಲಾಗಿದ್ದ ಕಳಿಂಗ ಕಪ್ಪೆ ಇದೀಗ ಪಶ್ಚಿಮಘಟ್ಟ ಪ್ರದೇಶದಲ್ಲಿ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ, ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗೂ ತಂಡ ಪತ್ತೆ ಕಾರ್ಯ ನಡೆಸಿದೆ.

    ಕವಿವಿ ಧಾರವಾಡದ ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ಪಿ.ಎಚ್​ಡಿ ಮಾಡುತ್ತಿದ್ದು, ಪ್ರೊ.ಗಿರೀಶ ಕಾಡದೇವರು ಅವರ ಮಾರ್ಗದರ್ಶನ ಹಾಗೂ ಪುಣೆಯ ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿ ಕೆ.ಪಿ. ದಿನೇಶ ಸಹಯೋಗದಲ್ಲಿ ಈ ಕಪ್ಪೆಯನ್ನು ಪತ್ತೆ ಹಚ್ಚಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕಂಡ ಕಳಿಂಗ ಕಪ್ಪೆ ಕೇವಲ ಶ್ರೇಣಿ ವಿಸ್ತರಣೆಯ ಸಂಶೋಧನೆಯಲ್ಲ, ಬದಲಾಗಿ ತನ್ನ ದೇಹ ವಿನ್ಯಾಸದಲ್ಲಿ ಸಂಪೂರ್ಣವಾಗಿ ಭಿನ್ನವಾಗಿ ಕಂಡುಬರುವ ಪೂರ್ವ ಘಟ್ಟದ ಕಳಿಂಗ ಜಾತಿಯ ಕಪ್ಪೆಯಾಗಿದೆ. ಒಂದೇ ಜಾತಿಯ ಕಪ್ಪೆಗಳು ನೋಡಲು ಬೇರೆ ಬೇರೆ ಪ್ರಕಾರವಾಗಿ ಕಂಡುಬರುತ್ತವೆ. ಪೂರ್ವ ಹಾಗೂ ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಕಳಿಂಗ ಕಪ್ಪೆಗಳು ಅನುವಂಶಿಕವಾಗಿ ಒಂದೇ ಆಗಿವೆ.

    ಮೊದಲ ಬಾರಿಗೆ: ಈ ಕಪ್ಪೆಯನ್ನು ತಮಿಳುನಾಡಿನ ಸಂಶೋಧಕ ಪೃಥ್ವಿರಾಜ್ ನೇತೃತ್ವದ ತಂಡವು 2018ರಲ್ಲಿ ಪೂರ್ವ ಘಟ್ಟದ ಓಡಿಶಾ ಹಾಗೂ ಆಂಧ್ರ ಪ್ರದೇಶದಲ್ಲಿ ಪತ್ತೆ ಮಾಡಿತ್ತು. ಪಶ್ಚಿಮಘಟ್ಟದ ಜೀವ ವೈವಿಧ್ಯತೆಯ ಖ್ಯಾತಿಗೆ ಮತ್ತೊಂದು ಗರಿ ಸಿಕ್ಕಿದಂತಾಗಿದೆ.

    ಎರಡರ ನಡುವಿನ ಸಂಪರ್ಕ: ಈ ಕಪ್ಪೆ ಕುಲದೊಳಗಿನ ಜೀವಿವರ್ಗೀಕರಣದ ಅಸ್ಪಷ್ಟತೆಯ ಬಗ್ಗೆ ಹಾಗೂ ಸಂಕೀರ್ಣತೆಯ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಲಾಗಿದೆ. ಈ ಸಂಶೋಧನೆಯು ಅಂತಾರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ’ಝುೂಟ್ಯಾಕ್ಸಾ’ ಎಂಬ ಜರ್ನಲ್​ನಲ್ಲಿ ಪುರಾವೆಯೊಂದಿಗೆ ಪ್ರಕಟಗೊಂಡಿದೆ. ಇಲ್ಲಿಯವರೆಗೆ ವಿವರಿಸಿದ ಹೆಚ್ಚಿನ ಪ್ರಭೇದಗಳು ಅವುಗಳನ್ನು ಪತ್ತೆ ಮಾಡಿದ ಪ್ರದೇಶದಿಂದ ಮಾತ್ರ ತಿಳಿದು ಬಂದಿದೆ ಮತ್ತು ಹಳೆಯ ಪ್ರಕಾರದ ಹೆಚ್ಚಿನ ಮಾದರಿಗಳು ಕಳೆದುಹೋಗಿವೆ. ಈ ಸಮಸ್ಯೆಯನ್ನು ಪರಿಹರಿಸಲು ಅಥವಾ ಇವುಗಳ ಬಗ್ಗೆ ಹೆಚ್ಚು ಗಮನಹರಿಸುವ ತುರ್ತು ಅವಶ್ಯಕತೆಯಿದೆ. ಈಶಾನ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯಿಂದ ಸಮೃದ್ಧವಾಗಿವೆ. ಈ ಪ್ರದೇಶಗಳನ್ನು ಜೀವವೈವಿಧ್ಯತೆಯ ತಾಣಗಳೆಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಪೂರ್ವ ಘಟ್ಟಗಳು ಜೀವವೈವಿಧ್ಯತೆಯ ವಿನಿಮಯಕ್ಕಾಗಿ ಈ ಎರಡರ ನಡುವಿನ ಸಂಪರ್ಕ ಸೇತುವೆಯೆ? ಎಂಬ ಪ್ರಶ್ನೆಯನ್ನು ಈ ಸಂಶೋಧನಾ ಪ್ರಬಂಧ ಹುಟ್ಟುಹಾಕುತ್ತದೆ.

    ಪಶ್ಚಿಮ ಘಟ್ಟದಲ್ಲಿ ಹಲವಾರು ಬಾರಿ ಈ ಕಪ್ಪೆಯನ್ನು ಕಂಡಿದ್ದೇನೆ. ಹೊಸ ಜಾತಿಗಳು, ಪ್ರಭೇದಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವಗಳೇನು ಅಥವಾ ವಿಭಿನ್ನ ಜೈವಿಕ ಭೌಗೋಳಿಕ ಶ್ರೇಣಿಗಳಿಗೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ಆಗಬೇಕಿದೆ. ಹಳೆಯ ತಲೆಮಾರು ಹಾಗೂ ಹೊಸ ತಲೆಮಾರಿನ ಸಂಶೋಧಕರು, ವಿಜ್ಞಾನಿಗಳು ಕಪ್ಪೆಗಳ ಮೇಲೆ ನಡೆಸಿರುವ ಹಲವಾರು ಸಂಶೋಧನೆಗಳಲ್ಲಿ ಕೈಜೋಡಿಸಿದ್ದರೂ, ಕಪ್ಪೆಗಳನ್ನು ಅರಿಯುವ ಜತೆಗೆ ಅವುಗಳ ಸಂರಕ್ಷಣೆಯಲ್ಲಿ ಇನ್ನೂ ನಮ್ಮದು ಮೊದಲ ಹೆಜ್ಜೆ. | ಅಮಿತ ಹೆಗಡೆ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts