More

    ಜಿ ಕ್ಯಾಟಗರಿ ನಿವೇಶನಕ್ಕಾಗಿ ಶಾಸಕರಾಗಬೇಕೆ?: ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಜನತೆ ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು 35 ವರ್ಷ ಆಡಳಿತ ನಡೆಸಿದಲ್ಲದೆ ಮುಖ್ಯಮಂತ್ರಿಯ ಬಳಿ ಹಲ್ಲುಗಿಂಜಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಜಿ ಕ್ಯಾಟಗರಿ ನಿವೇಶನಗಳನ್ನು ಪಡೆಯಲು ಶಾಸಕರಾಗಬೇಕೇ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ನೇರ ವಾಗ್ದಾಳಿ ನಡೆಸಿದರು.
    ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಮೈಸೂರಿನಲ್ಲಿ ವಾಸಿಸಲು ನಿರ್ಮಿಸಿಕೊಂಡಿರುವ ಮನೆ ಫೋಟೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚುತ್ತಿರುವುದು ನಿಮಗೆ ಸಮಂಜಸವೇ?. ಸಾರ್ವಜನಿಕರಿಗಾಗಿ ಶಾಲೆ, ಆಸ್ಪತ್ರೆ ನಿರ್ಮಿಸಲು ಜಮೀನು ದಾನ ಮಾಡಿ, ಸಮಾಜಕ್ಕೆ ಹಲವು ಬಳುವಳಿ ನೀಡಿರುವ ಚುಂಚೇಗೌಡರ ಕುಟುಂಬಸ್ಥರು ಒಂದು ಮನೆ ಕಟ್ಟಿಕೊಂಡರಲ್ಲ ಎಂಬ ಸಮಾಧಾನ ಮತದಾರರಿಗೆ ಇದೆ ಎಂಬ ಅರಿವು ನಿಮಗಿರಲಿ ಎಂದು ಟಾಂಗ್ ನೀಡಿದರು.
    ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳು ದಾಖಲಾಗಿಲ್ಲ. ನಮ್ಮೊಂದಿಗಿದ್ದ ಕೆಲವರನ್ನು ನೀವು ಖರೀದಿಸಿ ನನ್ನ ವಿರುದ್ದ ಹೇಳಿಕೆ ಕೊಡಿಸುತೀರಿ. ಇಂತಹವರೇ ವಾರದ ಹಿಂದೆ ನಮ್ಮ ಜೀವಮಾನದಲ್ಲಿ ಇಂತಹ ಶಾಸಕರ ಅಭಿವೃದ್ದಿಯನ್ನು ಎಂದು ಕಂಡಿರಲಿಲ್ಲವೆಂದು ಹೇಳಿಕೆ ನೀಡಿ ಈಗ ಸರಿಯಿಲ್ಲ ಎಂದರೆ ಏನರ್ಥವೆಂದು ಪ್ರಶ್ನಿಸಿದ ಅವರು, ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿರುವ ಅಫಿಡವಿಡ್‌ನಲ್ಲಿ ಇರುವ ನಿಮ್ಮ ಸಂಪತ್ತಿನ ಮೌಲ್ಯವನ್ನು ಬಹಿರಂಗ ಪಡಿಸಿ. ಆ ಮೂಲಕ ನಿಮ್ಮ ನೈಜ್ಯತೆ ಜನರಿಗೆ ಅರಿವಾಗಲಿ. 35 ವರ್ಷಗಳ ಕಾಲ ನಿಮ್ಮ ಕುಟುಂಬಕ್ಕೆ ಅಧಿಕಾರ ನೀಡದ ಜೆಡಿಎಸ್ ಪಕ್ಷ ಹಾಗೂ ಕಾರ್ಯಕರ್ತರನ್ನು ತಬ್ಬಲಿಯಾಗಿಸಿ ವರಿಷ್ಠರಿಗೆ ವಂಚಿಸಿ ಹಣದಾಸೆಗೆ ಕಾಂಗ್ರೆಸ್‌ಗೆ ರಮೇಶ ಬಂಡಿಸಿದ್ದೇಗೌಡ ಮಾರಾಟವಾಗಿದ್ದಾರೆಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನೀವು ಉತ್ತರಿಸಬೇಕೆಂದು ಆಗ್ರಹಿಸಿದರು.
    ನನ್ನ ಅಧಿಕಾರಾವಧಿಯಲ್ಲಿ ಶ್ರೀರಂಗಪಟ್ಟಣದ ರಂಗನಾಥ ಕಾಲನಿ, ಅಲ್ಲಾಪಟ್ಟಣ, ಬೆಳಗೊಳ ವ್ಯಾಪ್ತಿಯ ಕೆಳಮಂಟಿ ಹಾಗೂ ಕೆಆರ್‌ಎಸ್ ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಲಾಗಿದೆ. ಇದು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ. ನಿಮ್ಮ ಕುಟುಂಬ ಅಧಿಕಾರದಲ್ಲಿದ್ದಾಗ ದೇವೇಗೌಡರು, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರಲಿಲ್ಲವೇ ಎಂದು ತಿರುಗೇಟು ನೀಡಿದ ಅವರು, 35 ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದ ಜನರಿಗೆ ಸುಳ್ಳುಗಳ ಮೂಲಕ ವಂಚನೆ ಮಾಡಿರುವ ನಿಮಗೆ ಕ್ಷೇತ್ರದ ಮತದಾರರು ಏಕೆ ಅಧಿಕಾರ ನೀಡಬೇಕು. ನನ್ನ ಕೈಲಾದಷ್ಟೆ ಅಭಿವೃದ್ಧಿಯನ್ನು ನೀವು ಮಾಡಿದ್ದರೆ ಶ್ರೀರಂಗಪಟ್ಟಣ ಕ್ಷೇತ್ರವಿಂದು ಒಂದಷ್ಟು ಅಭಿವೃದ್ಧಿ ಕಾಣುತ್ತಿರಲಿಲ್ಲವೇ ಪ್ರಶ್ನಿಸಿದರು.
    ಎಸ್.ಎಂ.ಕೃಷ್ಣ ಅವರನ್ನು ಅವಮಾನಿಸಿದ ಘಟನೆಯಿಂದ ಮನನೊಂದು ನಾನು ಗೌರವದಿಂದ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇನೆ. ಆದರೆ ನೀವು ಜೆಡಿಎಸ್‌ನಲ್ಲಿ ಅಪಾರ ರಾಜಕೀಯ ಲಾಭ ಪಡೆದು ದ್ರೋಹವೆಸಗಿ ಕಾಂಗ್ರೆಸ್ ಬಂದು ಇದೊಂದು ದರಿದ್ರ ಪಕ್ಷ, ಅದರ ಚಿಹ್ನೆ ಮುಚ್ಚಿ ಮತ ಹಾಕಿ ಎಂದು ಪ್ರಚಾರ ನಡೆಸುತ್ತೀರಿ. ಸ್ವಾಭಿಮಾನಿ ಕಾಂಗ್ರೆಸಿಗರು ನಿಮಗೆ ಮತ ಹಾಕಲು ಸಾಧ್ಯವೇ. ಚೊಚ್ಚಲ ಅವಧಿಯಲ್ಲೆ ಸದನದಲ್ಲಿ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದೇನೆ. ಈ ಮೂಲಕ ಕ್ಷೇತ್ರದ ಮತದಾರರ ಗೌರವವನ್ನು ಎತ್ತಿ ಹಿಡಿದಿದ್ದೇನೆ. ಆದರೆ ನೀವು ಶಾಸಕರಾಗಿದ್ದಾಗ ಸದನದಲ್ಲಿ ಮಾತನಾಡಿರುವ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
    ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯರಾದ ಎ.ಎಚ್.ನಾರಾಯಣ, ಮರೀಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಪೈಲ್ವಾನ್ ಮುಕುಂದ, ಗೀತಾ ರವೀಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts