More

    ಕಡಬ ತಾಪಂಗೆ ಸುಸಜ್ಜಿತ ಕಟ್ಟಡ

    ಕಡಬ: ನೂತನವಾಗಿ ರಚನೆಯಾದ ಕಡಬ ತಾಲೂಕು ಪಂಚಾಯಿತಿ ಸುಸಜ್ಜಿತ ಕಟ್ಟಡಕ್ಕೆ 4.50 ಕೋಟಿ ರೂ. ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ಲಭಿಸಿದ್ದು, ಡಿಸೆಂಬರ್ ಮಾಸಂತ್ಯದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ.

    ಕಡಬದ ಹಳೇ ಸ್ಟೇಷನ್‌ನಲ್ಲಿ ತಾಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟಂತೆ ಈಗಾಗಲೇ ಅಕ್ಕಪಕ್ಕದಲ್ಲಿ ತಲಾ 1.19 ಎಕರೆ ಜಮೀನನ್ನು ಕಂದಾಯ ಇಲಾಖೆಯವರು ಗಡಿಗುರುತು ಮಾಡಿ ಕೊಟ್ಟಿದ್ದಾರೆ. ಈಗಾಗಲೇ ಅಲ್ಲಿನ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಕಚೇರಿ ತೆರೆಯಲಾಗಿದೆ.

    ಜಿಪಂ ಕಚೇರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಲೆಕ್ಕ ಶೀರ್ಷಿಕೆಯಡಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಲಾಗಿದ್ದು, ಸಭಾಂಗಣ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. 4.50 ಕೋಟಿ ರೂ. ಅನುದಾನದ ಪೈಕಿ ಈಗಾಗಲೇ 1.50 ಕೋಟಿ ರೂ. ಮಂಜೂರುಗೊಂಡಿದೆ. ಮಂಜೂರುಗೊಂಡಿರುವ ಅನುದಾನ 2021ರ ಮಾರ್ಚ್ ತಿಂಗಳೊಳಗೆ ಬಳಕೆಯಾಗಬೇಕಿದ್ದು, ಸರ್ಕಾರದ ಮಟ್ಟದಲ್ಲಿ ನಡೆಯಬೇಕಿರುವ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ವರ್ಷದ ಅಂತ್ಯದಲ್ಲಿ ಕಾಮಗಾರಿ ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ.

    ಕಡಬ ತಾಲೂಕಿಗೆ ಸಂಬಂಧಿಸಿ ನೂತನ ತಾಪಂ ವ್ಯವಸ್ಥೆ ರೂಪುಗೊಂಡ ಬೆನ್ನಲ್ಲೇ ತಾತ್ಕಾಲಿಕ ನೆಲೆಯಲ್ಲಿ ಕಚೇರಿ ತೆರೆಯುವ ಮೂಲಕ ತಾಪಂ ಚಟುವಟಿಕೆ ಆರಂಭಗೊಂಡಿವೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಗೆ ಆಯ್ಕೆಗಳು ನಡೆದಿದ್ದು, ಕಾರ್ಯನಿರ್ವಹಣಾಧಿಕಾರಿಯಾಗಿ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಹೆಚ್ಚುವರಿ ಹೊಣೆ ನಿರ್ವಹಿಸುತ್ತಿದ್ದಾರೆ.

    4.50 ಕೋಟಿ ರೂ. ವೆಚ್ಚದಲ್ಲಿ ಕಡಬ ತಾಪಂಗೆ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ತಾಪಂಗೆ ಸೇರಿದ ಜಮೀನಿನಲ್ಲಿರುವ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಈಗಾಗಲೇ ಕಚೇರಿ ತೆರೆಯಲಾಗಿದೆ. ಸಿಬ್ಬಂದಿ ನೇಮಕಾತಿ, ಅಗತ್ಯ ಗಣಕ ಯಂತ್ರಗಳ ಖರೀದಿ ಹಾಗೂ ಇತರ ಅನುದಾನಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಹಂತ ಹಂತವಾಗಿ ಎಲ್ಲ ಅಗತ್ಯಗಳಿಗೆ ಅನುದಾನ ಒದಗಿಸುವ ಮೂಲಕ ಕಡಬಕ್ಕೆ ತಾಪಂ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು.
    -ಎಸ್.ಅಂಗಾರ, ಸುಳ್ಯ ಶಾಸಕ

    ಕಡಬ ತಾಪಂ ವ್ಯವಸ್ಥೆ ಆಡಳಿತಾತ್ಮಕವಾಗಿ ತನ್ನ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿದೆ. ತಾಪಂ ವ್ಯಾಪ್ತಿಯ ಪ್ರಥಮ ಪ್ರಗತಿ ಪರಿಶೀಲನಾ ಸಭೆೆಯನ್ನೂ ನಡೆಸಲಾಗಿದೆ. ಎಲ್ಲ ವ್ಯವಸ್ಥೆಗಳನ್ನೊಳಗೊಂಡ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಒದಗಿಸಿದ್ದು, ಶೀಘ್ರ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
    -ರಾಜೇಶ್ವರಿ ಕನ್ಯಾಮಂಗಲ, ಅಧಕ್ಷೆ , ಕಡಬ ತಾ.ಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts