More

    ರಾಜ್ಯ, ಜಿಲ್ಲೆಯ ಪರವಾಗಿ ಜೆಡಿಎಸ್ ನಾಯಕರು ಧ್ವನಿ ಎತ್ತುತ್ತಿಲ್ಲ

    ಮಂಡ್ಯ ಸೀಟಿಗಾಗಿ ಹತ್ತಾರು ಬಾರಿ ದೆಹಲಿಗೆ ಹೋಗಿ ಬಂದಿರುವ ಜೆಡಿಎಸ್ ನಾಯಕರು ಬರ ಪರಿಹಾರ, ಕಾವೇರಿ ನೀರು ಹಾಗೂ ಕರ್ನಾಟಕ ಪಾಲಿನ ತೆರಿಗೆ ಹಂಚಿಕೆ ವಿಚಾರವಾಗಿ ಏಕೆ ಹೋಗಲಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ಹರಿಹಾಯ್ದರು.


    • ಪಾಂಡವಪುರ ತಾಲೂಕಿನ ಜಯಂತಿನಗರ ಸಮೀಪ ಶುಕ್ರವಾರ ರಾತ್ರಿ ಆಯೋಜಿಸಿದ್ದ ರೈತಸಂಘ, ಸರ್ವೋದಯ ಕರ್ನಾಟಕ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ದೇವೇಗೌಡರು ಕೆ.ಆರ್.ಪೇಟೆಯಲ್ಲಿ ಯಾವುದೋ ಕ್ವಾರಿ ನಿಲ್ಲಿಸಿದ್ದಕ್ಕೆ ಪ್ರತಿಭಟನೆ ಮಾಡುತ್ತೇನೆ ಎನ್ನುತ್ತಾರೆ. ಆದರೆ, ರಾಜ್ಯದ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಯಾವ ಪ್ರತಿಭಟನೆಯನ್ನೂ ಮಾಡಲಿಲ್ಲ. ಕುಮಾರಸ್ವಾಮಿ ಗಿರಿವಿ ಇಟ್ಟಿರುವ ಒಡವೆ ಸಹಿತ ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಆದರೆ, ಮಾಡಲಿಲ್ಲ. ರೈತರು ನಾಲೆಗಳಿಗೆ ನೀರು ಹರಿಸಿ ಎಂದು ಮನವಿ ಮಾಡಿದರೆ ಅಣೆಕಟ್ಟೆಯ ಬೀಗದ ಕೀ ದೆಹಲಿಯಲ್ಲಿದೆ ಹೋಗಿ ಹಿಸ್ಕೋಳ್ಳಿ ಎಂದು ಉದಾಸೀನಾ ಮಾತುಗಳನ್ನಾಡಿದ್ದರು. ನಾವ್ಯಾರು ಆ ರೀತಿಯ ಮಾತುಗಳನ್ನಾಡಿಲ್ಲ. ಸಿದ್ದರಾಮಯ್ಯ ಅವರು ಮಂಡ್ಯ ವಿರೋಧಿಯಲ್ಲ. ಕೇಳಿದ ತಕ್ಷಣ ನೂತನ ಸಕ್ಕರೆ ಕಾರ್ಖಾನೆ ಹಾಗೂ ಕೃಷಿ ವಿಶ್ವವಿದ್ಯಾನಿಲಯಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದಾರೆ ಎಂದು ಹೇಳಿದರು.

    • ತೆರಿಗೆ ಹಣಕ್ಕಾಗಿ ಸುಪ್ರೀಂ ಮೊರೆ : ಹಿಂದಿನ ಎಲ್ಲ ಸರ್ಕಾರಗಳು ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ ತಿಂಗಳೊಳಗೆ ಕೇಂದ್ರ ತಂಡದಿಂದ ಅಧ್ಯಾಯನ ನಡೆಸಿ ಬರ ಪರಿಹಾರದ ಮೊತ್ತ ಬಿಡುಗಡೆ ಮಾಡುತ್ತಿದ್ದವು. ನಾವು ಮನವಿ ಮಾಡಿ 6 ತಿಂಗಳು ಕಳೆದರೂ ಮೋದಿ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ರಾಜ್ಯದ ಪಾಲಿನ ನ್ಯಾಯಯುತವಾದ ತೆರಿಗೆ ಹಣವನ್ನು ಪಾವತಿಸದೆ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಕೇಂದ್ರ ಬರ ಪರಿಹಾರ ನೀಡದಿದ್ದರೂ, ರಾಜ್ಯ ಸರ್ಕಾರ 2ಸಾವಿರ ರೂ. ಪರಿಹಾರ ನೀಡಿದೆ. ಕೇಂದ್ರ ಸರ್ಕಾರದ ತಾರತಮ್ಯ ಮತ್ತು ರಾಜ್ಯದ ಪಾಲಿನ ಹಣಕ್ಕಾಗಿ ಕ್ಯಾಬಿನೆಟ್ ಒಪ್ಪಿಗೆ ಪಡೆದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದರು.

    • ಗ್ಯಾರಂಟಿ ಇಲ್ಲವಾಗಿದ್ದರೆ ಓಡಾಡಲು ಆಗುತ್ತಿರಲಿಲ್ಲ : ಬರದ ನಡುವೆ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಡದಿದ್ದರೆ ಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳು ರಸ್ತೆಯಲ್ಲಿ ಓಡಾಡಲು ಜನ ಬಿಡುತ್ತಿರಲಿಲ್ಲ. ಹೊಟ್ಟೆ ತುಂಬಿದವರಿಗೆ ಗ್ಯಾರಂಟಿಗಳ ಅವಶ್ಯಕತೆ ಇಲ್ಲ. ಬಡವರಿಗೆ ಇದು ಅನಿವಾರ್ಯವಾಗಿದೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ. ಹಣದ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿದೆ. ಐದು ವರ್ಷದ ಅವಧಿಯಲ್ಲಿ ಹೇಮಾವತಿ, ವಿಶ್ವೇಶ್ವರಯ್ಯ ನಾಲೆಯನ್ನು ಸಂಪೂರ್ಣ ಆಧುನೀಕರಣ ಮಾಡಲಾಗುವುದು ಎಂದು ತಿಳಿಸಿದರು.

    • ಪುಟ್ಟರಾಜು ನೋಡಿದ್ರೆ ಅಯ್ಯೋ ಅನಿಸುತ್ತದೆ : ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಜೆಡಿಎಸ್‌ನಲ್ಲಿ ದೊಡ್ಡ ಲೀಡರ್ ಆಗಿದ್ದಾರೆ. ಅವರನ್ನು ನೋಡಿದ್ರೆ ಅಯ್ಯೋ ಪಾಪ ಎನಿಸುತ್ತಿದೆ. ಆತ ನನಗೂ ಒಳ್ಳೇ ಸ್ನೇಹಿತ. ನನಗಿಂತ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಜತೆ ಹೆಚ್ಚಿನ ಸ್ನೇಹವಿದೆ. ಬೆಳೆದಿರುವ ಅವರ ಬಗ್ಗೆ ಕಾಮೆಂಟ್ ಮಾಡಲು ಹೋಗಲ್ಲ. ಲೋಕಸಭಾ ಚುನಾವಣೆ ಟಿಕೆಟ್ ಸಿಕ್ಕೇ ಬಿಟ್ಟಿತ್ತು ಎಂದು ನನ್ನ ಬಗೆಯೂ ಮಾತನಾಡಿದರು. ಆದರೆ ಉಲ್ಟಾ ಆಗೋಗಿದೆ. ಈಗ ನಾನೇ ಮುಂದೆ ನಿಂತು ಎಚ್‌ಡಿಕೆ ಗೆಲ್ಲಿಸುತ್ತೇನೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    • ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಬೆಂಬಲಿಸಲು ರೈತಸಂಘ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ನಾವೆಲ್ಲರೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೇವೂ ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವಿಗೆ ಶ್ರಮಿಸಬೇಕು. ಸಣ್ಣ ಪುಟ್ಟ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಬೂತ್ ಮಟ್ಟದಲ್ಲಿ ದುಡಿಯಬೇಕು ಎಂದು ಕರೆ ನೀಡಿದರು.

    • ಐದು ಗ್ಯಾರಂಟಿಗಳ ಫಲ ತಕ್ಷಣ ತಿಳಿಯಲ್ಲ. ವಾರ್ಷಿಕವಾಗಿ 52 ಸಾವಿರ ಕೋಟಿ ರೂ.ಗಳನ್ನು ಜನರಿಗೆ ನೀಡುತ್ತಿದ್ದೇವೆ. ಇದರ ಫಲ ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಗ್ಯಾರಂಟಿಗಳಿಂದ ವ್ಯಕ್ತಿಯ ಕೊಳ್ಳುವಿಕೆ ಹೆಚ್ಚಾಗಿದೆ. ಅಂಗಡಿ, ಮುಂಗಟ್ಟುಗಳಲ್ಲಿ ವ್ಯಾಪಾರ ಅಧಿಕವಾಗಿದೆ. ಜನರ ಬಳಿ ಹಣ ಇದ್ದರೆ ನೆಮ್ಮದಿ ಇರುತ್ತದೆ, ನೆಮ್ಮದಿ ಇದ್ದರೆ ಆರೋಗ್ಯ ಇರುತ್ತದೆ ಹೀಗೆ ಗ್ಯಾರಂಟಿ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.

    • ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ನಾಗಮಂಗಲ ತಾಲೂಕಿನ ಕನ್ನಾಘಟ್ಟ ಗ್ರಾಮದ ಒಂದು ಸಣ್ಣ ಕುಟುಂಬದಿಂದ ಬಂದ ನನ್ನನ್ನು ಜಿಲ್ಲಾ ಮತ್ತು ರಾಜ್ಯ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಎಂದು ಆಯ್ಕೆ ಮಾಡಿದ್ದಾರೆ. ನನಗೆ ಮತ ನೀಡಿ ಗೆಲ್ಲಿಸಿದರೆ ರೈತರ ಪರವಾಗಿ ಇದ್ದು, ಜಿಲ್ಲೆಯನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

    • ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಚ್.ಬಿ.ರಾಮು, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಬಿ.ರೇವಣ್ಣ, ಎಚ್.ತ್ಯಾಗರಾಜು ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ರವಿ ಬೋಜೇಗೌಡ, ಹೊನಗಾನಹಳ್ಳಿ ಕೃಷ್ಣೇಗೌಡ, ರೈತಸಂಘ ಮುಖಂಡರಾದ ಕೆನಾಳು ನಾಗರಾಜು, ಎಸ್.ದಯಾನಂದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts