More

    ಫೈನಲ್ ತಲುಪಿದ ಜಾರ್ಖಂಡ್, ಚಂಡೀಗಢ


    ಹಿರಿಕರ ರವಿ ಸೋಮವಾರಪೇಟೆ
    ಪಟ್ಟಣದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಭಾನುವಾರ ನಡೆದ 17 ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಜಾರ್ಖಂಡ್ ಮತ್ತು ಚಂಡೀಗಢ ತಂಡಗಳು ಫೈನಲ್ ಪ್ರವೇಶಿಸಿವೆ.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಪಂದ್ಯಾವಳಿ ಆಯೋಜಿಸಲಾಗಿದೆ.
    ವೇಗ ಹಾಗೂ ಚುರುಕಿನ ಆಟಕ್ಕೆ ಹೆಸರಾದ ಆಟಗಾರರನ್ನು ಹೊಂದಿರುವ ಜಾರ್ಖಂಡ್ ತಂಡವು ಮಧ್ಯಪ್ರದೇಶ ವಿರುದ್ಧ 7-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.
    ಮಧ್ಯಪ್ರದೇಶ ತಂಡವು ಲೀಗ್ ಹಾಗೂ ಕ್ವಾರ್ಟರ್ ಫೈನಲ್ ಹಂತದಲ್ಲಿ ಉತ್ತಮ ಆಟವಾಡಿ ಬಲಿಷ್ಠ ತಂಡವಾಗಿ ಗಮನ ಸೆಳೆದಿದ್ದರೂ ಜಾರ್ಖಂಡ್ ತಂಡದ ಸಮಯೋಚಿತ ಆಟಕ್ಕೆ ಶರಣಾಗಬೇಕಾಯಿತು. ಜಾರ್ಖಂಡ್ ತಂಡದ ರೋಷನಿ ಮತ್ತು ಸುಶ್ಮಿತಾ ಲಾಕ್ರಾ ತಲಾ ಎರಡು ಗೋಲು ಗಳಿಸಿದರೆ, ಅನುಪ್ರಿಯಾ, ಜಮುನಾ, ಲಿಯೋನಿ ಹೆಮ್ರಾಮ್ ತಲಾ ಒಂದು ಗೋಲು ಗಳಿಸಿದರು. ಜಾರ್ಖಂಡ್ ತಂಡವು 6 ಫೀಲ್ಡ್ ಗೋಲುಗಳನ್ನು ಮತ್ತು ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ದಾಖಲಿಸಿತು.
    ದಿನದ ಎರಡನೇ ಸೆಮಿಫೈನಲ್ ಪಂದ್ಯ ಚಂಡೀಗಢ ಮತ್ತು ಮಣಿಪುರ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡುಬಂಡರೂ ಚಂಡೀಗಢ ತಂಡ ಮಣಿಪುರ ತಂಡವನ್ನು 4-2 ಗೋಲುಗಳಿಂದ ಮಣಿಸಿತು. ಮಣಿಪುರ ತಂಡಕ್ಕೆ 8 ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ಒಂದನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಚಂಡೀಗಢ ತಂಡದ ಪ್ರತಿಭಾವಂತ ಮುನ್ನಡೆ ಆಟಗಾರ್ತಿ ತಮನ್ನಾ 4 ಗೋಲು ದಾಖಲಿಸಿದರು. ಮಣಿಪುರ ತಂಡದ ಲೈಸ್ರಮ್ ಕರ್ವಾ ಹಾಗೂ ಹೈಡ್ರೋವ್ ತಲಾ ಒಂದು ಫೀಲ್ಡ್ ಗೋಲು ದಾಖಲಿಸಿದರು.

    ಇಂದಿನ ಪಂದ್ಯಗಳು : ಸೋಮವಾರ ಬೆಳಗ್ಗೆ 10 ಗಂಟೆಗೆ ಮಣಿಪುರ ಮತ್ತು ಮಧ್ಯಪ್ರದೇಶ ತಂಡಗಳ ನಡುವೆ ಮೂರನೇ ಸ್ಥಾನಕ್ಕೆ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3ಕ್ಕೆ ಜಾರ್ಖಂಡ್ ಮತ್ತು ಚಂಡೀಗಢ ತಂಡದ ನಡುವೆ ಅಂತಿಮ ಪಂದ್ಯಾಟ ನಡೆಯಲಿದೆ.

    ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನ, ಇಲ್ಲಿನ ಕೀಡಾಪ್ರೇಮಿಗಳಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತಿತ್ತು. ಈ ಹಿಂದೆ ಇಲ್ಲಿನ ಮೈದಾನದಲ್ಲಿ ಬ್ಲೂಸ್ಟಾರ್ ಹಾಕಿ ಸಂಸ್ಥೆ ಹಲವು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಸೈ ಎನಿಸಿತ್ತು. ಇದೇ ಮೈದಾನದಲ್ಲಿ ಆಟವಾಡಿದ ಒಲಂಪಿಯನ್‌ಗಳಾದ ಬಿ.ಪಿ.ಗೊವೀಂದ, ಅರ್ಜುನ್ ಹಾಲಪ್ಪ, ಎಸ್.ವಿ.ಸುನಿಲ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅದೇ ರೀತಿ ಹಲವು ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡುಗೆಯಾಗಿ ನೀಡಿದ ಈ ಮೈದಾನದಲ್ಲಿ ಹಲವು ವರ್ಷಗಳಿಂದ ದೊಡ್ಡಮಟ್ಟದ ಕ್ರೀಡಾಕೂಟ ನಡೆದಿರಲಿಲ್ಲ.


    ಟರ್ಫ್ ಮೈದಾನ ಉದ್ಘಾಟನೆಗೊಂಡ ಮಾರನೇ ದಿನವೇ ರಾಷ್ಟಮಟ್ಟದ ಪಂದ್ಯಾಟಗಳು ನಡೆದಿರುವುದು ಹಾಕಿ ಪ್ರೇಮಿಗಳು ಸಂಭ್ರಮ ಪಡುವಂತಾಯಿತು. ಜ.4ರಂದು ಮಳೆ ನಡುವೆಯೇ ಹಾಕಿ ಪಂದ್ಯ ನಡೆಸಲಾಗಿತ್ತು. ಆಟಗಾರ್ತಿಯರಿಗೆ ಶೀತ ಜ್ವರ ಬರಬಹುದೆಂದು ಕ್ರೀಡಾಪ್ರೇಮಿಗಳು ಅಂದುಕೊಂಡರು. ಆದರೆ ಮಾರನೇ ದಿನ ಎಲ್ಲರೂ ಎಂದಿನಂತೆ ಆಟವಾಡಿದರು. ಯಾರೂ ಅನಾರೋಗ್ಯಕ್ಕೆ ತುತ್ತಾಗಲಿಲ್ಲ. ನಂತರದ ದಿನಗಳಲ್ಲಿ ಚುಮುಚುಮು ಚಳಿಯಲ್ಲೇ ಪ್ರತಿಭಾವಂತ ಆಟಗಾರ್ತಿಯರು ತಮ್ಮ ಕೈಚಳಕ ತೋರಿಸಿ ಹಾಕಿ ಪ್ರೇಮಿಗಳಿಂದ ಚಪ್ಪಾಳೆ ಗಿಟ್ಟಿಸಿದರು.


    ಸೆಮಿಫೈನಲ್ ಭಾನುವಾರ ನಡೆದ ಹಿನ್ನೆಲೆಯಲ್ಲಿ ಸ್ಟೇಡಿಯಂನಲ್ಲಿ ಕ್ರೀಡಾಪ್ರೇಮಿಗಳು ಕಿಕ್ಕಿರಿದು ತುಂಬಿದ್ದರು. ಬರೆ ಮತ್ತು ಕಟ್ಟಡದ ಮೇಲೆಲ್ಲ ಜನರು ನಿಂತು ವನಿತೆಯರ ಆಟವನ್ನು ಕಣ್ತುಂಬಿಕೊಂಡರು. ಪ್ರೇಕ್ಷಕರು ನಾಲ್ಕು ತಂಡಗಳಿಗೂ ಪ್ರೋತ್ಸಾಹಿಸಿದರು. ಗೋಲು ಹೊಡೆದಾಗ ಚಪ್ಪಾಳೆ ತಟ್ಟಿ ತಮ್ಮ ಕ್ರೀಡಾ ಪ್ರೇಮವನ್ನು ತೋರ್ಪಡಿಸುತ್ತಿದ್ದದ್ದು ಕಂಡುಬಂತು.

    ಶಾಸಕರಿಂದ ಆಟಗಾರ್ತಿಯರಿಗೆ ಶುಭಹಾರೈಕೆ: ಶಾಸಕ ಮಂತರ್‌ಗೌಡ ಸೈಮಿಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಇಂತಹ ಪಂದ್ಯಾಟ ಇಲ್ಲಿ ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆ. ಹಾಕಿ ಕ್ರೀಡೆಯ ತವರಾದ ಕೊಡಗಿನಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುದರಿಂದ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ ಸಿಗಲಿದೆ ಎಂದರು.

    ಮಿಂಚಿದ ತಮ್ಮನ್ನಾ: 2ನೇ ಸೇಮೀಸ್‌ನಲ್ಲಿ ಚಂಡೀಗಢ ತಂಡಕ್ಕೆ ಸಿಕ್ಕಿದ ನಾಲ್ಕು ಫೀಲ್ಡ್ ಗೋಲುಗಳನ್ನು ಮುನ್ನೆಡೆ ಆಟಗಾರ್ತಿ ತಮನ್ನಾ ಹೊಡೆಯುವ ಮೂಲಕ ಮಿಂಚಿ, ಹಾಕಿ ಪ್ರೇಮಿಗಳ ಪ್ರೀತಿಗೆ ಪಾತ್ರರಾದರು. 17, 27, 40, 65, ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಪ್ರೇಕ್ಷಕರಿಂದಲೂ ಬಹುಮಾನಗಳನ್ನು ಪಡೆದರು.

    ಊಟ ಮತ್ತು ವಸತಿ ವ್ಯವಸ್ಥೆ: ತೋಳೂರುಶೆಟ್ಟಳ್ಳಿಯ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಾಕಿ ತಂಡಗಳಿಗೆ ಊಟ ಮತ್ತು ವಸತಿ ಕಲ್ಪಿಸಲಾಗಿತ್ತು. ಮೈದಾನದಿಂದ ಶಾಲಾ ವ್ಯಾನ್‌ಗಳ ಮೂಲಕ ಆಟಗಾರರನ್ನು ಕಳುಹಿಸಿಕೊಡಲಾಗಿತ್ತು. ಒಂದೊಂದು ತಂಡದ ಜವಾಬ್ದಾರಿಯನ್ನು ಇಬ್ಬರು ಶಿಕ್ಷಕಿಯರು ವಹಿಸಿದ್ದರು. ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಹಾಗೂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

    ತೀರ್ಪುಗಾರರು: ಡ್ಯಾನಿ ಈರಪ್ಪ, ನಾಣಯ್ಯ, ಡ್ಯಾನಿ ದೇವಯ್ಯ, ಸಿ.ಎನ್.ಆದರ್ಶ್, ಎಂ.ಎ.ಅಯ್ಯಪ್ಪ, ಕೆ.ಸಿ.ಬೋಪಣ್ಣ, ಕೆ.ಕೆ.ಬೋಪಣ್ಣ, ಅರುಣ್, ಶಿವಣ್ಣ, ಎಚ್.ಎನ್.ರತೀಶ್. ಕ್ರೀಡಾಕೂಟದ ಉಸ್ತುವಾರಿಗಳಾಗಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ಸದಾಶಿವ ಪಲ್ಲೇದ್, ತಾಂತ್ರಿಕಾ ವಿಭಾಗದಲ್ಲಿ ಪಿ.ಈ.ನಂದ, ಗಣೇಶ್ ಕುಮಾರ್, ಸುರೇಶ್ ಕುಮಾರ್, ದರ್ಶನ್ ಸೋಮಣ್ಣ, ಎಲ್.ಪಿ.ಪಾಲಾಕ್ಷ, ಅಮೃತ್, ಮೋಹನ್, ಕೆ.ಎನ್.ರಮೇಶ್, ಸಂತೋಷ್, ಆಶೋಕ್, ಶಿವಪ್ರಸಾಧ್, ಸಂದೇಶ್, ಮಂಜು, ಬೋಪಣ್ಣ, ಲಿನ್ನಿ, ಕವಿತ, ವೀಕ್ಷಕ ವಿವರಣೆಕಾರರಾಗಿ ಅಪಾಡಂಡ ಮೌನ ದರ್ಶನ್, ಮೇಘನಾ, ಅಂತೋಣಿ, ವರದರಾಜು, ಬಿ.ಟಿ.ಪೂರ್ಣೇಶ್ ಕಾರ್ಯನಿರ್ವಹಿಸಿದರು.

    ಪಂದ್ಯಾವಳಿಗೆ ಶಹಬ್ಬಾಸ್ ಹೇಳಿದ ಕೇಂದ್ರದ ವೀಕ್ಷಕರು: ದೆಹಲಿಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ವೀಕ್ಷರಾಗಿ ಆಗಮಿಸಿದ್ದ ರಾಜ್‌ಶರ್ಮಾ, ಕೃಷ್ಣಪ್ಪ, ವಿಜಯಲಕ್ಷ್ಮೀಭಟ್ ಜಿಲ್ಲೆಯಲ್ಲಿ ಆಯೋಜಿಸಿರುವ ಹಾಕಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಊಟ, ವಸತಿಗೆ ಯಾವುದೇ ತೊಂದರೆಯಾಗಿಲ್ಲ. ಮೈದಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವೈದಕೀಯ ಸೇವೆ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳು ತಕ್ಷಣ ದೊರೆತಿವೆ. ಎಲ್ಲ ತಂಡಗಳ ವ್ಯವಸ್ಥಾಪಕರು ಮತ್ತು ಆಟಗಾರ್ತಿಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾಡಳಿತ, ಮತ್ತು ದೈಹಿಕ ಶಿಕ್ಷಣ ಸಂಸ್ಥೆಯ ಶಿಕ್ಷಕರ ಪ್ರಯತ್ನ ಶ್ಲಾಘನೀಯ. ತೀರ್ಪುಗಾರಿಕೆ ಕೂಡ ಉತ್ತಮವಾಗಿತ್ತು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts