More

    ಹೆಮ್ಮಾರಿ ಹೆಡೆಮುರಿ ಕಟ್ಟಲು ಕಟ್ಟೆಚ್ಚರ

    ಕಲಾದಗಿ: ಕೋವಿಡ್ ಎರಡನೇ ಅಲೆ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂಗೆ ಗ್ರಾಮ ಒಳಗೊಂಡಂತೆ ಆಸುಪಾಸಿನ ಊರುಗಳಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ರೀತಿಯಿಂದ ಸಾರ್ವಜನಿಕರಿಂದ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಹಾಗೂ ಪಂಚಾಯಿತಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ಗ್ರಾಮದ ಗ್ರಾಮ ಪಂಚಾಯಿತಿ ಸೇರಿ ತುಳಸಿಗೇರಿ, ಚಿಕ್ಕಶೆಲ್ಲಿಕೇರಿ, ಖಜ್ಜಿಡೋಣಿ, ಯಡಹಳ್ಳಿ, ಸೀಮಿಕೇರಿ ಮುಂತಾದ ಗ್ರಾಮ ಪಂಚಾಯಿತಿಗಳು ಕೋವಿಡ್ ಎರಡನೇ ಅಲೆ ಹಿಮ್ಮೆಟ್ಟಿಸಲು ಕಂದಾಯ, ಪೊಲೀಸ್ ಇಲಾಖೆಗಳ ನೆರವಿನೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿವೆ. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಈ ನಿಟ್ಟಿನಲ್ಲಿ ತಮ್ಮದೆ ಆದ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದರೆ, ಪೊಲೀಸ್ ಇಲಾಖೆಯೂ ತನ್ನದೆ ಆದ ರೀತಿಯಲ್ಲಿ ಕಟ್ಟೆಚ್ಚರ ವಹಿಸಿದೆ.

    ಲಸಿಕೆಗೆ ಮುಗಿಬಿದ್ದ ಜನ
    ಕೋವಿಡ್ ಎರಡನೇ ಅಲೆಗೆ ಆತಂಕಗೊಂಡಿರುವ ಸಾರ್ವಜನಿಕರು ಮೊದಲ ಹಾಗೂ ಎರಡನೇ ಡೋಸ್ ಹಾಕಿಸಿಕೊಳ್ಳಲು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ಧಾವಿಸುತ್ತಿದ್ದಾರೆ. ಆರಂಭದಲ್ಲಿ ಲಸಿಕೆ ಕೇವಲ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಕಲಾರಂಭಿಸಿದ ಆರೋಗ್ಯ ಇಲಾಖೆ, ನಂತರ ಸುತ್ತಲಿನ ಗ್ರಾಮಗಳಿಗೂ ತೆರಳಿ ಲಸಿಕೆ ಹಾಕುವ ಸತ್ಕಾರ್ಯಕ್ಕೆ ಮುಂದಾಗಿದ್ದು, ಜನರ ಮೆಚ್ಚುಗೆಗೆ ಕಾರಣವಾಗಿದೆ.

    ಇಲ್ಲಿನ ಆರೋಗ್ಯ ಕೇಂದ್ರ ವ್ಯಾಪ್ತಿಯ ಊರುಗಳಲ್ಲಿನ 7,260 ಜನರು ಈಗಾಗಲೇ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ಇವರಲ್ಲಿ 583 ಜನ ಎರಡನೇ ಡೋಸ್ ಪಡೆದಿದ್ದಾರೆ. ಮೊದಲ ಹಂತದ ಹಾಗೂ ಎರಡನೇ ಹಂತದ ಲಸಿಕೆ ಹಾಕುವಲ್ಲಿ ಇಲ್ಲಿನ ಆರೋಗ್ಯಾಧಿಕಾರಿಗಳು ಮತ್ತವರ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

    ಟೆಸ್ಟಿಂಗ್ ನಿರಂತರ
    ಆರೋಗ್ಯ ಕೇಂದ್ರದ ಮತ್ತೊಂದು ವೈದ್ಯಕೀಯ ತಂಡ ಕೇಂದ್ರದ ವ್ಯಾಪ್ತಿಯ ಚಿಕ್ಕಶೆಲ್ಲಿಕೇರಿ, ಖಜ್ಜಿಡೋಣಿ, ಸೀಮಿಕೇರಿ, ಯಡಹಳ್ಳಿ, ತುಳಸಿಗೇರಿ, ಹಿರೇಸಂಶಿ ಸೇರಿ ವಿವಿಧ ಊರುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸ್ವಾೃಬ್ ಸಂಗ್ರಹಣೆ ಮಾಡಿದ್ದು, ಉಳಿದ ಊರುಗಳಲ್ಲಿಯೂ ಸ್ವಾೃಬ್ ಸಂಗ್ರಹಣೆಗೆ ಮುಂದಾಗಿದೆ.

    ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಲಸಿಕೆ ಹಾಕುವ ಕಾರ್ಯ ನಿರಂತರವಾಗಿ ನಡೆದಿದೆ. ನಮ್ಮಲ್ಲಿ ಲಸಿಕೆ ಕೊರತೆ ಇಲ್ಲ. ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡು ತಿಂಗಳು ಆಗಿದ್ದರೆ ಅವರು ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ಈ ವರೆಗೂ ಲಸಿಕೆಯನ್ನು ಹಾಕಿಸಿಕೊಳ್ಳದೆ ಇರುವವರು ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕು. ಜತೆಗೆ ಕೋವಿಡ್ ತಡೆಯಲು ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು.
    ಡಾ.ಬಿ.ಜಿ. ಹುಬ್ಬಳ್ಳಿವೈದ್ಯಾಧಿಕಾರಿ, ಪ್ರಾ.ಆ. ಕೇಂದ್ರ ಕಲಾದಗಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts