More

    ಕೇವಲ 12 ದಿನದಲ್ಲಿ 5.4 ಸೆಂ.ಮೀ ಕುಸಿದ ಜೋಶಿಮಠ: ಉಪಗ್ರಹ ಚಿತ್ರ ಬಿಡುಗಡೆ ಮಾಡಿದ ಇಸ್ರೋ

    ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿರುವ ಭೂಮಿ ವೇಗವಾಗಿ ಕುಸಿಯುತ್ತಿದ್ದು, ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಕುಸಿದಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವರದಿ ಮಾಡಿದೆ.

    ಭೂಮಿ ಕುಸಿಯುತ್ತಿರುವುದಕ್ಕೆ ಸಂಬಂಧಿಸಿದ ಉಪಗ್ರಹದ ಚಿತ್ರವನ್ನು ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಡಿಸೆಂಬರ್​ 27ರಿಂದ ಜನವರಿ 8ರವರೆಗೆ 5.4 ಸೆಂ.ಮೀ. ಭೂಮಿ ಕುಸಿದಿದೆ.

    ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, 2022ರ ಜನವರಿ 2ರಂದು ಸಂಭವಿಸಿದ ತೀವ್ರ ಕುಸಿತದಿಂದ ಪ್ರಚೋದಿಸಲ್ಪಟ್ಟ ಬಳಿಕ ಭಾರಿ ಪ್ರಮಾಣದ ಭೂಕುಸಿತ ಜೋಶಿಮಠದಲ್ಲಿ ಸಂಭವಿಸುತ್ತಲೇ ಇದೆ. ನರಸಿಂಗ್​ ದೇವಾಲಯ ಮತ್ತು ಸೇನಾ ಹೆಲಿಪ್ಯಾಡ್​ ಒಳಗೊಂಡಿರುವ ಕೇಂದ್ರ ಜೋಶಿಮಠದಲ್ಲಿ ಮಣ್ಣಿನ ತೀವ್ರಗತಿಯ ಕುಸಿತ ಸಂಭವಿಸುತ್ತಿದೆ. ಸುಮಾರು 2180 ಮೀಟರ್ ಎತ್ತರದಲ್ಲಿ ಜೋಶಿಮಠ-ಔಲಿ ರಸ್ತೆಯ ಸಮೀಪದಲ್ಲಿ ಕುಸಿತದ ಕೇಂದ್ರ ಬಿಂದು ಇದೆ ಎಂದು ಇಸ್ರೋ ಹೇಳಿದೆ.

    ಹಿಂದಿನ ತಿಂಗಳುಗಳಲ್ಲಿ ಮಣ್ಣಿನ ಕುಸಿತದ ಪ್ರಮಾಣ ತುಂಬಾ ಕಡಿಮೆ ಇತ್ತು. ಏಪ್ರಿಲ್​ ಮತ್ತು ನವೆಂಬರ್ ನಡುವೆ 9 ಸೆಂ.ಮೀ. ಕುಸಿದಿತ್ತು ಎಂದು ಇಸ್ರೋ ತಿಳಿಸಿದೆ. ಹಿಂದುಗಳ ಪವಿತ್ರ ತಾಣವಾಗಿರುವ ಜೋಶಿಮಠ ಕೆಲ ಕಾಲದಿಂದ ಮುಳುಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಈ ವರ್ಷ ದುರಂತದ ಹಂತಕ್ಕೆ ತಲುಪಿದ್ದು, ಜೋಶಿಮಠದ ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ಉಪಗ್ರಹ ಸಮೀಕ್ಷೆ ಬಳಿಕ ಸುಮಾರು 4 ಸಾವಿರ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

    ಹೋಟೆಲ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, 678 ಮನೆಗಳು ಅಪಾಯದಲ್ಲಿವೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಕೆಲವು ಕಟ್ಟಡಗಳು ಅನಿಶ್ಚಿತವಾಗಿ ವಾಲುತ್ತಿದ್ದು, ಪಕ್ಕದ ಮನೆ ಅಥವಾ ಕಟ್ಟಡಗಳಿಗೂ ಅಪಾಯವನ್ನುಂಟುಮಾಡುತ್ತಿವೆ.

    ಜೋಶಿಮಠದಿಂದ ಕೊಂಚ ದೂರದಲ್ಲಿರುವ ತಪೋವನದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣುಗಢ ಹೈಡಲ್​ ಪ್ರಾಜೆಕ್ಟ್​ ಹೆಸರಲ್ಲಿ ಸುರಂಗ ಕೊರೆಯುತ್ತಿರುವುದರಿಂದಲೇ ಭೂಮಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಆಗಿಂದಾಗ್ಗೆ ಇಲ್ಲಿ ಸ್ಫೋಟದ ಶಬ್ದಗಳು ಕೇಳಿಬರುತ್ತವೆ. ಆದರೆ, ಸರ್ಕಾರ ನಮಗೆ ಈ ಬಗ್ಗೆ ಮಾಹಿತಿಯೇ ನೀಡುತ್ತಿಲ್ಲ ಎಂದು ಕೆಲ ಹೊಟೇಲ್​ ಮಾಲೀಕರು, ಸ್ಥಳಿಯರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಭೂಕುಸಿತಕ್ಕೆ ಬದುಕು ಕತ್ತಲು: ಜೋಶಿಮಠಕ್ಕೆ ಸಿಎಂ ಧಾಮಿ ಭೇಟಿ, ಜನರ ಸ್ಥಳಾಂತರಕ್ಕೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts