More

    ಸಾ.ರಾ. ಮಹೇಶ್ ಗೆಲುವಿನ ಓಟಕ್ಕೆ ಬ್ರೇಕ್

    ಅವಿನಾಶ್ ಜೈನಹಳ್ಳಿ ಮೈಸೂರು
    ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ‘ಭತ್ತದ ಕಣಜ’ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ 25,639 ಮತಗಳ ಅಂತರದಿಂದ ವಿಜಯದ ನಗೆ ಬೀರಿದ್ದಾರೆ.

    1,04,502 ಮತ ಪಡೆದ ಡಿ.ರವಿಶಂಕರ್ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕ ಸಾ.ರಾ.ಮಹೇಶ್ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ 24 ವರ್ಷದ ಬಳಿಕ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಿದರು. ಕಳೆದ ಬಾರಿಯ ಸೋಲಿಗೆ ಈ ಸಲ ಮುಯ್ಯಿ ತೀರಿಸಿಕೊಂಡಿದ್ದಾರೆ.

    ಪ್ರಾರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ರವಿಶಂಕರ್ ಮತ ಗಳಿಕೆಯನ್ನು ಹೆಚ್ಚಿಸಿಕೊಂಡೇ ಹೋದರು. ಮಧ್ಯೆ ಎರಡು ಸುತ್ತು ಹೊರತಾಗಿ ಯಾವ ಸುತ್ತಿನಲ್ಲೂ ಹಿಂದಿರುಗಿ ನೋಡಲೇ ಇಲ್ಲ. ಆದರೆ ಜೆಡಿಎಸ್ ಅಭ್ಯರ್ಥಿ ಯಾವ ಸುತ್ತಿನಲ್ಲೂ ಗಣನೀಯ ಪ್ರಮಾಣದಲ್ಲಿ ಮತ ಪಡೆಯಲಿಲ್ಲ. ಇಡೀ ರಾಜ್ಯದಲ್ಲಿ ಸಿದ್ಧಾಂತ, ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ನಡೆಯುತ್ತಿದ್ದರೆ, ಕೆ.ಆರ್.ನಗರದಲ್ಲಿ ಮಾತ್ರ ಪ್ರತಿ ಬಾರಿ ‘ಜಾತಿ’ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಆದರೆ, ರವಿಶಂಕರ್ ಅವರು ಬಹುತೇಕ ಎಲ್ಲ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದನ್ನು ನೋಡಿದರೆ ಈ ಬಾರಿ ‘ಜಾತಿ’ ಮೀರಿದ ಮತದಾನ ನಡೆದಿರುವುದು ಸ್ಪಷ್ಟವಾಗಿದೆ.

    ಕ್ಷೇತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಡಿ.ರವಿಶಂಕರ್ ಕಾರ್ಯಕರ್ತರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಜನಾಶೀರ್ವಾದ ಯಾತ್ರೆ ಮೂಲಕ ಇಡೀ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. 2013ರ ಚುನಾವಣೆಯಲ್ಲಿ ಡಿ.ರವಿಶಂಕರ್ ತಂದೆ ದೊಡ್ಡಸ್ವಾಮಿಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಡಿ.ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್‌ಗೆ ಪೈಪೋಟಿ ನೀಡಿದ್ದರು. ಕಳೆದ ಬಾರಿಯ ಸೋಲಿನ ಅನುಕಂಪ ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಮ ಬಲವೂ ಇವರ ಗೆಲುವಿಗೆ ಪೂರಕವಾಗಿದೆ.

    ದಾಖಲೆ ವೀರನಿಗೆ ಸೋಲು

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತ, ಮಾಜಿ ಸಚಿವ, ದಾಖಲೆ ವೀರ ಸಾ.ರಾ.ಮಹೇಶ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ.
    2018ರ ಚುನಾವಣೆಯಲ್ಲಿ ಕೇವಲ 1,779 ಮತಗಳ ಅಂತರದಿಂದ ಪ್ರಯಾಸದ ಜಯ ಗಳಿಸುವ ಮೂಲಕ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದ ಶಾಸಕ, ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ 78,863 ಮತ ಪಡೆದು ಪರಾಭವಗೊಂಡರು.

    1985 ರ ಚುನಾವಣೆವರೆಗೂ ಕ್ಷೇತ್ರದಲ್ಲಿ ಯಾರೂ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರಲಿಲ್ಲ. 1983, 1985 ಈ ಎರಡೂ ಚುನಾವಣೆಗಳಲ್ಲಿ ಗೆಲುವು ಪಡೆದಿದ್ದ ನಂಜಪ್ಪ ದಾಖಲೆ ನಿರ್ಮಿಸಿದ್ದರು. ಆದರೆ, 2008, 2013 ಹಾಗೂ 2018ರ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆದ್ದಿದ್ದ ಸಾ.ರಾ.ಮಹೇಶ್, ನಂಜಪ್ಪ ಅವರ ದಾಖಲೆ ಮುರಿದಿದ್ದರೂ ಈ ಬಾರಿ ಸೋಲು ಕಂಡರು.

    ಬಿಜೆಪಿ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್ (2,350 ಮತ), ಬಹುಜನ ಸಮಾಜ ಪಾರ್ಟಿಯ ಭರತ್ ಕುಮಾರ್(545), ಆಮ್‌ಆದ್ಮಿ ಪಾರ್ಟಿಯ ಮುರುಗೇಶ್(1,120), ಕರ್ನಾಟಕ ರಾಷ್ಟ್ರ ಸಮಿತಿಯ ಪರಮೇಶ(276), ಉತ್ತಮ ಪ್ರಜಾಕೀಯ ಪಾರ್ಟಿಯ ಕೆ.ಮೋಹನ್(380), ಪಕ್ಷೇತರ ಅಭ್ಯರ್ಥಿ ಶಿವುಗೌಡ(266) ಠೇವಣಿ ಕಳೆದುಕೊಂಡಿದ್ದಾರೆ. 539 ನೋಟಾ ಮತಗಳು ಚಲಾವಣೆಯಾಗಿವೆ.

    2013ರಲ್ಲಿ ನಮ್ಮ ತಂದೆ, 2018ರಲ್ಲಿ ನಾನು ಸೋತಿದ್ದೆ. ಸತತ ಚುನಾವಣೆಗಳಲ್ಲಿ ಸೋತಿದ್ದ ನಮ್ಮನ್ನು ಈ ಬಾರಿ ಮತದಾರರು ಕೈ ಹಿಡಿದಿದ್ದಾರೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಗೆಲ್ಲುತ್ತೇನೆ ಎಂಬ ನಂಬಿಕೆ ಇತ್ತು. ಇದಕ್ಕೆ ಕಾರಣರಾದ ಕ್ಷೇತ್ರದ ಮತದಾರರು ಮತ್ತು ಕಾರ್ಯಕರ್ತರಿಗೆ ನಾನು ಎಂದಿಗೂ ಋಣಿ.
    ಡಿ.ರವಿಶಂಕರ್, ಕೆ.ಆರ್.ನಗರ ಕ್ಷೇತ್ರದ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts