More

    ವಿವಾದಕ್ಕೆ ತೆರೆ ಹಾಕುವ ಕೆ-ರೇರಾ ಪರಿಹಾರ ಕೋಶ ಸಂಧಾನದ ಮೂಲಕ ಮನೆ ಮಾರಾಟ ಮತ್ತು ಖರೀದಿಗೆ ವ್ಯವಸ್ಥೆ

    ದಾಖಲೆಗಳಲ್ಲಿ ಸ್ವಲ್ಪ ಏರುಪೇರಾದರೆ ಅಥವಾ ಕಾನೂನು ತೊಡಕಿದ್ದರೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ನಿರ್ವಿುಸಿದ ವಸತಿ ಗೃಹಗಳು ಮಾರಾಟವಾಗದೆ ಉಳಿದುಬಿಡುತ್ತವೆೆ. ಅದರಿಂದ ಬಿಲ್ಡರ್​ಗಳಿಗೆ ನಷ್ಟವಾಗುತ್ತದೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ಮನೆ ಖರೀದಿಸುವ ಜನರಿಗೆ, ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ.

    ಈ ರೀತಿಯ ಸಮಸ್ಯೆಗಳ ನಿವಾರಣೆಗೆ ಮುಂದಾಗಿರುವ ‘ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ’ ಸಂಧಾನ ಮತ್ತು ವಿವಾದ ಪರಿಹಾರ ಕೋಶ ಸ್ಥಾಪನೆಗೆ ಮುಂದಾಗಿದೆ. ಈ ಮೂಲಕ ನ್ಯಾಯಾಲಯದಲ್ಲಿ ದಾಖಲಾದ, ಹಲವು ವರ್ಷಗಳಿಂದ ಇತ್ಯರ್ಥವಾಗದ ವಿವಾದಗಳನ್ನು ಕೆ-ರೇರಾ ಪರಿಹಾರ ಕೋಶದಲ್ಲಿ ಪರಿಹರಿಸಲಾಗುತ್ತದೆ.

    ಬೆಂಗಳೂರಲ್ಲಿ 5 ವಿಭಾಗ: ನೂತನ ಕೋಶ ರಚನೆ ಮತ್ತು ಅದರ ಕಾರ್ಯವಿಧಾನದ ಕುರಿತಂತೆ ಸುತ್ತೋಲೆ ಹೊರಡಿಸಿರುವ ಕೆ-ರೇರಾ, ‘ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ಐದು ಸಂಧಾನ ನ್ಯಾಯಪೀಠಗಳನ್ನು ರಚಿಸಲಾಗುತ್ತದೆ. ಪ್ರತಿ ನ್ಯಾಯಪೀಠದಲ್ಲಿ ಒಬ್ಬೊಬ್ಬ ಗ್ರಾಹಕ ಪ್ರತಿನಿಧಿ ಮತ್ತು ಬಿಲ್ಡರ್ ಪ್ರತಿನಿಧಿ ಇರುತ್ತಾರೆ. ರೇರಾ ಅಧಿಕಾರಿಗಳು ಸದಸ್ಯರಾಗಿರುತ್ತಾರೆ’ ಎಂದು ಹೇಳಿದೆ.

    ಕೋರ್ ಕಮಿಟಿ ರಚನೆ: ಐದು ನ್ಯಾಯಪೀಠಗಳ ಜತೆಗೆ ಕೋರ್ ಕಮಿಟಿಯನ್ನು ರಚಿಸಲಾಗುತ್ತದೆ. ಸಮಿತಿಯಲ್ಲಿ ಕೆ-ರೇರಾ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಇಬ್ಬರು ಗ್ರಾಹಕ ಪ್ರತಿನಿಧಿಗಳು, ಇಬ್ಬರು ಪ್ರಮೋಟರ್ಸ್ ಸಂಘದ ಪ್ರತಿನಿಧಿಗಳು ಹಾಗೂ ರೇರಾದ ಕಂದಾಯ ವಿಭಾಗದ ಮೂವರು ಅಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿಯು ಕೆ-ರೇರಾ ಪರಿಹಾರ ಕೋಶದ ಉಸ್ತುವಾರಿ ವಹಿಸಲಿದ್ದು, ನಿಯಮ ರೂಪಿಸುವುದು ಸೇರಿ ಇನ್ನಿತರ ಕಾರ್ಯ ಮಾಡಲಿದೆ.

    ಸಂಧಾನ ಹೇಗೆ ನಡೆಯಲಿದೆ?: ಗ್ರಾಹಕ ಅಥವಾ ಬಿಲ್ಡರ್ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅದಾದ ಐದು ದಿನಗಳಲ್ಲಿ ಅರ್ಜಿದಾರ ಎದುರಾಳಿಗೆ ಆ ಕುರಿತು ತಿಳಿಸಲಾಗುತ್ತದೆ. ನಂತರ ಗ್ರಾಹಕ ಮತ್ತು ಬಿಲ್ಡರ್​ಗಳನ್ನು ಎದುರು-ಬದುರು ಕೂರಿಸಿ ಮಾತುಕತೆ ನಡೆಸಲಾಗುತ್ತದೆ. ಜತೆಗೆ ನ್ಯಾಯಪೀಠದಲ್ಲಿನ ಸದಸ್ಯರು ಪರಿಹಾರ ಕ್ರಮಗಳನ್ನು ತಿಳಿಸಿಕೊಡಲಿದ್ದಾರೆ. ಒಂದು ವೇಳೆ ಅದಕ್ಕೆ ಒಪ್ಪಿದರೆ, ಪ್ರಕರಣ ಇತ್ಯರ್ಥಗೊಳಿಸಿ ವಿವಾದ ಬಗೆಹರಿಸಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಒಟ್ಟು 30 ದಿನದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡುವ ಹೊಣೆ ಪ್ರತಿ ನ್ಯಾಯಪೀಠಕ್ಕಿದೆ.

    ವಿಳಂಬಕ್ಕೆ ವಿದಾಯ: ಬೆಂಗಳೂರಿನಲ್ಲಿಯೇ ವಸತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಬಹುದಾಗಿದೆ. ಅಂತಹ ಪ್ರಕರಣಗಳ ಅರ್ಜಿ ಬಂದರೆ ಕೆ-ರೇರಾ ಪರಿಹಾರ ಕೋಶ ಬಗೆಹರಿಸಲಿದೆ. ಆ ಮೂಲಕ ಹಲವು ವರ್ಷಗಳಿಂದ ಬಗೆಹರಿಯದ ಪ್ರಕರಣಗಳು ಇತ್ಯರ್ಥವಾಗಲಿದೆ.

    ಗಿರೀಶ್ ಗರಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts