More

    ಚುನಾವಣಾ ಅಖಾಡಕ್ಕೆ ಬಂದ ಎಚ್‌ಡಿಡಿ: ಜಿಲ್ಲೆಯ ಶಾಸಕರೊಂದಿಗೆ ಸುದೀರ್ಘ ಚರ್ಚೆ

    ಮಂಡ್ಯ: ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ರಾಜಕೀಯ ಚಟುವಟಿಕೆ ಜೋರಾಗುತ್ತಿರುವ ಬೆನ್ನಲ್ಲೇ ಅಖಾಡಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪ್ರವೇಶಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯ ಆರು ಜನ ಶಾಸಕರು ಸೇರಿದಂತೆ ಪ್ರಮುಖ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
    ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ಯಾತ್ರೆ ಕಳೆದ ಡಿಸೆಂಬರ್‌ನಲ್ಲಿ ಜೋರಾಗಿ ನಡೆದಿತ್ತು. ನಂತರ ಆಯಾಯಾ ವಿಧಾನಸಭಾ ಕ್ಷೇತ್ರವಾರು ಮನೆ ಮನೆಗೆ ಪಂಚರತ್ನ ಯೋಜನೆಯ ಮಾಹಿತಿ ನೀಡುವ ಕಾರ್ಯಕ್ರಮ ಮಾಡಲಾಗುತ್ತಿದೆಯಾದರೂ ಕಾರ್ಯಕರ್ತರಿಗೆ ಸಮಾಧಾನವಿರಲಿಲ್ಲ. ಕಾರಣ ಬಿಜೆಪಿ ಜನಸಂಕಲ್ಪ ಯಾತ್ರೆ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಕರೆಸಿ ಬೃಹತ್ ಸಮಾವೇಶ ಮಾಡುತ್ತಿದೆ. ಇತ್ತ ಕಾಂಗ್ರೆಸ್ ಕೂಡ ಪ್ರಜಾಧ್ವನಿ ಸಮಾವೇಶದ ಜತೆಗೆ ತಾಲೂಕುವಾರು ಸಭೆಗಳನ್ನು ಆಯೋಜಿಸಿ ಮತದಾರರ ಮನವೊಲಿಸುವ ತಂತ್ರ ನಡೆಯುತ್ತಿದೆ. ಇಷ್ಟಾದರೂ ಭದ್ರಕೋಟೆಯಲ್ಲಿ ಜೆಡಿಎಸ್‌ನಿಂದ ನಿರೀಕ್ಷಿತ ಕಾರ್ಯಕ್ರಮ ನಡೆಯುತ್ತಿಲ್ಲವೆನ್ನುವ ನಿರಾಸೆ ಕಾಡುತ್ತಿತ್ತು.
    ಇಷ್ಟು ದಿನ ಕಾಂಗ್ರೆಸ್ ಮಾತ್ರ ಎದುರಾಳಿಯಾಗಿತ್ತು. ಆದರೀಗ ಬಿಜೆಪಿ ಕೂಡ ಶಕ್ತಿ ಪ್ರದರ್ಶನ ಮಾಡಲಾರಂಭಿಸಿದೆ. ಇನ್ನು ಕೆಲ ಮುಖಂಡರು ಪಕ್ಷ ತೊರೆಯುತ್ತಿದ್ದರೂ ವರಿಷ್ಠರು ಗಮನಹರಿಸಿರಲಿಲ್ಲ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ದೊಡ್ಡಗೌಡರು ಕೂಡ ಸಕ್ರಿಯರಾಗಿದ್ದಾರೆ. ಅಂತೆಯೇ ಜಿಲ್ಲೆಯ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಕೆ.ಆರ್.ಪೇಟೆ ಕ್ಷೇತ್ರದ ಘೋಷಿತ ಅಭ್ಯರ್ಥಿ ಎಚ್.ಟಿ.ಮಂಜು, ಜಿಲ್ಲಾಧ್ಯಕ್ಷ ಡಿ.ರಮೇಶ್, ಮಾಜಿ ಎಂಎಲ್‌ಸಿಗಳಾದ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಅವರೊಟ್ಟಿಗೆ ಸೋಮವಾರ ಬೆಂಗಳೂರಿನ ನಿವಾಸದಲ್ಲಿ ಸಭೆ ಮಾಡಿದ್ದಾರೆ.
    ಸುಮಾರು ಗಂಟೆ ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಷಯ ಚರ್ಚೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಕಾಂಗ್ರೆಸ್, ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ಪಡೆದಿರುವ ದೇವೇಗೌಡರು, ಮುಂಬರುವ ಚುನಾವಣೆಗೆ ಸಿದ್ಧತೆ ಬಗ್ಗೆ ಜಿಲ್ಲಾ ನಾಯಕರಿಗೆ ತಮ್ಮ ರಾಜಕೀಯದ ಅನುಭವದ ತಂತ್ರಗಾರಿಕೆಯ ಪಾಠ ಮಾಡಿದ್ದಾರೆ. ಪ್ರಮುಖವಾಗಿ ಕಳೆದ ನಾಲ್ಕು ಅಂದರೆ ಎರಡು ಎಂಎಲ್‌ಸಿ, ಲೋಕಸಭೆ ಹಾಗೂ ಕೆ.ಆರ್.ಪೇಟೆ ಉಪಚುನಾವಣೆ ಸೋಲಿಗೆ ಕಾರಣಗಳು ಮತ್ತು ಅದನ್ನು ಸರಿಪಡಿಸಿಕೊಂಡು ತನ್ನ ಭದ್ರಕೋಟೆ ಮಂಡ್ಯದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆಯಲು ಗೇಮ್‌ಪ್ಲಾೃನ್ ನಡೆದಿದೆ. ಇದು ಪಕ್ಷದ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ. ಇದರಿಂದ ಜಿಲ್ಲೆಯಲ್ಲಿ ದಳದ ಅಬ್ಬರ ಮುಂದುವರೆಯಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
    ಮುನಿಸಿಕೊಂಡಿದ್ದವರನ್ನು ಒಗ್ಗೂಡಿಸಿದ ಗೌಡರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಕಂಡಿತ್ತು. ಅಂದು ಎಲ್ಲ ನಾಯಕರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದು ಪ್ರಮುಖ ಕಾರಣವಾಗಿತ್ತು. ಪರಿಣಾಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವಂತಾಯಿತು. ಜತೆಗೆ ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಸಚಿವ ಸ್ಥಾನ ಅಲಂಕರಿಸಿದ್ದರು.
    ಆದರೆ ನಂತರ ಶಾಸಕರ ನಡುವೆ ಹೊಂದಾಣಿಕೆ ಕೊರತೆಯಿಂದ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿತು. ಇದರಿಂದಾಗಿ ಸಾಲು ಸಾಲು ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು. ಇಷ್ಟಾದರೂ ಮತ್ತೆ ಎಲ್ಲರೂ ಒಂದಾಗಿ ವಿಪಕ್ಷಗಳನ್ನು ಎದುರಿಸುವ ಗೋಜಿಗೆ ಹೋಗಿರಲಿಲ್ಲ. ಬದಲಿಗೆ ತಮ್ಮ ಕ್ಷೇತ್ರಕ್ಕೆ ಸೀಮಿತವಾದರು. ಇದಲ್ಲದೆ ಎಲ್ಲರೂ ಒಂದೆಡೆ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇದೀಗ ಶಾಸಕರ ಮುನಿಸನ್ನು ಶಮನ ಮಾಡಿ ಎಚ್‌ಡಿಡಿ ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಚುನಾವಣೆ ಮಾಡಿ ಯಶಸ್ಸು ಕಂಡಿತ್ತು. ಅಂತೆಯೇ ಈ ಬಾರಿಯೂ ಹಿರಿಯರ ನೇತೃತ್ವದಲ್ಲಿ ವಿಧಾನಸಭಾ ಅಖಾಡಕ್ಕೆ ಸಜ್ಜಾಗಲಾಗುತ್ತಿದೆ.
    ರೋಡ್ ಶೋಗೆ ದಿನಗಣನೆ: ಬಿಜೆಪಿ, ಕಾಂಗ್ರೆಸ್ ರೋಡ್ ಶೋಗಳ ಬೆನ್ನಲ್ಲೇ ಜೆಡಿಎಸ್ ಕೂಡ ರೋಡ್ ಶೋ ಮಾಡಲು ಸಜ್ಜಾಗಿದೆ. ಮಾ.26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆಯ ಸಮಾರೋಪದ ಅಂಗವಾಗಿ ಬೆಂಗಳೂರಿನಿಂದ ಕುಂಬಳಗೂಡಿನಿಂದ ಮೈಸೂರಿನವರೆಗೆ ರೋಡ್ ಶೋ ಆಯೋಜಿಸಲಾಗುತ್ತಿದೆ. ವಿಶೇಷವೆಂದರೆ ಎಚ್.ಡಿ.ದೇವೇಗೌಡ ಅವರೇ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮ ದಳಪತಿಗಳಿಗೆ ಪ್ರತಿಷ್ಠೆಯಾಗಿದ್ದು, ಇದರ ಮೂಲಕ ತಮ್ಮ ಹಳೆಯ ಖದರ್‌ಗೆ ಮರಳಬೇಕಿದೆ. ಜಿಲ್ಲೆಯ ಮೂಲಕವೇ ಹಾದು ಹೋಗುವುದರಿಂದ ಶಕ್ತಿ ಪ್ರದರ್ಶನ ಮಾಡುವ ಮೂಲಕ ವಿಪಕ್ಷಗಳಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಮಾತ್ರವಲ್ಲದೆ ಸಮಾರೋಪ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಜನರನ್ನು ಕರೆದುಕೊಂಡು ಹೋಗಬೇಕಾದ ಟಾಸ್ಕ್ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts