More

    ಹೊಸ ಪ್ರತಿಭೆಗಳಿಗೆ ಜವಾಬ್ದಾರಿ

    ಚಿಕ್ಕಮಗಳೂರು: ಗ್ರಾಮ ಮಟ್ಟದಿಂದ ಪಕ್ಷ ಕಟ್ಟಬೇಕೆಂದರೆ ಪ್ರತಿಯೊಬ್ಬರೂ ನಿಷ್ಠೆಯಿಂದ ಕೆಲಸ ಮಾಡಬೇಕು. ಈ ಕಾರಣಕ್ಕಾಗಿ ಹೊಸ ಪ್ರತಿಭೆಗಳಿಗೆ ಜವಾಬ್ದಾರಿಯುತ ಸ್ಥಾನ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹಾಗೂ ವೀಕ್ಷಕ ಹೊದಿಗೆರೆ ರಮೇಶ್ ಹೇಳಿದರು.

    ನಗರ ಹೊರವಲಯದ ಎಐಟಿ ವೃತ್ತದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಪಕ್ಷದಿಂದ ಹಮ್ಮಿಕೊಂಡಿದ್ದ ವೀಕ್ಷಕರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.

    ರಾಜ್ಯದೆಲ್ಲೆಡೆ ಜೆಡಿಎಸ್ ಹೋರಾಟ, ಸಮಾಜಸೇವೆ ಮಾಡುತ್ತದೆ. ಆದರೆ ಕೊನೆಗೆ ಬಂಡವಾಳ ಹಾಕಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್​ನವರು ಮನೆಯಲ್ಲಿ ನಿದ್ದೆ ಮಾಡುತ್ತಾರೆ ಎಂದು ಟೀಕಿಸಿದರು.

    ಬಿಜೆಪಿಗೆ ಆರ್​ಎಸ್​ಎಸ್, ವಿಎಚ್​ಪಿ, ಬಜರಂಗದಳ ವಿವಿಧ ಸಂಘಟನೆಗಳು ಪಕ್ಷಕ್ಕೆ ಬಲ ತುಂಬಿವೆ. ಅದಕ್ಕೆ ಸರಿಯಾಗಿ ಬಂಡವಾಳ ತೊಡಗಿಸಿ ಲಾಭಗಳಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಹಾಗಾಗಿ ರೈತರು, ನಿರುದ್ಯೋಗಿಗಳು, ಕಾರ್ವಿುಕರನ್ನು ಲೆಕ್ಕಕ್ಕಿಟ್ಟುಕೊಂಡಿಲ್ಲ ಎಂದು ದೂರಿದರು.

    ವೀಕ್ಷಕಿ ನಜ್ಮಾ ನಜೀರ್ ಮಾತನಾಡಿ, ಜಿಲ್ಲೆಯ ಅಲ್ಪಸಂಖ್ಯಾತರು, ದಲಿತರು, ನೊಂದವರು, ಜಾತ್ಯತೀತ ಮನಸ್ಸುಗಳ ಪರ ಧ್ವನಿ ಎತ್ತುವ ಪಕ್ಷ ಜೆಡಿಎಸ್. ಯಾವುದೆ ಕಾರ್ಯಕರ್ತರು ಗಟ್ಟಿಯಾಗಿ ನಿಂತರೆ ಮುಂದೆ ರಾಜಕೀಯದಲ್ಲಿ ಭವಿಷ್ಯವಿದೆ ಎಂಬುದಾದರೆ ಅದು ಜೆಡಿಎಸ್​ನಲ್ಲಿ ಮಾತ್ರ ಎಂದು ಹೇಳಿದರು.

    ಬಿಜೆಪಿ ಪ್ರಮುಖರು ಒಂದು ರಸ್ತೆ ಮಾಡಿಸಿ ಒಂದು ತಿಂಗಳು ಸಾಮಾಜಿಕ ಜಾಲತಾಣದಲ್ಲಿ ನಾವು ಮಾಡಿದ ಕೆಲಸ ಎಂದು ಪ್ರಚಾರ ಗಿಟ್ಟಿಸುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಇದ್ದಾಗ ರಸ್ತೆ, ನೀರಾವರಿ ಯೋಜನೆ, ಜನಪರ ಕಾರ್ಯಕ್ರಮ ನೀಡಿದರೂ ನಮ್ಮ ಕಾರ್ಯಕರ್ತರು ಮೌನವಾಗಿದ್ದುದು ತಪ್ಪು. ಚಿಕ್ಕಮಗಳೂರಲ್ಲಿ ನಮ್ಮ ಜಾತ್ಯತೀತ ಸಿದ್ದಾಂತವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ ಎಂದರು.

    ಜೆಡಿಎಸ್ ಮಾಜಿ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಸವಾಲೊಡ್ಡುವ ಶಕ್ತಿಯಿದ್ದರೆ ಅದು ಜೆಡಿಎಸ್​ಗೆ ಮಾತ್ರ. ಕಾರಣ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಯಲುಸೀಮೆ ಮತ್ತು ಮಲೆನಾಡು ಭಾಗಕ್ಕೆ ನಿರೀಕ್ಷೆಗೂ ಮೀರಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.

    ಕಳಸ ತಾಲೂಕು ಕೇಂದ್ರವಾಗಿ ಘೊಷಣೆ ಮಾಡಿದ್ದು ಜೆಡಿಎಸ್ ಸರ್ಕಾರ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಅದು ತಿಳಿದಿದ್ದರೂ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸಿಗರು ಬಿಜೆಪಿ ಮುಖಂಡರ ಮನೆಗೆ ತೆರಳಿ ಸನ್ಮಾನ ಮಾಡುತ್ತಾರೆಂದರೆ ಇದಕ್ಕಿಂತ ಅವಮಾನ ಇನ್ನೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಉಪಸಭಾಪತಿ ಎಸ್.ಎಲ್.ಧಮೇಗೌಡ ಅವರ ನಿಧನದಿಂದ ಆಘಾತಕ್ಕೊಳಗಾಗಿ ಪಕ್ಷ ಸಂಘಟನೆಯಲ್ಲಿ ಕೊಂಚ ಹಿಂದುಳಿದಿದ್ದೇವೆ ಎನ್ನುವ ಭಾವನೆಯಿದೆ. ಜಿಲ್ಲೆಯ ಸಮಸ್ಯೆ, ಸಂಘಟನೆ ಹಾಗೂ ಪಕ್ಷದಲ್ಲಿರುವ ನ್ಯೂನತೆ ಬಗ್ಗೆ ರ್ಚಚಿಸಬೇಕು ಎಂದರು.

    ಹಂಗಾಮಿ ಜಿಲ್ಲಾಧ್ಯಕ್ಷ ರಂಜನ್ ಅಜಿತ್​ಕುಮಾರ್, ವೀಕ್ಷಕರಾದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ದಾವಣಗೆರೆ ಅಮಾನುಲ್ಲಾ ಖಾನ್, ಶಿವಮೊಗ್ಗದ ರಾಮಕೃಷ್ಣ, ಚಿತ್ರದುರ್ಗದ ಯಶೋಧರ್, ಕೊಡಗು ಗಣೇಶ್, ಮಾಜಿ ಶಾಸಕ ಶಿವಶಂಕರ್, ಬಾಲಕೃಷ್ಣೇಗೌಡ, ಎಚ್.ಎಸ್.ಮಂಜಪ್ಪ, ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಎಂ.ಡಿ.ರಮೇಶ್, ಗಂಗಾಧರ ನಾಯಕ್, ವಸಂತಕುಮಾರ್, ಜಮೀಲ್ ಅಹಮದ್, ಡಿ.ಎಲ್.ವಸಂತಕುಮಾರಿ, ಡಿ.ಜೆ.ಸುರೇಶ್, ವಿನಯ್ರಾಜ್, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಎಚ್.ಎನ್.ಕೃಷ್ಣೇಗೌಡ, ಜಯರಾಜ್​ಅರಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts