More

    ಬೇರೆ ಪ್ರಕರಣಗಳಿಗೆ ತೋರಿದ ಮುತುವರ್ಜಿಯನ್ನು ದ್ವೇಷ ಭಾಷಣಗಳ ಮೇಲೇಕೆ ತೋರಲಿಲ್ಲ?: ದೆಹಲಿ ಪೊಲೀಸರಿಗೆ ಹೈಕೋರ್ಟ್​ ಛೀಮಾರಿ

    ನವದೆಹಲಿ: ದ್ವೇಷಪೂರಿತ ಅಥವಾ ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಎಫ್​ಐಆರ್​ ದಾಖಲಿಸುವಲ್ಲಿ ಎಂದಿಗೂ ವಿಳಂಬ ಮಾಡಬಾರದೆಂದು ಹೇಳುವ ಮೂಲಕ ಇಂತಹ ಪ್ರಕರಣಗಳ ವಿರುದ್ಧ ವಿಳಂಬ ಧೋರಣೆ ಅನುಸರಿಸಿದ ದೆಹಲಿ ಪೊಲೀಸರನ್ನು ದೆಹಲಿ ಹೈಕೋರ್ಟ್​ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

    ಸಿಎಎ ಪರ ಮತ್ತು ವಿರೋಧ ಬಣಗಳಿಂದ ಈಶಾನ್ಯ ದೆಹಲಿಯಲ್ಲಿ ಉಂಟಾದ ಗಲಭೆಯು ಹಿಂಸಾಚಾರಕ್ಕೆ ತಿರುಗಿ ಈವರೆಗೂ 23 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಎಫ್​ಐಆರ್​ ದಾಖಲಿಸಲು ತಕ್ಷಣ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್​ಗೆ ಅರ್ಜಿ ದಾಖಲಾಗಿತ್ತು.

    ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಬಿಜೆಪಿ ನಾಯಕರಾದ ಕಪಿಲ್​ ಮಿಶ್ರಾ, ಅನುರಾಗ್​ ಠಾಕೂರ್​, ಅಭಯ್​ ವರ್ಮಾ ಮತ್ತು ಪರ್ವೇಶ್​ ವರ್ಮಾರ ಪ್ರಚೋದನಾಕಾರಿ ಭಾಷಣಗಳ ವಿಡಿಯೋವನ್ನು ಕೋರ್ಟ್​ನಲ್ಲೇ ಬಹಿರಂಗವಾಗಿ ಪ್ರಸಾರ ಮಾಡಿ, ನೋಡಿದ ಬಳಿಕ ತಕ್ಷಣ ಎಫ್​ಐಆರ್​ ದಾಖಲಿಸಲು ತಾಕೀತು ಮಾಡಿದೆ. ಅಲ್ಲದೆ, ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ದೆಹಲಿ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

    ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟುಮಾಡಿದವರ ವಿರುದ್ಧ ಎಫ್​ಐಆರ್​ ದಾಖಲಿಸಲು ತೋರಿದ ಚುರುಕುತನವನ್ನು ದ್ವೇಷ ಭಾಷಣ ಮಾಡಿದವರ ಮೇಲೇಕೆ ತೋರಲಿಲ್ಲ? ಈಗಲೂ ಅಪರಾಧ ಸ್ಥಿತಿಯನ್ನು ಒಪ್ಪಲು ನೀವು ಬಯಸುವುದಿಲ್ಲವೇ? ಈ ಕ್ಷಣವೇ ಎಫ್​ಐಆರ್​ ದಾಖಲಿಸಿ ಎಂದು ನ್ಯಾಯಮೂರ್ತಿ ಎಸ್​. ಮುರಳೀಧರ್ ನೇತೃತ್ವದ ದ್ವಿಸದಸ್ಯ ಪೀಠವು ನಿರ್ದೇಶನ ನೀಡಿದೆ.​

    ಕೇವಲ ಈ ವಿಡಿಯೋಗಳನ್ನು ಕುರಿತಾಗಿ ಮಾತ್ರ ಕಳವಳ ವ್ಯಕ್ತಪಡಿಸುತ್ತಿಲ್ಲ. ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ದೆಹಲಿ ಪೊಲೀಸ್​ ಆಯುಕ್ತ ಅಮುಲ್ಯ ಪಟ್ನಾಯಕ್​ ಗಮನಕ್ಕೆ ತರಬೇಕು. ಪಟ್ನಾಯಕ್​ ಅವರು ತಕ್ಷಣವೇ ಎಫ್ಐಆರ್​​ ದಾಖಲಿಸಲು ಸೂಚನೆ ನೀಡಬೇಕು. ಇದನ್ನು ಮಾಡುವಾಗ ಪೊಲೀಸ್​ ಆಯುಕ್ತರು ಲಲಿತಾ ಕುಮಾರಿ ಅವರ ಮಾರ್ಗಸೂಚಿಗಳನ್ನು ಖಂಡಿತವಾಗಿ ಅನುಸರಿಸಬೇಕು ಹಾಗೂ ಎಫ್​ಐಆರ್​ ದಾಖಲಿಸದಿದ್ದರೆ ಎದುರಾಗುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ನ್ಯಾಯಾಲಯ ಖಡಾಖಂಡಿತವಾಗಿ ಘೋಷಿಸಿತು.

    ಇದೇ ವೇಳೆ ದೆಹಲಿ ಪೊಲೀಸ್​ ಪರ ವಕೀಲ ತುಷಾರ್​ ಮೆಹ್ತಾರ ಮೂಲಕ ಪೊಲೀಸ್​ ಆಯುಕ್ತರಿಗೆ ಸಂದೇಶವೊಂದನ್ನು ಕಳುಹಿಸಿದ್ದು, ಈ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ತುಂಬಾ ಅಸಮಾಧಾನವಿದೆ ಎಂದು ನ್ಯಾಯಾಲಯ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts