ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!

gold
Published on

ಬೆಂಗಳೂರು: ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲರಿ ಮಳಿಗೆ ಮಾಲೀಕನಿಂದ 10 ಕೆ.ಜಿ. ಚಿನ್ನದ ಬಿಸ್ಕತ್ ಪಡೆದಿದ್ದ ಆಭರಣ ತಯಾರಕ, 4.5 ಕೆ.ಜಿ. ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆರ್​ಎಂವಿ ಲೇಔಟ್ ನಿವಾಸಿ ಸುನೀಲ್​ಕುಮಾರ್ ವಂಚನೆ ಗೊಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಸುರೇಶ್ ಆಚಾರಿ (37) ಎಂಬಾತನ ವಿರುದ್ಧ ಉಪ್ಪಾರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸುನೀಲ್​ಕುಮಾರ್ ಕಳೆದ 5 ವರ್ಷದಿಂದ ಗಾಂಧಿನಗರದ 5ನೇ ಕ್ರಾಸ್​ನಲ್ಲಿ ಜ್ಯುವೆಲರಿ ಮಳಿಗೆ ಇಟ್ಟುಕೊಂಡಿದ್ದಾರೆ. ಅದೇ ಕಟ್ಟಡ ಕೊಠಡಿಯೊಂದರಲ್ಲಿ ಸುರೇಶ್ ಆಚಾರಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ. ಸುನೀಲ್​ಗೆ ಸಂಬಂಧಿಸಿದ ಆಭರಣಗಳನ್ನು ಸುರೇಶ್ ತಯಾರಿಸಿಕೊಡುತ್ತಿದ್ದ. 2018ರಲ್ಲಿ ಏಕಾಏಕಿ ಅಂಗಡಿ ಮುಚ್ಚಿಕೊಂಡು ಹೋಗಿದ್ದ. ಇದೇ ಜನವರಿಯಲ್ಲಿ ಮರಳಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಗಡಿ ತೆರೆದಿರಲಿಲ್ಲ. ಇನ್ನು ಮುಂದೆ ಕೆಲಸ ಮಾಡುತ್ತೇನೆ ಎಂದಿದ್ದ.

ಆತನ ಮಾತನ್ನು ನಂಬಿದ ಸುನೀಲ್, ಆಭರಣ ತಯಾರಿಸಿಕೊಡುವಂತೆ ಸೂಚಿಸಿ ಹಂತಹಂತವಾಗಿ 10 ಕೆ.ಜಿ. ಚಿನ್ನದ ಬಿಸ್ಕತ್ ಕೊಟ್ಟಿದ್ದರು. ಇದರಲ್ಲಿ 5.5 ಕೆಜಿ ಚಿನ್ನಾಭರಣ ತಯಾರಿಸಿಕೊಟ್ಟಿದ್ದ. ಉಳಿದ 4.5 ಕೆಜಿ ಚಿನ್ನದ ಬಿಸ್ಕತ್​ನಲ್ಲಿ ಆಭರಣ ತಯಾರಿಸಿಕೊಟ್ಟಿರಲಿಲ್ಲ. ಇತ್ತೀಚೆಗೆ ಕರೆ ಮಾಡಿದಾಗ ಸುರೇಶ್ ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚಿಸಿರುವುದು ಗೊತ್ತಾಗಿ ದೂರು ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net