More

    ಪಕ್ಷಕ್ಕೆ ದುಡಿದವರಿಗೆ ಅವಕಾಶ ಕೊಡಲಿ: ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣ ಆಗ್ರಹ

    ಮಂಡ್ಯ: ಮೂರು ದಶಕ ಜೆಡಿಎಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಆದ್ದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಏ.19ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ನಗರಸಭೆ ಮಾಜಿ ಉಪಾಧ್ಯಕ್ಷ, ಮುಡಾ ಮಾಜಿ ಸದಸ್ಯ ಎಂ.ಜೆ.ಚಿಕ್ಕಣ್ಣ ಎಚ್ಚರಿಕೆ ನೀಡಿದರು.
    ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧಿಸಲು ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ. ಅಂತೆಯೇ ಹಾಲಿ ಶಾಸಕ ಎಂ.ಶ್ರೀನಿವಾಸ್ ಸ್ಪರ್ಧೆ ಮಾಡಿದರೂ ಸಹಮತವಿದೆ. ಒಂದು ವೇಳೆ ಶ್ರೀನಿವಾಸ್ ಸ್ಪರ್ಧೆಯಿಂದ ಹಿಂದೆ ಸರಿದರೆ ಹಿರಿತನದ ಆಧಾರದ ಮೇಲೆ ನನಗೆ ಅವಕಾಶ ನೀಡಬೇಕು. ಅದನ್ನು ಬಿಟ್ಟು ಉಳಿದಂತೆ ಯಾರಿಗೆ ಅವಕಾಶ ನೀಡಿದರೂ ತೀವ್ರ ವಿರೋಧವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈಗ ಬಿ ಫಾರ್ಮ್ ಆಕಾಂಕ್ಷಿತರಾಗಿರುವವರು ಪಕ್ಷಕ್ಕಾಗಿ ಏನು ಸೇವೆ ಸಲ್ಲಿಸಿದ್ದಾರೆ. ಹಿಂದೆಲ್ಲ ಚುನಾವಣೆಗೆ ಮುನ್ನ ಆಕಾಂಕ್ಷಿತರಿಂದ ಅರ್ಜಿ ಕರೆಯುವ ಸಂಪ್ರದಾಯವಿತ್ತು. ಅದರಂತೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಬಯಸಿ 10 ಸಾವಿರ ರೂ ಜತೆಗೆ ಅರ್ಜಿ ಸಲ್ಲಿಸಿದ್ದೆ. ಆದರೀಗ ಅರ್ಜಿ ಕರೆಯುವುದರ ಬದಲಿಗೆ ಒಂದಷ್ಟು ಜನರನ್ನು ಕರೆದುಕೊಂಡು ಹೋಗಿ ಇವರೇ ಆಕಾಂಕ್ಷಿತರೆಂದು ಜಿಲ್ಲಾಧ್ಯಕ್ಷ ಡಿ.ರಮೇಶ್ ಹೇಳಿರುವುದು ಸರಿಯಲ್ಲ. ಎಚ್‌ಡಿಕೆ ಅಭಿಮಾನಿ ಸಂಘದ ಅಧ್ಯಕ್ಷನಾಗಿ ಪ್ರತಿ ವರ್ಷ ಅವರ ಜನ್ಮದಿನವನ್ನು ಸಾಮಾಜಿಕ ಚಟುವಟಿಕೆ ಮೂಲಕ ಆಯೋಜಿಸುತ್ತಾ ಬಂದಿದ್ದೇನೆ. ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ ಚಲನಚಿತ್ರದ ಬ್ಯಾನರ್‌ಗಳನ್ನು ಜಿಲ್ಲೆಯಲ್ಲಿ ಕಟ್ಟಿಸಿದ್ದೇನೆ. ಹೀಗಿರುವಾಗ ನನ್ನ ಹಿರಿತನವನ್ನು ಪರಿಗಣಿಸದಿರುವುದು ಬೇಸರದ ವಿಷಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಕಳೆದ ವಿಧಾನಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡದ ಪರಿಣಾಮ ನಾಲ್ಕು ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು. ಹಲವು ಹಿರಿಯ ಮುಖಂಡರು ಪಕ್ಷ ಬಿಟ್ಟು ಹೋಗುತ್ತಿದ್ದರೂ ಮನವೊಲಿಸುವ ಕೆಲಸವನ್ನು ಜಿಲ್ಲಾಧ್ಯಕ್ಷರು ಮಾಡುತ್ತಿಲ್ಲ. ಹೀಗಾದರೆ ಚುನಾವಣೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಪಕ್ಷದ ವರಿಷ್ಠರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಜತೆಗೆ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts