ಕಳಸ: ಕರೊನಾ ನಿಯಂತ್ರಣಕ್ಕೆ ದಿಟ್ಟ ಕ್ರಮ ಕೈಗೊಂಡು ಮಾದರಿಯಾಗಿರುವ ಕಳಸ ತಾಲೂಕಿನ ಎಲ್ಲ ಆರು ಗ್ರಾಪಂಗಳು ಈ ಬಾರಿ ಕೆಂಪು ಮತ್ತು ಕಿತ್ತಳೆ ವಲಯದ ಜಿಲ್ಲೆಗಳಿಂದ ಬರುವ ಜನರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡುವ ಬಗ್ಗೆ ನಿರ್ಣಯ ಕೈಗೊಂಡಿವೆ.
ಆರಂಭದಿಂದಲೂ ಇಲ್ಲಿಯ ಜನತೆ, ಪೊಲೀಸರು, ಗ್ರಾಪಂ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಜನರ ಬಗ್ಗೆ ಅತೀವ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ.
ಆದರೆ ಇತ್ತೀಚೆಗೆ ಲಾಕ್ಡೌನ್ ಸಡಿಲಿಕೆ ಆದ ಮೇಲೆ ವಿವಿಧ ಕಾರಣ ಹೇಳಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ ಕೆಲ ದಿನಗಳಿಂದ ಅವರಿಗೆ ಸೀಲ್ ಹಾಕುವುದು, ಹೋಮ್ ಕ್ವಾರಂಟೈನ್ ಬೇಡ ಎಂಬ ಆದೇಶ ಇಲ್ಲಿಯ ಜನರಿಗೆ ಆತಂಕ ಸೃಷ್ಟಿಸಿದೆ. ಕರೊನಾ ನಿಯಂತ್ರಣಕ್ಕೆ ಇಷ್ಟು ದಿನ ಶ್ರಮಿಸಿ ಈಗ ನೀರಲ್ಲಿ ಹುಣಸೇ ಹಣ್ಣು ತೊಳೆದಂತಾಯಿತು ಎಂಬ ಮಾತುಗಳು ಬಂದವು. ಅಲ್ಲದೆ ಹೊರ ರಾಜ್ಯ, ಜಿಲ್ಲೆಯಿಂದ ಬರುವ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಮಾಡಬೇಕು ಎನ್ನುವ ಒತ್ತಡ ಪೊಲೀಸರು ಮತ್ತು ಗ್ರಾಪಂ ಅಧಿಕಾರಿಗಳಿಗೆ ಬರತೊಡಗಿತು.
ಒತ್ತಡ ಹೆಚ್ಚಾಗಿದ್ದರಿಂದ ಕಳಸ, ಹೊರನಾಡು, ಮರಸಣಿಗೆ, ಸಂಸೆ, ಇಡಕಣಿ, ತೋಟದೂರು ಗ್ರಾಪಂಗಳಲ್ಲಿ ಟಾಸ್ಕ್ಫೋರ್ಸ್ ಸಭೆ ಕರೆದು ಕೆಂಪು ವಲಯದಿಂದ ಹಸಿರು ವಲಯಕ್ಕೆ ಬರುವ ಎಲ್ಲರನ್ನೂ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಲಾಕ್ಡೌನ್ ಆರಂಭದಿಂದಲೂ ಗ್ರಾಪಂ ಹಾಗೂ ಕರೊನಾ ಸೇನಾನಿಗಳ ಜತೆಗೂಡಿ ಮುಂಜಾಗ್ರತೆ ವಹಿಸಿದ್ದೆವು. ಕೆಂಪು ವಲಯದಿಂದ ಬರುವ ವಾಹನ ಮತ್ತು ಜನರ ಮೇಲೆ ನಿಗಾ ಇಟ್ಟು, ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಈಗ ಕ್ವಾರಂಟೈನ್ ಮಾಡದೆ ಇರುವ ಬಗ್ಗೆ ಬೇಸರವಾಗಿತ್ತು. ಗ್ರಾಪಂಗಳು ತೆಗೆದುಕೊಂಡ ನಿರ್ಧಾರ ನೆಮ್ಮದಿ ತಂದಿದೆ ಎನ್ನುತ್ತಾರೆ ಬಸ್ರಿಕಲ್ ಚೆಕ್ಪೋಸ್ಟ್ ಸಮೀಪದ ನಿವಾಸಿ ಬಿ.ಕೆ.ಮಹೇಶ್.
ಗ್ರಾಮಸ್ಥರ ಒತ್ತಾಯ ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಪಂಚಾಯಿತಿ ಈ ನಿರ್ಧಾರ ತೆಗೆದುಕೊಂಡಿದೆ. ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ತೀರ್ವನಿಸಿ ನಿರ್ಣಯ ತೆಗೆದುಕೊಂಡು ಪತ್ರವನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಕಳಸ ಪಿಡಿಒ ಕವೀಶ್ ತಿಳಿಸಿದ್ದಾರೆ.