ಸಿನಿಮಾ

ಮಂಡ್ಯ ಅಖಾಡಕ್ಕೆ ಎಚ್‌ಡಿಡಿ, ಎಚ್‌ಡಿಕೆ: ನಾಳೆ ನಗರದಲ್ಲಿ ಬಹಿರಂಗ ಸಮಾವೇಶ

ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಅಖಾಡಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಳಿಯಲಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಮತಯಾಚನೆ ಮಾಡಿ ಹೋಗಿದ್ದಾರೆ. ಇದೀಗ ಎಚ್‌ಡಿಡಿ, ಎಚ್‌ಡಿಕೆ ಆಗಮಿಸುತ್ತಿರುವುದು ಚುನಾವಣೆ ಇನ್ನಷ್ಟು ಕಾವೇರಲಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಪರವಾಗಿ ಮೇ.5ರಂದು ನಗರದಲ್ಲಿ ಆಯೋಜಿಸಿರುವ ಬಹಿರಂಗ ಸಮಾವೇಶದಲ್ಲಿ ಎಚ್‌ಡಿಕೆ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 12ಗಂಟೆಗೆ ನಗರದ ಸರ್ಕಾರಿ ಬಾಲಕಿಯರ ಕಾಲೇಜು(ಕಲ್ಲುಕಟ್ಟಡ) ಆವರಣದಲ್ಲಿ ಆಯೋಜಿಸಿರುವ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಲಿದ್ದಾರೆ. ಇನ್ನು 6ರಂದು ಎಚ್.ಡಿ.ದೇವೇಗೌಡ ಅವರು ಮಂಡ್ಯ ನಗರಕ್ಕೆ ಆಗಮಿಸಲಿದ್ದಾರೆ.
ಕಾನೂನು ಘಟಕದಿಂದ ಮತಯಾಚನೆ: ವಕೀಲರ ಹಿತಾಸಕ್ತಿ ಕಾಪಾಡುವ ಇಚ್ಛಾಶಕ್ತಿ ಹೊಂದಿರುವ ಜೆಡಿಎಸ್‌ನ್ನು ವಕೀಲರು ಬೆಂಬಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಹಕರಿಸಬೇಕು ಎಂದು ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್ ಮನವಿ ಮಾಡಿದರು.
ನಗರದ ವಕೀರ ಸಂಘದ ಆವರಣದಲ್ಲಿ ಬುಧವಾರ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಅವರೊಂದಿಗೆ ಮತಯಾಚನೆ ಮಾಡಿದ ಅವರು, ಮಂಡ್ಯ ಜೆಡಿಎಸ್‌ನ ಭದ್ರಕೋಟೆ. 100ಕ್ಕೆ 100ರಷ್ಟು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಮ್ಮ ವಕೀಲರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಾರೆ. ಜೆಡಿಎಸ್‌ನ ಪಂಚರತ್ನ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿದೆ. ವಕೀಲ ಸಮುದಾಯಕ್ಕೆ ಸ್ಟೈಫಂಡ್ ಕೊಟ್ಟಿರುವುದು. ಮೂಲ ಸೌಲಭ್ಯ ನೀಡುವುದರ ಜತೆಗೆ ಜೆಡಿಎಸ್ ಅಧಿಕಾರಕ್ಕೆ ಬಂದಾಗೆಲ್ಲ ವಕೀಲರ ಹಿತ ಮತ್ತು ಬೇಡಿಕೆಗಳನ್ನು ಈಡೇರಿಸಿದೆ. ಜತೆಗೆ ವಕೀಲರನ್ನು ಗೌರವಿಸಿದೆ. ಕಳೆದ ಸರ್ಕಾರ ಕೊಟ್ಟ ಮಾತಿಗೆ ಮಾತು ತಪ್ಪಿದ್ದರಿಂದ ಧಿಕ್ಕಾರ ಕೂಗಿದ್ದೇವೆ ಎಂದು ಹೇಳಿದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತಕ್ಕೆ ಮರುಜೀವ ನೀಡುವುದು. ಕರ್ನಾಟಕ ವಕೀಲರ ಪರಿಷತ್‌ನ ಕಲ್ಯಾಣ ನಿಧಿಗೆ 100 ಕೋಟಿ ರೂ ಅನುದಾನ ಕೊಟ್ಟು, ಅಕಾಲಿಕ ಮರಣ ಹೊಂದಿದ ವಕೀಲರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಕೊಡುವುದು, ಯುವ ವಕೀಲರ ಶಿಷ್ಯವೇತನವನ್ನು 2 ಸಾವಿರ ರೂನಿಂದ 5 ಸಾವಿರ ರೂಗೆ ಹೆಚ್ಚಿಸುವುದು. ವಿಮಾ ಸೌಲಭ್ಯ, ನಿವೇಶನ ಒದಗಿಸುವುದು ಸೇರಿವೆ. ವಕೀಲ ಸಮೂಹಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಎಚ್.ಡಿ.ಕುಮಾರಸ್ವಾಮಿ ಬದ್ಧವಾಗಿದ್ದಾರೆ ಎಂದ ಅವರು, ಹಲವು ವರ್ಷದಿಂದ ರಾಜ್ಯವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕೋಮುಗಲಭೆಯಲ್ಲಿ ಕಾಲ ಕಳೆಯುತ್ತಿವೆ. ರಾಜ್ಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಸಮಾಜದ ಸರ್ವರೂ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಹಸಿವು ಮುಕ್ತ ಸಮಾಜ ನಿರ್ಮಾಣವಾಗಲು ಎಚ್‌ಡಿಕೆ ಮತ್ತೆ ಮುಖ್ಯಮಂತ್ರಿಯಾಗಬೇಕಿದೆ ಎಂದರು.
ಜೆಡಿಎಸ್ ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷ ಬಸವರಾಜು, ಪದಾಧಿಕಾರಿಗಳಾದ ಪ್ರದೀಪ್, ರಾಜೇಂದ್ರ, ಮಹೇಶ್ ಇತರರಿದ್ದರು.

Latest Posts

ಲೈಫ್‌ಸ್ಟೈಲ್