More

    ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ

    ವಿಜಯವಾಣಿ ವಿಶೇಷ ಹಾವೇರಿ

    ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಾಲೂಕುವಾರು ಮೀಸಲಾತಿ ಪ್ರಕಟಗೊಂಡಿದೆ. ಗ್ರಾಪಂವಾರು ಮೀಸಲಾತಿ ಹಂಚಿಕೆ ಮಾತ್ರ ಬಾಕಿಯಿದ್ದು, ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿದೆ.

    ರಾಜಕೀಯೇತರ ಚುನಾವಣೆಯಾದರೂ ಫಲಿತಾಂಶದ ನಂತರ ಯಾರು ಬಿಜೆಪಿ ಬೆಂಬಲಿತರು, ಯಾರು ಕಾಂಗ್ರೆಸ್ ಬೆಂಬಲಿತರು? ಎಂಬುದು ನಿಧಾನವಾಗಿ ಬಹಿರಂಗವಾಗುತ್ತಿದೆ.

    ಜಿಲ್ಲೆಯ 209 ಗ್ರಾಪಂಗಳಿಗೆ ನೂತನ ಸದಸ್ಯರು ಆಯ್ಕೆಯಾಗುತ್ತಿದ್ದಂತೆಯೇ ಕೈ, ಕಮಲ ನಾಯಕರು ವಿಧಾನಸಭೆ ಕ್ಷೇತ್ರವಾರು ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸುವ ನೆಪದಲ್ಲಿ ಒಂದೆಡೆ ಸೇರಿಸಿ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸನ್ಮಾನ ಕಾರ್ಯಕ್ರಮಕ್ಕೆ ಹೊಸ ಸದಸ್ಯರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಪಕ್ಷದ ಮುಖಂಡರಿಗೆ ವಹಿಸಲಾಗಿದೆ.

    ಎರಡೂ ಕಡೆ ಸನ್ಮಾನ: ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂಬ ದೃಷ್ಟಿಯಿಂದ ಕೆಲ ಸದಸ್ಯರು ಕೈ, ಕಮಲ ಪಕ್ಷದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎರಡೂ ಕಡೆ ಕಾಣಿಸಿಕೊಂಡ ಸದಸ್ಯರನ್ನು ಗುರುತಿಸಿ ಮನವೊಲಿಸುವ ಕಾರ್ಯದಲ್ಲಿ ಮುಖಂಡರು ತೊಡಗಿದ್ದಾರೆ. ಆದರೆ, ಮೀಸಲಾತಿ ಅಧಿಕೃತಗೊಂಡ ನಂತರ ನಿಲುವು ತಿಳಿಸುವುದಾಗಿ ಸದಸ್ಯರು ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಕೆಲವರು ಹಗಲಲ್ಲಿ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡರೆ, ರಾತ್ರಿಯಾಗುತ್ತಿದ್ದಂತೆ ಮತ್ತೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.

    ತಂತ್ರಗಾರಿಕೆ: ಜಾತಿ, ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಅನೇಕರು ಗೆಲುವು ಸಾಧಿಸಿದ್ದಾರೆ. ಕೆಲವರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದಾರೆ. ಅಂತಹವರನ್ನು ಸೆಳೆಯಲು ರಾಜಕೀಯ ನಾಯಕರು ತಂತ್ರಗಾರಿಕೆ ನಡೆಸಿದ್ದಾರೆ. ಪಂಚಾಯಿತಿವಾರು ಒಟ್ಟು ಸದಸ್ಯರಲ್ಲಿ ಯಾರು, ಯಾವ ಪಕ್ಷದವರು, ಯಾರು ತಟಸ್ಥರು ಎಂಬುದನ್ನು ಗುರುತಿಸಿ ಪಟ್ಟಿ ಮಾಡುವಲ್ಲಿ ನಾಯಕರು ನಿರತರಾಗಿದ್ದಾರೆ. ಮೀಸಲಾತಿ ಪ್ರಕಟಗೊಂಡ ಕೂಡಲೆ ಸಂಖ್ಯಾಬಲದ ಕೊರತೆ ಕಂಡು ಬಂದರೆ ತಟಸ್ಥರನ್ನು ಸೆಳೆದುಕೊಳ್ಳುವ ಲೆಕ್ಕಾಚಾರವಿದೆ.

    ಗೆದ್ದವರೆಲ್ಲರೂ ನಮ್ಮವರೆ: ನೂತನ ಸದಸ್ಯರನ್ನು ಆಯಾ ಕ್ಷೇತ್ರದ ಶಾಸಕರು ಔಪಚಾರಿಕವಾಗಿ ಸನ್ಮಾನಿಸುತ್ತಿದ್ದಾರೆ. ಪಕ್ಷದ ಬೆಂಬಲಿತರಲ್ಲದ ಸದಸ್ಯರೂ ಶಾಸಕರ, ವಿವಿಧ ಪಕ್ಷಗಳ ಮುಖಂಡರ ಮನೆಗಳಿಗೆ ಹೋಗಿ ಸನ್ಮಾನ ಸ್ವೀಕರಿಸುತ್ತಿದ್ದಾರೆ. ಇದನ್ನೇ ಗಾಳವಾಗಿಸಿಕೊಂಡ ಕೆಲ ಮುಖಂಡರು, ‘ಗೆದ್ದವರೆಲ್ಲರೂ ನಮ್ಮವರೆ. ಗ್ರಾಪಂ ಗದ್ದುಗೆ ನಮ್ಮದೇ’ ಎನ್ನುತ್ತಿದ್ದಾರೆ. ತಮ್ಮೂರ ಗ್ರಾಪಂ ಕೈ ವಶ ಮಾಡಿಕೊಳ್ಳಬೇಕು. ಕಮಲ ಅರಳಬೇಕು ಎಂಬ ಛಲದೊಂದಿಗೆ ಬಿರುಸಿನ ಚಟುವಟಿಕೆ ನಡೆಸಿದ್ದಾರೆ. ಆಯಾ ಕ್ಷೇತ್ರದ ಜಿಪಂ, ತಾಪಂನ ಸೋತ ಹಾಗೂ ಗೆದ್ದ ಸದಸ್ಯರ ಹೆಗಲಿಗೆ ಈ ಕಾರ್ಯವನ್ನು ಹೊರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts