More

    ಕಬೆತ್ತಿಗುತ್ತಿನಲ್ಲಿ ಪರಂಪರೆಯಂತೆ ಕೋಣಗಳ ಓಟ

    ಕಿನ್ನಿಗೋಳಿ: ಪ್ರತಿಷ್ಠಿತ ಕಂಬಳ ಓಟದ ನಡುವೆ ಗುತ್ತುಮನೆತನಗಳಲ್ಲಿ ಈಗಲೂ ಧಾರ್ಮಿಕ ನಂಬಿಕೆಯಿಂದ ಸಾಂಪ್ರದಾಯಿಕ ಕಂಬಳ ನಡೆಯುತ್ತಿವೆ.

    ಬಜಪೆ ಸಮೀಪದ ಪೆರಾರ ಮಾಗಣೆ ಕಬೆತ್ತಿಗುತ್ತು ಸಾಂಪ್ರದಾಯಿಕ ಕಂಬಳ ಮಂಗಳವಾರ ನಡೆಯಿತು.ಪೆರಾರ ಮಾಗಣೆಯಲ್ಲಿ ಪೆರಾರ ಶ್ರೀಬಲವಾಂಡಿ ಕ್ಷೇತ್ರದ ಕಟ್ಟುಪಾಡು, ನಿಯಮಗಳಿಗೊಳಪಟ್ಟು ಮೂರು ಪೂಕರೆ ಕಂಬಳಗಳು ಹಾಗೂ ಒಂದು ಬಾರಪಾಡು ಕಂಬಳ ಪರಂಪರೆಯಿಂದ ನಡೆಯುತ್ತಿದೆ. ಕೊಳಕೆಬೈಲು ಪೂಕರೆ ಕಂಬಳ ಮಾಗಣೆಯ ಪ್ರಥಮ ಕಂಬಳ. ಪರಾರಿ ಪೂಕರೆ ಕಂಬಳ ಮಾಗಣೆಯ ಎರಡನೇ ಕಂಬಳ, ಬಳಿಕ ಕಬೆತ್ತಿಗುತ್ತು ಬಾರಪಾಡು ಕಂಬಳ, ಮುಂಡಬೆಟ್ಟುಗುತ್ತು ಕಾಣಿಕೆ ಕಂಬಳಗಳು ನಡೆಯುತ್ತವೆ.

    ಪೆರಾರ ಬಲವಂಡಿ ಕ್ಷೇತ್ರಕ್ಕೆ ಒಟ್ಟು 16 ಗುತ್ತು ಮನೆತನಗಳಿದ್ದು ಅದರಲ್ಲಿ ಕಬೆತ್ತಿಗುತ್ತು ಕೂಡ ಒಂದು. ಕಬೆತ್ತಿಗುತ್ತಿನಲ್ಲಿ ಕಂಬಳದ ದಿನ ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ದೈವಸ್ಥಾನದ ಮುಂಭಾಗಕ್ಕೆ ತಂದು ಪ್ರಾರ್ಥಿಸಿ ಕಂಬಳದ ಗದ್ದೆ ಬಳಿ ತರಲಾಗುತ್ತದೆ.

    ಅಲ್ಲಿ ಕೋಣಗಳನ್ನು ಕಂಬಳಕ್ಕೆ ಸಿದ್ಧಪಡಿಸಿ ಮಂಜೊಟ್ಟಿ ಮೂಲಕ ಕಂಬಳ ಗದ್ದೆಗಳಿಗೆ ಇಳಿಸಿ ಮೂರು ಸುತ್ತು ಕೋಣಗಳನ್ನು ಓಡಿಸಲಾಗುತ್ತದೆ. ಹಿಂದೆ ಹಲವು ಜೊತೆ ಕೋಣಗಳು ಭಾಗವಹಿಸುತ್ತಿದ್ದವು. ಈಗ ಸಂಖ್ಯೆ ಇಳಿಮುಖವಾಗಿದೆ. ನಂತರ ಮಂಜೊಟ್ಟಿಯಲ್ಲಿ ಕಬೆತ್ತಿಗುತ್ತು ಮನೆತನದ ಯಜಮಾನ ಹಾಗೂ ಪೆರಾರ ಕ್ಷೇತ್ರಕ್ಕೊಳಪಟ್ಟ ಎಲ್ಲ ಗುತ್ತುಗಳ ಪ್ರಮುಖರ ಸಮ್ಮುಖದಲ್ಲಿ ಬಾಳೆ ಗಿಡ ಹಸ್ತಾಂತರ (ಬಾರೆ ಪಗಪುನು) ಸಾಂಪ್ರದಾಯಿಕ ಕಟ್ಟಳೆ ನಡೆಯುತ್ತದೆ. ಬಾಳೆಗಿಡವನ್ನು ಕಂಬಳ ಗದ್ದೆಯ ಮಂಜೊಟ್ಟಿಯ ವಿರುದ್ಧ ದಿಕ್ಕಿನಲ್ಲಿ ನೆಟ್ಟು, ಬಳಿಕ ವಿರುದ್ಧ ದಿಕ್ಕಿನಲ್ಲಿ ಓಡಿ ಬಂದು ಮಂಜೊಟ್ಟಿ ತಲುಪಿದಲ್ಲಿಗೆ ಕಬೆತ್ತಿಗುತ್ತು ಬಾರೆಪಾಡು ಕಂಬಳ ಸಂಪನ್ನಗೊಳ್ಳುತ್ತದೆ. ಆಧುನಿಕ ಭರಾಟೆಯಲ್ಲಿ ಮೂಲ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಈ ಕಂಬುಲ ನಡೆದುಕೊಂಡು ಬರುತ್ತಿದೆ.

    ಬುಲೆ ಕಾಣಿಕೆ ಸಂಪ್ರದಾಯ: ಕಬೆತ್ತಿಗುತ್ತು ಕಂಬಳ ಗದ್ದೆಯಲ್ಲಿ ಸುಗ್ಗಿ ಸಾಗುವಳಿಗೆ ಬಾರೆಪಾಡು ಕಂಬಳವಾದರೆ, ಏಣೆಲು ಸಾಗುವಳಿಗೆ ಕಾಪು ಇಡುವ ಕ್ರಮವಿದೆ. ಕಂಬಳ ಸಣ್ಣಕ್ಕಿಯ ಬೆಳೆ ಬೆಳೆದು ಪೆರಾರ ಕ್ಷೇತ್ರದ ವರ್ಷಾವಧಿ ಉತ್ಸವದ ಸಂದರ್ಭ ಬುಲೆ ಕಾಣಿಕೆ ನೀಡುವ ಸಂಪ್ರದಾಯ ಬೆಳೆದು ಬಂದಿದೆ.

    ಕಬೆತ್ತಿಗುತ್ತು ಕಂಬಳಕ್ಕೆ ಶತಮಾನದ ಇತಿಹಾಸವಿದೆ. ದುಗ್ಗಣ್ಣ ಬೈದರ ಕಾಲದಿಂದಲೂ ಈ ಕಂಬಳ ನಡೆಯುತ್ತಿದ್ದು ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನಡೆಸುತ್ತಿದ್ದೇವೆ.
    – ಮೋಹನ್ ಪೂಜಾರಿ ಕಬೆತ್ತಿಗುತ್ತು ಯಜಮಾನ

    ಗ್ರಾಮೀಣ ಪ್ರದೇಶದಲ್ಲಿನ ಸಂಪ್ರದಾಯವೊಂದು ಈಗಲೂ ನಡೆಯುತ್ತಿರುವುದು ಅಭಿನಂದನೀಯ. ಆಧುನಿಕತೆಯ ಭರಾಟೆಯಲ್ಲಿಯೂ ಮೋಹನ್ ಪೂಜಾರಿಯವರು ಮೂಲ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನಡೆದುಕೊಂಡು ಬರುತ್ತಿರುವುದು ವಿಶೇಷ.
    – ಡಾ.ಭರತ್ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts