More

    ಸಿದ್ಧವಾಗಿದೆ ಕಡಂಬಳ್ಳಿ ಕಿಂಡಿ ಅಣೆಕಟ್ಟು

    ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯಸ್ತರ ಕಿಂಡಿ ಅಣೆಕಟ್ಟಿನ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಕೃಷಿಕರ ಉಪಯೋಗಕ್ಕೆ ದೊರಕಲಿದ್ದು, ವಾಳ್ಯಸ್ತರ ಬಹುದಿನದ ಕನಸು ನನಸಾಗಲಿದೆ.

    ಅನಾದಿಕಾಲದಿಂದ ಕಡಂಬಳ್ಳಿ ವಾಳ್ಯಸ್ತರು ತಮ್ಮ ಕೃಷಿ ತೋಟಗಳಿಗೆ ಮೂರು ಕಿ.ಮೀ ದೂರದ ಮುಂಡಾಜೆ ಸೇತುವೆ ಸಮೀಪ, ಮೃತ್ಯುಂಜಯ ನದಿಗೆ ಸಾಂಪ್ರದಾಯಿಕ ಕಟ್ಟವನ್ನು ಕಟ್ಟಿ ನೀರನ್ನು ತರುತ್ತಿದ್ದರು. 2019ರ ಭೀಕರ ನೆರೆಯಿಂದ ಕಟ್ಟ ಕಟ್ಟುವ ಸ್ಥಳ ಮತ್ತು ನೀರು ಹರಿಯುವ ಕಾಲುವೆ ಸಂಪೂರ್ಣ ಜರ್ಜರಿತವಾಗಿ ಕಟ್ಟ ನಿರ್ಮಿಸಲು ಅಸಾಧ್ಯ ಸ್ಥಿತಿ ಎದುರಾಗಿತ್ತು. ಎರಡು ವರ್ಷಗಳ ಕಾಲ ವಾಳ್ಯದ ಜನರು ಕಟ್ಟದ ನೀರಿನಿಂದ ವಂಚಿತರಾಗಿದ್ದರು. ಇದರಿಂದ ಈ ವಾಳ್ಯದ ನೂರಾರು ಎಕರೆ ತೋಟಗಳಿಗೆ ನೀರಿನ ವ್ಯವಸ್ಥೆ ಇರಲಿಲ್ಲ. ಅಲ್ಲದೇ ಕೆರೆ, ಬಾವಿಗಳು ಬೇಗನೆ ಬತ್ತಿ ನೀರಿನ ಸಮಸ್ಯೆ ಎದುರಾಗಿತ್ತು. ಕಟ್ಟ ಇಲ್ಲದ ಕಾರಣ ಮುಂಡಾಜೆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಕೂಡ ತಲೆದೋರಿತ್ತು.

    ಜನರ ಮನವಿಗೆ ಸ್ಪಂದಿಸಿದ ಶಾಸಕರು 5 ಕೋಟಿ ರೂ. ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ನೂತನ ಕಿಂಡಿ ಅಣೆಕಟ್ಟನ್ನು ಮಂಜೂರು ಮಾಡಿದ್ದರು. ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿ ಒಂದು ತಿಂಗಳ ಹಿಂದೆ ಅಣೆಕಟ್ಟು ಪೂರ್ಣಗೊಂಡಿದೆ. ಪ್ರಾಯೋಗಿಕವಾಗಿ ನೀರು ಸಂಗ್ರಹ ಆರಂಭಿಸಲಾಗಿದ್ದು, ನೀರು ಭರ್ತಿಯಾಗಿ ಹೊರ ಹರಿಯುತ್ತಿದೆ.

    ಅಣೆಕಟ್ಟು ಪ್ರದೇಶದಿಂದ 300ಮೀ. ದೂರದವರೆಗೆ ನೀರು ಹರಿಯುವ ಕಾಲುವೆ ನಿರ್ಮಾಣ ಕಾಮಗಾರಿ ಈಗ ಕೊನೆಯ ಹಂತ ತಲುಪಿದೆ. ಇನ್ನೊಂದು ಕಡೆ 10ಮೀ. ಉದ್ದದ ಕಾಲುವೆ ನಿರ್ಮಾಣವಾಗಬೇಕಿದ್ದು ಇದು ಮುಂದಿನ ನಾಲ್ಕೈದು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಕಡಂಬಳ್ಳಿ ಕಿಂಡಿ ಅಣೆಕಟ್ಟು ಮತ್ತು ಕಾಲುವೆ ಕೆಲಸಗಳು ಮುಗಿಯುವ ಹಂತ ತಲುಪಿವೆ. ಮುಂದಿನ ಕೆಲವೇ ದಿನಗಳಲ್ಲಿ ವಾಳ್ಯಸ್ತರ ತೋಟಗಳಿಗೆ ನೀರಿನ ವ್ಯವಸ್ಥೆಯಾಗಲಿದೆ.
    ರಾಕೇಶ್, ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಬೆಳ್ತಂಗಡಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts