More

    ಕಳಸಾ ಬಂಡೂರಿ ಹೋರಾಟ ಜ.2ಕ್ಕೆ

    ಚಿತ್ರದುರ್ಗ: ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ 3 ವರ್ಷ ಬೇಕಾಯಿತೇ? ಪರಿಸರ, ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಕ್ಕಿದೆಯೆ? ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ಇದನ್ನು ವಿರೋಧಿಸಿ ಜ.2ರಂದು ಹೋರಾಟ ಮಾಡಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನ ಪಡೆಯಲಿದೆ ಎಂಬ ಮಾಹಿತಿ ಅವರದೇ ಪಕ್ಷ ನಡೆಸಿದ ಆಂತರಿಕ ವರದಿಯಿಂದ ಬಹಿರಂಗವಾಗಿದೆ. ಜನ ಇವರ ದುರಾಡಳಿತದಿಂದ ಭ್ರಮನಿರಸನರಾಗಿದ್ದು, ಕಾಂಗ್ರೆಸ್ ಕನಿಷ್ಠ 135 ಸ್ಥಾನ ಪಡೆಯಲಿದೆ. ಆದರೆ, 150 ಕ್ಷೇತ್ರ ಗೆದ್ದು ಅಧಿಕಾರ ಪಡೆಯುವಂತೆ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದು, ಅದರಂತೆ ಕಾರ್ಯಪ್ರವೃತ್ತರಾಗುತ್ತಿದ್ದೇವೆ ಎಂದರು.
    ಜಿಲ್ಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಟಿಕೆಟ್‌ಗಾಗಿ 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಸಂದರ್ಶನ ನಡೆಸಲಾಗಿದ್ದು, ಎಲ್ಲರೂ ನಮಗೆ ನೀಡಿ ಎನ್ನುತ್ತಿದ್ದಾರೆ.

    ಒಂದು ವೇಳೆ ಸಿಗದಿದ್ದರೂ ಪಕ್ಷ ಟಿಕೆಟ್ ನೀಡಿದವರ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಜ.15  ರೊಳಗೆ ವಿಧಾನಸಭೆ ಚುನಾವಣೆ ಸಂಬಂಧ 150 ಸೀಟು ಅಂತಿಮವಾಗಲಿದೆ. ಅವರೆಲ್ಲರೂ ಗೆಲುವಿಗಾಗಿ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ಕಾಂಗ್ರೆಸ್‌ನಿಂದ ಜ.8 ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಎಸ್‌ಸಿ, ಎಸ್‌ಟಿ ಸಮಾವೇಶ, 11ರ ನಂತರ ಸಾಮೂಹಿಕ ನಾಯಕತ್ವದಲ್ಲಿ ಬೆಳಗಾವಿಯಿಂದ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ, 30ರ ನಂತರ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಎರಡು ತಂಡಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈ ವೇಳೆ ಡಂಬಲ್ ಇಂಜಿನ್ ಸರ್ಕಾರದ ಲೋಪ ಜನರ ಮುಂದಿಡುತ್ತೇವೆ.ನಾವು ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರ ಆಡಳಿತ ನೀಡುವ ಭರವಸೆ ನೀಡಲಿದ್ದೇವೆ ಎಂದು ತಿಳಿಸಿದರು.

    ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಮುರಳಿಧರ ಹಾಲಪ್ಪ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮುಖಂಡರಾದ ಜಯಸಿಂಹ, ಬಾಲರಾಜ್, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ ಇತರರಿದ್ದರು.

    ಎಐಸಿಸಿ ತೀರ್ಮಾನವೇ ಅಂತಿಮ
    ರಾಜ್ಯದ 224 ಕ್ಷೇತ್ರಗಳ ಸಂಬಂಧ ಕಾಂಗ್ರೆಸ್ ಟಿಕೆಟ್ ಬಯಸಿ ಈಗಾಗಲೇ 1,350 ಅರ್ಜಿಗಳು ಬಂದಿದೆ. ಇದರಲ್ಲಿ ಕಾನೂನಾತ್ಮಕ ಪ್ರಕರಣ ಎದುರಿಸುತ್ತಿರುವವರ ಪಟ್ಟಿಯನ್ನು ಎಐಸಿಸಿಗೆ ಕಳುಹಿಸಲಾಗುವುದು. ಇದರಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಲೀಂ ಅಹಮ್ಮದ್ ಸ್ಪಷ್ಟಪಡಿಸಿದರು

    *ಬೆಂಬಲಿಗರ ಆಕ್ರೋಶ
    ಕಾನೂನಾತ್ಮಕ ಪ್ರತ್ಯೇಕ ಪ್ರಕರಣ ಎದುರಿಸುತ್ತಿರುವ ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಉದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ಪರ ವೀರಶೈವ ಸಮಾಜದ ಯುವ ಮುಖಂಡರು, ಆರ್.ಕೆ.ಸರ್ದಾರ್ ಬೆಂಬಲಿಗರು ಸಂದರ್ಶನದ ವೇಳೆ ವೀಕ್ಷಕರ ಭೇಟಿಗೆ ಪ್ರಯತ್ನಿಸಿದರು. ಅವಕಾಶ ಸಿಗದಿದ್ದಕ್ಕೆ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts