More

    ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್

    ಮಡಿಕೇರಿ:

    ಮತದಾನಕ್ಕೆ ಇನ್ನು ಒಂದು ವಾರ ಇರುವಾಗಲೇ ಮಾಜಿ ಸಚಿವ ಬಿ.ಎ. ಜೀವಿಜಯ ಕಾಂಗ್ರೆಸ್‌ಗೆ ಗುಡ್ ಬೈ ಹೇಳುವ ಮೂಲಕ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿರುವ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಎಸ್. ಅನಂತಕುಮಾರ್ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದು, ಇನ್ನು ಹಲವು ಅಸಮಾಧಾನಿತರು ಇದೇ ದಾರಿ ಹಿಡಿಯುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ ಒಳಗಿನ ಪ್ರಸ್ತುತ ಬೆಳವಣಿಗೆಗಳನ್ನು ಮೌನವಾಗಿ ಗಮನಿಸುತ್ತಿರುವ ಬಿಜೆಪಿ ಪಾಳೆಯ ಒಳಗೊಳಗೆಯೇ ಖುಷಿ ಪಡುತ್ತಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ.

    ಮುಖ್ಯಮಂತ್ರಿಯಾಗಿದ್ದ ದಿ. ಆರ್. ಗುಂಡೂರಾವ್ ಅವರನ್ನೇ ಸೋಲಿಸಿದ ಹೆಗ್ಗಳಿಕೆಯ ಮಾಜಿ ಸಚಿವ ಬಿ.ಎ. ಜೀವಿಜಯ ಅವರಿಗೆ ವಯಸ್ಸಾಗಿದ್ದರೂ ಅವರ ರಾಜಕೀಯ ಸಾಮರ್ಥ್ಯವನ್ನು ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಜೀವಿಜಯ ಅವರು ಈ ಹಿಂದೆ ಎದುರಿಸಿದ್ದ ಚುನಾವಣೆಗಳೇ ಸಾಕ್ಷಿ. ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಜೀವಿಜಯ, ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಪಕ್ಷಕ್ಕೆ ೨ನೇ ಸ್ಥಾನ ತಂದು ಕೊಟ್ಟಿದ್ದರು. ೨೦೦೮ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಜೀವಿಜಯ ಆಗಲೂ ೨ನೇ ಸ್ಥಾನದಲ್ಲಿದ್ದರು. ಜಿಲ್ಲೆಯಲ್ಲಿ ವ್ಯಯಕ್ತಿಕ ನೆಲೆಯಲ್ಲಿ ಭದ್ರ ಮತ ಬ್ಯಾಂಕ್ ಹೊಂದಿರುವ ಏಕೈಕ ವ್ಯಕ್ತಿ ಬಿ.ಎ. ಜೀವಿಜಯ ಎನ್ನುವುದು ಕೂಡ ಎಲ್ಲಾ ರಾಜಕಾರಣಿಗಳಿಗೆ ತಿಳಿದ ವಿಷಯವಾಗಿದೆ. ಹಾಗಾಗಿಯೇ ಜೀವಿಜಯ ಅವರ ಪ್ರತಿಯೊಂದು ರಾಜಕೀಯ ನಡೆಯೂ ಕುತೂಹಲಕ್ಕೆ ಕಾರಣವಾಗಿರುತ್ತದೆ.

    ಜೆಡಿಎಸ್‌ನಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ ಬಿ.ಎ. ಜೀವಿಜಯ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ನಿಮಗೇ ಟಿಕೆಟ್ ಕೊಡುತ್ತೇವೆ ಎಂದು ಜೀವಿಜಯ ಅವರಿಗೆ ಭರವಸೆಯನ್ನೂ ನೀಡಿದ್ದರು. ಜಿಲ್ಲೆಯಿಂದ ಶಿಫಾರಸ್ಸಾದ ಎರಡು ಹೆಸರುಗಳಲ್ಲಿ ಜೀವಿಜಯ ಹೆಸರು ಕೂಡ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪುವುದು ಖಚಿತವಾಗುತ್ತಿದ್ದಂತೆಯೇ ಕೆಪಿಸಿಸಿಗೆ ಪತ್ರ ಬರೆದ ಜೀವಿಜಯ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ಕೊಡದಂತೆ ಮನವಿ ಮಾಡಿದ್ದರು. ಆದರೂ ಹೈ ಕಮಾಂಡ್ ಡಾ. ಮಂಥರ್ ಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಜೀವಿಜಯ ಸಿಟ್ಟಾದರು.

    ಕಾಂಗ್ರೆಸ್ ಟಿಕೆಟ್ ಘೋಷಣೆ ನಂತರ ಎಲ್ಲಿಯೂ ಅಧಿಕೃತ ಹೇಳಿಕೆ ನೀಡದಿದ್ದ ಜೀವಿಜಯ ತೆರೆಮರೆಯಲ್ಲೇ ರಾಜಕೀಯದಾಟ ಮುಂದುವರಿಸಿದ್ದರು. ಕಾಂಗ್ರೆಸ್‌ನ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಹರಪಳ್ಳಿ ರವೀಂದ್ರ ಅವರನ್ನು ಮುಂದಿಟ್ಟುಕೊಂಡು ತಮ್ಮ ಸಾಮರ್ಥ್ಯಕ್ಕೂ ಮುಂದಾಗಿದ್ದರು. ಆದರೆ ಹೈಕಮಾಂಡ್ ಜತೆ ರಾಜೀಯಾದ ರವೀಂದ್ರ ಮತ್ತೆ ಡಿ.ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆಯೇ ಜೀವಿಜಯ ಅನಿವಾರ್ಯವಾಗಿ ತಮ್ಮ ನಡೆ ಬದಲಿಸಿಕೊಳ್ಳಬೇಕಾಗಿತ್ತು. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಸ್ವತಃ ಸಂಧಾನಕ್ಕೆ ಮುಂದಾದರೂ ಜೀವಿಜಯ ಜಗ್ಗಲಿಲ್ಲ. ಪಕ್ಷದ ಹಿರಿಯ ಕಿರಿಯ ನಾಯಕರು ಜೀವಿಜಯ ಮನೆಗೆ ಭೇಟಿ ನೀಡಿ ಮಾತಕತೆ ನಡೆಸಿದರೂ ಪಟ್ಟು ಸಡಿಲಿಸದೇ ಮೌನವಾಗಿಯೇ ಇದ್ದರು.

    ಇದೀಗ ಮಂಗಳವಾರ ’ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,’ ಎನ್ನುವ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜೀವಿಜಯ ಕಳುಹಿಸಿದ್ದಾರೆ. ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಭಾವಿ ನಾಯಕರೂ ಆಗಿರುವ ಬಿ.ಎ. ಜೀವಿಜಯ ಅವರ ಈ ನಿರ್ಧಾರ ಕೊಡಗಿನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ಮಡಿಕೇರಿ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳ ಮೇಲೆ ಕಟ್ಟಿಟ್ಟಿರುವ ಪಕ್ಷದ ಅಭ್ಯರ್ಥಿ ಡಾ. ಮಂಥರ್ ಗೌಡ ಅವರಿಗೂ ಇದು ದೊಡ್ಡ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.

    ಜೀವಿಜಯ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಅಡ್ಡಗೋಡೆ ದೀಪ ಇಟ್ಟ ರೀತಿಯಲ್ಲಿ ಮಾತನಾಡಿದ್ದಾರೆ. ಕೊಡಗಿನ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಜೀವಿಜಯ ಹೇಳುತ್ತಿದ್ದಾರಾದರೂ ಅಪ್ಪಚ್ಚು ರಂಜನ್ ಅಥವಾ ನಾಪಂಡ ಮುತ್ತಪ್ಪ ಈ ಇಬ್ಬರಲ್ಲಿ ಯಾರು ಇವರ ಆಯ್ಕೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಇಬ್ಬರ ಬಗ್ಗೆ ಒಲವಿದ್ದಂತೆ ಮಾತನಾಡುತ್ತಾರಾದರೂ ರಂಜನ್ ಬಗ್ಗೆ ಒಂದು ಮುಷ್ಠಿ ಹೆಚ್ಚು ಪ್ರೀತಿ ಇದ್ದಂತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಜೀವಿಜಯ ಪ್ರಭಾವ ಯಾರ ಮೇಲೆ ಹೆಚ್ಚು ಪ್ರಭಾವ ಎನ್ನುವುದಕ್ಕೆ ಸ್ಪಷ್ಟ ಪುರಾವೆ ಸಿಗಬೇಕಿದ್ದರೆ ಫಲಿತಾಂಶ ದಿನದ ತನಕ ಕಾಯಬೇಕು.

    ಒಂದು ಕಡೆ ರಾಜೀನಾಮೆ ನೀಡುವ ಮೂಲಕ ಪ್ರಭಾವಿ ಒಕ್ಕಲಿಗ ಮುಖಂಡ ಜೀವಿಜಯ ಕಾಂಗ್ರೆಸ್‌ಗೆ ಶಾಕ್ ನೀಡಿದ್ದರೆ, ಮತ್ತೊಂದು ಕಡೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಿ.ಎಸ್. ಅನಂತಕುಮಾರ್ ತಾವು ಕಾಂಗ್ರೆಸ್ ತೊರೆಯುವುದು ನಿಶ್ಚಿತ ಎಂದಿದ್ದಾರೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಪಕ್ಷವನ್ನು ಈ ಭಾಗದಲ್ಲಿ ಅತ್ಯುತ್ತಮವಾಗಿ ಸಂಘಟಿಸುತ್ತಿದ್ದ ಇವರನ್ನು ಏಕಾಏಕಿ ಈ ಸ್ಥಾನದಿಂದ ತೆಗೆದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಕೊಡಲಾಗಿತ್ತು. ತಮ್ಮ ಗಮಕ್ಕೆ ತಾರದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಗಿರಿಯಿಂದ ತೆಗೆದಿದ್ದಕ್ಕೆ ಅನಂತ್‌ಕುಮಾರ್ ಸಿಟ್ಟಾಗಿದ್ದರು. ನಂತರದ ದಿನಗಳಲ್ಲಿ ಒಲ್ಲದ ಮನಸ್ಸಿನಿಂದಲೇ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದರು. ಆದರೆ ಈಗ ಇಲ್ಲಿಯೂ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವುದು ಅನಂತ್‌ಕುಮಾರ್ ಆರೋಪ. ಕ್ಷೇತ್ರದ ಅಭ್ಯರ್ಥಿ ವರ್ತನೆಗಳ ಬಗ್ಗೆಯೂ ಆಕ್ಷೇಪಗಳು ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಹೊರಬರಲು ನಿರ್ಧರಿಸಿರುವುದಾಗಿ ಅನಂತ್‌ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ. ಇನ್ನೂ ಕೆಲವು ಪ್ರಮುಖರು ಕೂಡ ಇದೇ ರೀತಿಯ ಚಿಂತನೆಯಲ್ಲಿದ್ದು, ಇನ್ನು ಒಂದೆರಡು ದಿನಗಳಲ್ಲಿ ಮತ್ತಷ್ಟು ಮಂದಿ ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

    ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ಚಂದ್ರಮೌಳಿ ಹೆಸರನ್ನು ಕೆಪಿಸಿಸಿ ವಕ್ತಾರ ಲಕ್ಷ್ಮಣ, ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಅವರು ಶಿಫಾರಸ್ಸು ಮಾಡಿದ್ದರು. ಆದರೆ ಶಿಫಾರಸ್ಸಿನಲ್ಲಿ ಇಲ್ಲದ ಡಾ. ಮಂಥರ್ ಗೌಡ ಅವರಿಗೆ ಟಿಕೆಟ್ ನೀಡಲಾಯಿತು. ಆಗಲೂ ನನ್ನನ್ನು ಕೆಪಿಸಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೊರ ಜಿಲ್ಲೆಯವರಿಗೆ ಟಿಕೆಟ್ ಕೊಡಬೇಡಿ ಎಂದು ಪತ್ರ ಬರೆದಿದ್ದೆ. ಆದರೆ ಆ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ನಾನು ರಾಜೀನಾಮೆ ನೀಡುತ್ತೇನೆ ಎಂದಾಗಲೂ ಸೌಜನ್ಯಕ್ಕೂ ಮಾತನಾಡಿಸಿಲ್ಲ.
    ಬಿ.ಎ. ಜೀವಿಜಯ, ಮಾಜಿ ಶಾಸಕ

    ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆಗೆ ಒಂದೆರಡು ಕಾರಣಗಳಲ್ಲ. ಬೇಕಾದಷ್ಟು ಕಾರಣಗಳಿವೆ. ಇನ್ನು ೨ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ನನ್ನ ರಾಜಕೀಯ ನಡೆ ಬಗ್ಗೆಯೂ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ.
    ಬಿ.ಎಸ್. ಅನಂತಕುಮಾರ್, ಉಪಾಧ್ಯಕ್ಷ, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts