More

    ಜಿಂದಾಲ್ ಕಾರ್ಖಾನೆಗೆ ಭೂಮಿ ಮಾರಾಟಕ್ಕೆ ವಿರೋಧ: ಮೌನ ಮುರಿದ ವಕ್ಫ್ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ

    ಹೊಸಪೇಟೆ: ಬಳ್ಳಾರಿಯ ಜಿಂದಾಲ್ ಕಾರ್ಖಾನೆಗೆ ಭೂಮಿ ಪರಾಭಾರೆಗೆ ಸಂಪುಟ ಸಭೆ ಒಪ್ಪಿಗೆ ನೀಡಿರುವ ಕುರಿತು ವಕ್ಫ್ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆನಂದ ಸಿಂಗ್ ಕೊನೆಗೂ ಮೌನ ಮುರಿದಿದ್ದಾರೆ.

    ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಗೆ ಭೂಮಿ ಮಾರಾಟ ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರ ಬೀಳುವಂತೆ ಮಾಡಿದ್ದ ಆನಂದ ಸಿಂಗ್, ಈಗ ಭೂಮಿ ಪರಾಭಾರೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಯಂತ್ರಣ ಕುರಿತು ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ಕರೆದಿದ್ದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

    ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾದ್ಯಂತ ಸಂಚರಿಸುತ್ತಿದ್ದೇನೆ. ಈ ಕಾರಣಕ್ಕಾಗಿ ಸಂಪುಟ ಸಭೆಯಲ್ಲಿ ಭಾಗಿಯಾಗಿಲ್ಲ. ಅಜೆಂಡಾವನ್ನೂ ನೋಡಿಲ್ಲ. ಸಭೆಯಲ್ಲಿ ಭಾಗವಹಿಸಿದ್ದರೆ ಖಂಡಿತವಾಗಿಯೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೆ. ಈಗಲೂ ನನ್ನ ಮಾತಿಗೆ ನಾನು ಬದ್ಧನಿದ್ದೇನೆ. ಭೂಮಿ ವಾಪಾಸ್ ಪಡೆಯುವ ಅಧಿಕಾರ ಇದ್ದಿದ್ದರೆ ನಾನು ವಾಪಾಸ್ ಪಡೆಯುತ್ತಿದ್ದೆ. ಆದರೆ, ಆ ಅಧಿಕಾರ ನನಗಿಲ್ಲ. ಯಾವುದೇ ಸರ್ಕಾರವಾಗಲಿ ಭೂಮಿಯನ್ನು ಲೀಜ್‌ಗೆ ಕೊಡಬೇಕೇ ವಿನಃ ಅದನ್ನು ಮಾರಾಟ ಮಾಡಬಾರದು. ಜತೆಗೆ ತಾಂತ್ರಿಕ ಕಾರಣಗಳಿಂದ ಕಾರ್ಖಾನೆ ಮುಚ್ಚಿದರೆ ಆ ಭೂಮಿ ಮತ್ತೆ ಸರ್ಕಾರಕ್ಕೆ ಸೇರಬೇಕು ಎನ್ನುವ ರೀತಿಯ ಪಾಲಿಸಿ ಜಾರಿಗೆ ತಂದು ಭೂಮಿ ಮಾರಾಟ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರ ಈ ರೀತಿಯ ತಪ್ಪು ಮಾಡಬಾರದು. ನಾನು ನೇರ ನುಡಿಯುವವನು. ಈಗಲೂ ನನ್ನ ಮಾತಿಗೆ ಬದ್ಧನಿದ್ದೇನೆ ಎಂದರು.

    ಸಿಎಂ ಮತ್ತು ಸಚಿವರು ಕಿಕ್‌ಬ್ಯಾಕ್ ತೆಗೆದುಕೊಂಡಿರಬಹುದು ಎಂದು ಮಾಜಿ ಸಂಸದ ಉಗ್ರಪ್ಪ ಆರೋಪ ಮಾಡಿದ್ದಾರೆ. ಆದರೆ, ಕಿಕ್‌ಬ್ಯಾಕ್‌ನ ಅರ್ಥ ನನಗೆ ಗೊತ್ತಿಲ್ಲ. ಅರ್ಥ ಹೇಳಿದ ಬಳಿಕ ಅದಕ್ಕೆ ನಾನು ಪ್ರತಿಕ್ರಿಯಿಸುವೆ.
    | ಆನಂದ ಸಿಂಗ್ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts