More

    ಕಣ್ಣೀರಲ್ಲಿ ಕಣಿವೆ ಗ್ರಾಮ ಕಳಚೆ

    ಶ್ರೀಧರ ಅಣಲಗಾರ ಯಲ್ಲಾಪುರ
    ತನ್ನದೇ ಆದ ವೈಶಿಷ್ಟ್ಯ, ವಿಭಿನ್ನತೆಯ ಮೂಲಕ ಹೆಸರಾಗಿದ್ದ ತಾಲೂಕಿನ ಕಳಚೆ ಗ್ರಾಮ ಮತ್ತೇ ಮೊದಲಿನ ವೈಭವವನ್ನು ಕಾಣುವುದು ಕನಸಿನ ಮಾತಾಗಿದೆ. 15 ದಿವಸಗಳ ಹಿಂದೆ ಉಂಟಾದ ಭಾರಿ ಭೂಕುಸಿತ ಗ್ರಾಮದ ಚಿತ್ರಣವನ್ನೇ ಸಂಪೂರ್ಣ ಬದಲಾಯಿಸಿದೆ. ಕಳೆದ 15 ದಿವಸಗಳಿಂದ ಗ್ರಾಮದಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ, ಓಡಾಡುವುದಕ್ಕೆ ರಸ್ತೆಯಿಲ್ಲ. ದೈನಂದಿನ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳೂ ಇಲ್ಲ.
    ಊರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಗುಡ್ಡ ಕುಸಿದಿದೆ. 2-3 ಕಡೆಗಳಲ್ಲಿ ರಸ್ತೆಯೇ ಕುಸಿದಿದೆ, ತೋಟಗಳಲ್ಲಿ ಅಡಕೆ, ತೆಂಗಿನ ಮರಗಳು, ಬಾಳೆ ಗಿಡಗಳು ನೆಲ ಕಚ್ಚಿವೆ. 10-15 ಅಡಿ ಅಗಲದ ಹಳ್ಳ ಐದಾರು ಪಟ್ಟು ಅಗಲವಾಗಿ, ಇಡೀ ತೋಟವನ್ನೇ ಸರ್ವನಾಶ ಮಾಡಿದೆ. ವಿದ್ಯುತ್ ತಂತಿ, ಕಂಬಗಳು ಎಲ್ಲೆಂದರಲ್ಲಿ ಬಿದ್ದಿವೆ, 10-15 ಅಡಿಗಿಂತ ಎತ್ತರದ ಯಾವ ಗುಡ್ಡ, ಧರೆಯೂ ಕುಸಿಯದೇ ಉಳಿದಿಲ್ಲ. ಮನೆಗಳು ಬಿದ್ದಿವೆ, ಕೆಲವು ಮನೆಗಳು ಕುಸಿಯುವ ಹಂತದಲ್ಲಿವೆ. ಕುಸಿದ ಗುಡ್ಡದಿಂದ ಹರಿದು ಬರುವ ಮ್ಯಾಂಗನೀಸ್ ಮಿಶ್ರಿತ ಕೆಂಪು ನೀರು ಎಲ್ಲೆಡೆ ಹರಿಯುತ್ತಿದೆ. ರಸ್ತೆಯ ಮಧ್ಯೆ ದೊಡ್ಡ ದೊಡ್ಡ ಬಂಡೆಗಳು ಬಂದು ಬಿದ್ದಿವೆ.
    ಇರುವ ದಾರಿಗಳೆಲ್ಲ ಮಣ್ಣಿನಡಿ ಮುಚ್ಚಿ ಹೋಗಿವೆ. ಬೆಟ್ಟ-ಗುಡ್ಡದಿಂದ ಜಾರುವ ಮಣ್ಣಿನಲ್ಲಿ ಮರ-ಗಿಡಗಳನ್ನು ಬಳಸಿ ಸಾಗಿದ್ದೇ ದಾರಿ ಎಂಬಂತಾಗಿದೆ. ಬರಿಗೈಯಲ್ಲಿ ನಡೆದು ಹೋಗುವುದೂ ಅಸಾಧ್ಯವೆಂಬಂತಿರುವ ಅಂತಹ ದಾರಿಯಲ್ಲಿ ತಮ್ಮ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ ಗ್ರಾಮಸ್ಥರೇ ವಿದ್ಯುತ್ ಕಂಬಗಳನ್ನು ಹೊತ್ತು, ಎಳೆದು ಸಾಗಿಸುತ್ತಿದ್ದಾರೆ.
    ಬಾರದ ಜನಪ್ರತಿನಿಧಿಗಳು: ಮುಖ್ಯಮಂತ್ರಿಗಳಾದಿಯಾಗಿ ಹೆಚ್ಚಿನ ಜನಪ್ರತಿನಿಧಿಗಳು ತಳಕೆಬೈಲ್ ವರೆಗೆ ಮಾತ್ರ ಬಂದು ಅಲ್ಲಿನ ಭೂಕುಸಿತ ವೀಕ್ಷಿಸಿ ಹೋಗಿದ್ದಾರೆ. ಕಳಚೆಯಲ್ಲಿ ಅದರ ಹತ್ತು ಪಟ್ಟು ಹಾನಿಯಾಗಿದ್ದರೂ ಸ್ಥಳೀಯ ಗ್ರಾ.ಪಂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಮೇಲ್ಮಟ್ಟದ ಜನಪ್ರತಿನಿಧಿಗಳು ಕಳಚೆಗೆ ತಲುಪಿಲ್ಲ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಇತರ ಮೇಲ್ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಹೋದರೂ, ನಾವು ಮತ ಹಾಕಿ ಗೆಲ್ಲಿಸಿದ ಜನಪ್ರತಿನಿಧಿಗಳು ಊರಿನ ಅನಾಹುತ ನೋಡಲು, ನಮ್ಮ ಕಷ್ಟ ಕೇಳಲು ಬಂದಿಲ್ಲ ಎಂಬ ನೋವು ಗ್ರಾಮಸ್ಥರದಾಗಿದೆ.
    ಮತ್ತೆ ಗುಡ್ಡ ಅಗೆದು ರಸ್ತೆ ಮಾಡುವುದೇಕೆ?: ಈಗಾಗಲೇ ಗುಡ್ಡ ಕುಸಿದು ಇರುವ ರಸ್ತೆಗಳು ಮುಚ್ಚಿ ಹೋಗಿವೆ. ಈಗ ಮತ್ತದೇ ಗುಡ್ಡ ಅಗೆದು ತಾತ್ಕಾಲಿಕ ರಸ್ತೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಳೆಗಾಲ ಇನ್ನೂ ಎರಡು ತಿಂಗಳು ಬಾಕಿ ಇರುವಾಗ, ಕುಸಿದ ಗುಡ್ಡವನ್ನೇ ಮತ್ತೆ ಕಡಿದು ರಸ್ತೆ ಮಾಡಿದರೆ ಗುಡ್ಡ, ರಸ್ತೆ ಉಳಿಯಲು ಸಾಧ್ಯವೆ? ಈ ವರ್ಷವೇ ಮತ್ತೆ ಗುಡ್ಡ ಕುಸಿದು ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
    ಭೂ ವಿಜ್ಞಾನಿ ಭೇಟಿ: ಸ್ವರ್ಣವಲ್ಲೀ ಮಠದ ಪ್ರತಿನಿಧಿಯಾಗಿ ಭೂವಿಜ್ಞಾನಿ ಡಾ.ಜಿ.ವಿ.ಹೆಗಡೆ ಕಳಚೆಗೆ ಭೇಟಿ ನೀಡಿ, ಅಲ್ಲಿನ ಅನಾಹುತಗಳ ಸಮೀಕ್ಷೆ ನಡೆಸಿದ್ದಾರೆ. ಎರಡು ದಿನಗಳ ಕಾಲ ಸಂಪೂರ್ಣ ಕಳಚೆಯನ್ನು ಸುತ್ತಾಡಿ ಅಧ್ಯಯನ ನಡೆಸಿರುವ ಅವರು ವರದಿಯನ್ನು ಶ್ರೀಗಳಿಗೆ ನೀಡಲಿದ್ದಾರೆ. ಸ್ವರ್ಣವಲ್ಲೀ ಶ್ರೀಗಳು ಈ ಕುರಿತು ಸರ್ಕಾರದ ಗಮನ ಸೆಳೆಯಲಿದ್ದಾರೆ.
    ಪರ್ಯಾಯ ವ್ಯವಸ್ಥೆ ಶೀಘ್ರ ಆಗಲಿ
    ಈ ರೀತಿಯ ಭೂಕುಸಿತ ಮುಂದೆಯೂ ಆಗಾಗ ಆಗುತ್ತಲೇ ಇರುತ್ತದೆ. ಕಳಚೆಯಲ್ಲಿ ಇನ್ನು ಜನವಸತಿ ಅಪಾಯಕಾರಿ ಎಂಬುದು ಸ್ಥಳ ಪರಿಶೀಲಿಸಿದ ಅಧಿಕಾರಿಗಳು, ತಜ್ಞರು ಹೇಳುವ ಮಾತು. ಕಳಚೆ ಗ್ರಾಮಸ್ಥರ ಸ್ಥಳಾಂತರಕ್ಕೆ ಸೂಕ್ತ ಸ್ಥಳ ನಿಗದಿಪಡಿಸುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಶೀಘ್ರವಾಗಿ ಪರ್ಯಾಯ ವ್ಯವಸ್ಥೆಯಾದರೆ ಭೀತಿಯಲ್ಲಿ ಬದುಕುವ ಬವಣೆ ತಪ್ಪುತ್ತದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
    ಗೊಂದಲದಲ್ಲಿ ಗ್ರಾಮಸ್ಥರು
    ಅನಾಹುತಗಳ ನಂತರ, ಭೀತಿಯ ನಡುವೆಯೂ ಊರಿನಲ್ಲೇ ಜೀವನ ಸಾಗಿಸಬೇಕೆ ಅಥವಾ ಮೊದಲು ಊರು ಬಿಟ್ಟು ಪರ್ಯಾಯ ವ್ಯವಸ್ಥೆಯತ್ತ ವಿಚಾರ ಮಾಡಬೇಕೆ ಎಂಬ ಗೊಂದಲ ಗ್ರಾಮಸ್ಥರನ್ನು ಕಾಡುತ್ತಿದೆ. ಇದರ ಮಧ್ಯೆ ಮತ್ತೆ ಊರನ್ನು ಹೊಸದಾಗಿ ಕಟ್ಟುವ ಪ್ರಯತ್ನವೂ ಜಾರಿಯಲ್ಲಿದೆ. ಬಹುತೇಕ ಗ್ರಾಮಸ್ಥರು ಭಯದಲ್ಲಿ ಊರು ತೊರೆಯುತ್ತಿದ್ದು, ತಮ್ಮ ನೆಂಟರ ಮನೆಯೋ ಅಥವಾ ಇನ್ನಾವುದೋ ಸುರಕ್ಷಿತ ಸ್ಥಳ ಸೇರಿಕೊಳ್ಳುವ ತವಕದಲ್ಲಿದ್ದಾರೆ.


    ಕಳಚೆ ಹಾಗೂ ತಳಕೆಬೈಲ್ ಪ್ರದೇಶದಲ್ಲಿ ಭೂಮಿಯ ತಳದಲ್ಲಿ 10 ರಿಂದ 20 ಅಡಿ ಆಳದವರೆಗೆ ಲ್ಯಾಟರಿಕ್ ಮತ್ತು ಮ್ಯಾಂಗನಿಫೆರಸ್ ಮಣ್ಣಿನ ಪದರಗಳು ಇರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಜು.21 ರಿಂದ 24 ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಗುಡ್ಡದ ತಲೆಯ ಮೇಲಿನ ವಿಶಾಲವಾದ ಪ್ರದೇಶದಲ್ಲಿ ಸಂಗ್ರಹವಾದ ನೀರು ಒಮ್ಮೆಲೇ ಉತ್ತರಾಭಿಮುಖವಾಗಿ ಹೊರಹೊಮ್ಮಿದೆ. ಕಳಚೆ ಕಣಿವೆಯಲ್ಲಿ ಕಡಿದಾದ ಇಳಿಜಾರು ಪ್ರದೇಶವಿರುವುದು ಹೆಚ್ಚಿನ ಪ್ರಮಾಣದ ಭೂಕುಸಿತಕ್ಕೆ ಕಾರಣವಾಗಿದೆ. ಇಳಿಜಾರು ಪ್ರದೇಶಕ್ಕೆ ಅಡ್ಡಲಾಗಿ ಗುಡ್ಡ ಕಡಿತ ಮಾಡಿರುವುದೂ ಅವಘಡಕ್ಕೆ ಕಾರಣ.
    | ಡಾ.ಜಿ.ವಿ.ಹೆಗಡೆ ಭೂವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts