More

    ಚುನಾವಣೆ ಮಧ್ಯೆಯೂ ಉದ್ಯೋಗ ಖಾತ್ರಿ

    ವಿಕ್ರಮ ನಾಡಿಗೇರ ಧಾರವಾಡ
    ಪ್ರಸ್ತುತ ವರ್ಷದಲ್ಲಿ ವಿಧಾಸಭಾ ಚುನಾವಣೆ ಮಧ್ಯೆಯೂ ಧಾರವಾಡ ಜಿಲ್ಲಾ ಪಂಚಾಯಿತಿ ಸಮಪರ್ಕಕವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಕಾಮಗಾರಿ ನಡೆಸುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 26 ಲಕ್ಷ ಮಾನವ ಸೃಜನೆ ಗುರಿ ಹೊಂದಿದ್ದು, ಈವರೆಗೆ (ಮಾ.1ರಿಂದ ಜೂ.28) ಶೇ.26.86ರಷ್ಟು ಸಾಧನೆ ಮಾಡಿದೆ.
    ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಸಮಯದಲ್ಲಿ ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಮೂಲಕ ಜಿಪಂ ವಿವಿಧ ಕಾರ್ಯಕ್ರಮ ನಡೆಸುತ್ತಲೇ ನರೇಗಾ ಯೋಜನೆಯಲ್ಲಿ ಮಾನವ ದಿನಗಳ ಸೃಜನೆಗೆ ಆದ್ಯತೆ ನೀಡಿ ಉತ್ತಮ ರೀತಿ ಅನುಷ್ಠಾನಗೊಳಿಸಿರುವುದು ವಿಶೇಷ.
    2023-2024ನೇ ಸಾಲಿನಲ್ಲಿ 26 ಲಕ್ಷ ಮಾನವ ದಿನಗಳ ಸೃಜನೆಗೆ ಕೇಂದ್ರ ಸರ್ಕಾರ ಗುರಿ ನೀಡಿದೆ. ಈಗಾಗಲೇ 3 ತಿಂಗಳಲ್ಲಿ (ಜೂ. 28ರವರೆಗೆ) 6,98,312 ಮಾನವ ದಿನ ಸೃಜನೆಯಾಗಿದೆ. ನಿತ್ಯ ಸಾವಿರಾರು ಜನರು ನರೇಗಾ ಕೆಲಸಕ್ಕೆ ಆಗಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾನವ ದಿನಗಳ ಸೃಜನೆಗೆ ಆಗಲಿವೆ. ಕಳೆದ ವರ್ಷ ಶೇ.90ರಷ್ಟು ಸಾಧನೆ ಮಾಡಲಾಗಿತ್ತು.
    ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಬೆಳಗಿನ ಅವಧಿಯಲ್ಲೇ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆಯುವಂತೆ ಮಾಡಲಾಗಿತ್ತು. ಇದರ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಆಗಮಿಸಿದ್ದಾರೆ. ಮೂರೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜಿಸಿ ಕೆರೆ, ನಾಲಾ, ಬದು ನಿರ್ಮಾಣ, ಅರಣ್ಯೀಕರಣ, ನೈಸರ್ಗಿಕ ಸಂಪನ್ಮೂಲ ಕಾಮಗಾರಿ ನಡೆಸಲಾಗಿದೆ.
    ಕಾರ್ಮಿಕರಿಂದ ಕೆಲಸ ಮಾತ್ರ ಪಡೆಯದೆ ಅವರ ಆರೋಗ್ಯದ ಬಗ್ಗೆ ಸಹ ಅಧಿಕಾರಿಗಳು ಗಮನ ವಹಿಸಿದ್ದಾರೆ. ನರೇಗಾ ಸ್ಥಳಗಳಲ್ಲಿ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್ ಇತರ ರೋಗಗಳ ಕುರಿತು ಸ್ಕ್ರೀನ್ ಟೆಸ್ಟ್ ಮಾಡಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ರೀತಿ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನಿತ್ಯವೂ ಕೂಲಿ ಕೆಲಸ ಒದಗಿಸುವ ಜತೆಗೆ ಆರೋಗ್ಯ ಅಭಿಯಾನ ಮೂಲಕ ಅವರ ಆರೈಕೆ ಮಾಡಲಾಗುತ್ತಿದೆ.
    ಜಿಲ್ಲೆಯಲ್ಲಿ ಧಾರವಾಡ ತಾಲೂಕಿನಲ್ಲೇ ಅತೀ ಹೆಚ್ಚು (1,69,580) ಮಾನವ ದಿನಗಳು ಸೃಜನೆಯಾಗಿವೆ. ರಸ್ತೆ ನಿರ್ಮಾಣ, ಶಾಲಾ ಆವರಣ ಗೋಡೆ, ಶಾಲೆಗಳಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿಗಳು, ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಳೆ ನೀರು ಇಂಗಿಸುವ ಯೋಜನೆ, ಇಂಗುಗುಂಡಿ ರಚನೆ, ಕೃಷಿ ಕಾಯಕಕ್ಕೆ ಪೂರಕ ಕೃಷಿ ಹೊಂಡ ರಚನೆ, ಸ್ವಚ್ಛತೆ-ನೈರ್ಮಲ್ಯಕ್ಕಾಗಿ ಬಚ್ಚಲು ಗುಂಡಿಗಳ ರಚನೆ ಮೊದಲಾದ ಕಾಮಗಾರಿಗಳನ್ನು ಈ ಯೋಜನೆ ಮೂಲಕ ಮಾಡಿಸಲಾಗುತ್ತದೆ.
    ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ನಡೆದ ಹಲವು ಕಾಮಗಾರಿಗಳು ಊರಿನ ಅಭಿವೃದ್ಧಿಗೆ ಪೂರಕವಾಗಿವೆ. ರಸ್ತೆ ನಿರ್ಮಾಣ, ಬದು ನಿರ್ಮಾಣದಿಂದ ನರೇಗಾ ಕೃಷಿಕರ ಪಾಲಿಗೆ ಬಂಧುವಾಗಿವೆ ಎನ್ನುತ್ತಾರೆ ರೈತರು.

    ಯಾವ ತಾಲೂಕಿನಲ್ಲಿ ಎಷ್ಟು ಸಾಧನೆ?: ಅಳ್ನಾವರದಲ್ಲಿ 32763 ಮಾನವ ದಿನಗಳು ಸೃಜನೆಯಾಗಿದ್ದರೆ, ಅಣ್ಣಿಗೇರಿಯಲ್ಲಿ 53723, ಧಾರವಾಡದಲ್ಲಿ 169580, ಹುಬ್ಬಳ್ಳಿಯಲ್ಲಿ 103212, ಕಲಘಟಗಿಯಲ್ಲಿ 164745, ಕುಂದಗೋಳದಲ್ಲಿ 103525, ನವಲಗುಂದದಲ್ಲಿ 70764 ಮಾನವ ದಿನಗಳು ಸೃಜನೆಯಾಗಿವೆ.

    ಮಳೆ ಅಭಾವದಿಂದ ಹೆಚ್ಚಿನ ಜನರು ಕೆಲಸ ಕೇಳುತ್ತಿದ್ದಾರೆ. ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚುವರಿ ಕಾಮಗಾರಿಗಳ ಮಂಜೂರಿಗೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಕ್ರಿಯಾ ಯೋಜನೆ ಕಳುಹಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾನವ ದಿನಗಳು‌ ಸೃಜನೆಯಾಗಲಿವೆ.

    ಸ್ವರೂಪ ಟಿ.ಕೆ, ಸಿಇಒ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts