More

    ಜೂ. ಎನ್​ಟಿಆರ್-ನೀಲ್ ಸಿನಿಮಾ ಪಕ್ಕಾ

    ಟಾಲಿವುಡ್ ನಟ ಜ್ಯೂನಿಯರ್ ಎನ್​ಟಿಆರ್​ಗೆ ‘ಕೆಜಿಎಫ್’ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಇದೀಗ ಆ ಸುದ್ದಿ ಅಧಿಕೃತವಾಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ವಿಚಾರವನ್ನು ಹೇಳಿಕೊಂಡಿದ್ದು, 2022ರ ಅಂತ್ಯಕ್ಕೆ ಈ ಸಿನಿಮಾ ಸೆಟ್ಟೇರಲಿದೆ. ‘ಕೆಜಿಎಫ್’ ಚಾಪ್ಟರ್ 2’ ಸಿನಿಮಾ ಮುಗಿಸಿರುವ ಪ್ರಶಾಂತ್ ನೀಲ್, ಸದ್ಯ ಪ್ರಭಾಸ್ ಜತೆಗೆ ‘ಸಲಾರ್’ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಹೈದರಾಬಾದ್​ನ ಹಲವೆಡೆ ಚಿತ್ರೀಕರಣ ಸಹ ನಡೆಯುತ್ತಿದೆ.

    ಇತ್ತ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್​ಆರ್​ಆರ್’ ಚಿತ್ರದ ಶೂಟಿಂಗ್​ನಲ್ಲಿ ಜೂ. ಎನ್​ಟಿಆರ್ ಭಾಗವಹಿಸಿದ್ದು, ಇದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಎನ್​ಟಿಆರ್ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ಅಂದರೆ, 2022ರ ಅಂತ್ಯದಲ್ಲಿ ಪ್ರಶಾಂತ್ ನೀಲ್ ಜತೆ ಅವರು ಕೈ ಜೋಡಿಸಲಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದ್ದು, ಈಗಾಗಲೇ ತೆರೆಮರೆಯಲ್ಲಿಯೇ ಆ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಾಗಿದೆಯಂತೆ. ಅಂದಹಾಗೆ, ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಜುಲೈ 16ಕ್ಕೆ ಬಿಡುಗಡೆ ಆದರೆ, ಅಕ್ಟೋಬರ್ 13ಕ್ಕೆ ಎನ್​ಟಿಆರ್ ನಟನೆಯ ‘ಆರ್​ಆರ್​ಆರ್’ ಬಿಡುಗಡೆ ಆಗಲಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts