More

    20ರಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾ

    ಶಿವಮೊಗ್ಗ: ವೈಭವದ ದಸರಾಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ದಸರಾ, ಯೋಗದಸರಾ, ಆಹಾರ ದಸರಾ, ರಂಗದಸರಾ, ಚಲನಚಿತ್ರ ದಸರಾ, ರೈತ ದಸರಾ, ಪರಿಸರ ದಸರಾ, ಮಹಿಳಾ ದಸರಾ, ಕಲಾ ದಸರಾ ಇದ್ದು,ಈ ಬಾರಿ ವಿಶೇಷವಾಗಿ ಅ.20ರಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

    ಶಿವಪ್ಪ ನಾಯಕ ಅರಮನೆ ಆವರಣದಿಂದ ಬೆಳ್ಳಿ ಮಂಟಪದಲ್ಲಿ ಅ.24ರ ಮಧ್ಯಾಹ್ನ 2.30ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೇಯರ್ ಎಸ್. ಶಿವಕುಮಾರ್ ಉದ್ಘಾಟಿಸುವರು. ಈ ಮೆರವಣಿಗೆಯಲ್ಲಿ ದೇವಾನುದೇವತೆಗಳ ಉತ್ಸವ ಮೂರ್ತಿಗಳು ಸಾಗಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹಾಗೂ ಪಾಲಿಕೆ ಸದಸ್ಯರು ಭಾಗವಹಿಸುವರು. ಅಲಂಕೃತ ಚಾಮುಂಡಿ ದೇವಿಯ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರುವ ಆನೆಗಳಾದ ಸಾಗರ್, ನೇತ್ರಾವತಿ, ಹೇಮಾವತಿ ಇವರೊಂದಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಮಂಗಳವಾದ್ಯ ಸೇರಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
    ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಫ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಸಂಜೆ 6.30ಕ್ಕೆ ತಹಸೀಲ್ದಾರ್ ಆರ್.ಪ್ರದೀಪ್ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬನ್ನಿ ಮುಡಿದ ನಂತರ ಆಕರ್ಷಕ ಪಟಾಕಿ ಸಿಡಿಮದ್ದು ರಾವಣದಹನ ನಡೆಯಲಿದೆ ಎಂದರು.
    ವಿವಿಧ ದಸರಾಗಳನ್ನು ಚಲನಚಿತ್ರ ನಟರು, ಹಾಗೂ ಗಣ್ಯರು ಉದ್ಘಾಟಿಸಲಿದ್ದು, ಕುವೆಂಪು ರಂಗಮಂದಿರ, ಅಂಬೇಡ್ಕರ್ ಭವನ, ನೆಹರು ಕ್ರೀಡಾಂಗಣ, ಫ್ರೀಂಡಂ ಪಾರ್ಕ್, ಶಿವಪ್ಪ ನಾಯಕ ಅರಮನೆ, ಸುರ್ವಣ ಸಂಸ್ಕೃತಿ ಭವನದಲ್ಲಿ ವಿವಿಧ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವಿವರಗಳನ್ನು ಶೀಘ್ರದಲ್ಲೆ ಪ್ರಕಟಿಸಲಾಗುವುದು ಎಂದರು.

    ಚಾಮುಂಡೇಶ್ವರಿ ದೇವಿಗೆ ಸೊಂಟದ ಪಟ್ಟಿ
    ಬೆಳ್ಳಿಯ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪ್ರತಿ ವರ್ಷ ಒಂದೊಂದು ರೀತಿಯ ಆಭರಣಗಳನ್ನು ತೊಡಿಸಲಾಗುತ್ತಿದ್ದು, ಈ ಬಾರಿ ಸೊಂಟದ ಪಟ್ಟಿ ಹಾಕಲಾಗುವುದು ಎಂದು ಶಾಸಕ ಚನ್ನಬಸಪ್ಪ ಹೇಳಿದರು. ಅ.20ರಂದು ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಆನೆಗಳ ತಂಡಕ್ಕೆ ಸ್ವಾಗತಿಸಲಾಗುವುದು. ನಂತರ ಮೂರು ದಿನ ಆನೆಗಳ ತಾಲೀಮು ನಡೆಯಲಿದೆ. ಕಳೆದ ವರ್ಷ ಸರ್ಕಾರದ ಒಂದು ಕೋಟಿ ಅನುದಾನ ಸೇರಿ 2.63 ಕೋಟಿ ರೂ. ವೆಚ್ಚದಲ್ಲಿ ವೈಭವದ ದಸರಾ ಆಚರಿಸಲಾಗಿತ್ತು. ಈ ಬಾರಿ ಸರ್ಕಾರಕ್ಕೆ 1.50 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಅದರೆ ಇದುವರೆಗೂ ಇಂತಿಷ್ಟು ಹಣ ಎಂದು ಬಂದಿಲ್ಲ. ಆದರೆ ಪಾಲಿಕೆಯಿಂದಲೇ 2 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಕೊರತೆಯಾಗದಂತೆ ವೈಭವದಿಂದ ಆಚರಿಸಲಾಗುವುದು. ಸರ್ಕಾರದಿಂದ ಹೆಚ್ಚಿನ ಅನುದಾನ ಬಂದಲ್ಲಿ ಇನ್ನೂ ಹೆಚ್ಚಿನ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts