More

    ಜೆಡಿಎಸ್-ಬಿಜೆಪಿ ಸಂದೇಶ ಯಾತ್ರೆ; ಪ್ರಮುಖರ ಸಭೆಯಲ್ಲಿ ಸಮಾಲೋಚನೆ

    ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳಿಗೆ ಹಂಚಿಕೆಯಾದ ಕ್ಷೇತ್ರದಲ್ಲಿ ಗೆಲುವಿಗೆ ಒಟ್ಟಾಗಿ ಪರಿಶ್ರಮ, ಸಮನ್ವಯ ಸಾಧಿಸಲೆಂದು ಜೆಡಿಎಸ್ ಜತೆಗೂಡಿ ‘ಸಂದೇಶ ಯಾತ್ರೆ’ ಹಮ್ಮಿಕೊಳ್ಳಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

    ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ಬಿಜೆಪಿ ಗುರಿಯಾಗಿದೆ. ರಾಷ್ಟ್ರೀಯ ರಾಜಕಾರಣದ ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಎನ್​ಡಿಎ ಮೈತ್ರಿಕೂಟದ ತೆಕ್ಕೆಗೆ ಸೆಳೆಯಲಾಗಿದೆ. ಜಾತಿ, ವರ್ಗ ಸಮೀಕರಣ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯಗಳ ವಿಶ್ವಾಸ ವೃದ್ಧಿಸಿಕೊಂಡು, ಪಕ್ಷದ ಜತೆ ಉಳಿಸಿಕೊಳ್ಳುವುದು ಬಿಜೆಪಿ ವರಿಷ್ಠರ ತಂತ್ರಗಾರಿಕೆಯಾಗಿದೆ. ರಾಜ್ಯದಲ್ಲಿ ಗಟ್ಟಿ ನೆಲೆಯುಳ್ಳ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಸೀಟುಗಳ ಹಂಚಿಕೆ ಮತ್ತು ಕ್ಷೇತ್ರಗಳ ಹೊಂದಾಣಿಕೆ ಪ್ರಸ್ತಾಪವಿಟ್ಟಿರುವುದು ಸಹಜ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಸೀಟುಗಳ ಹಂಚಿಕೆ ಸಂದರ್ಭದಲ್ಲಿ ಜೆಡಿಎಸ್​ಗೂ ಸೀಟುಗಳು ಹಂಚಿಕೆಯಾಗಲಿವೆ. ಇದೇ ಕಾರಣಕ್ಕೆ ರಾಜ್ಯ ನಾಯಕರು ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ನಾಯಕರ ವಿವೇಚನೆಗೆ ಬಿಟ್ಟಿದ್ದಾರೆ.

    ಸಮನ್ವಯದ ಸಂದೇಶ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜತೆಗೂ ಬಿಜೆಪಿ ಜಿದ್ದಾಜಿದ್ದಿ ಹೋರಾಟ ನಡೆಸಿದ್ದು, ಈ ಕಾವು ಇನ್ನೂ ತಣ್ಣಗಾಗಿಲ್ಲ. ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಸಾಧಿಸಿದ ಗೆಲುವು, ಬಿಜೆಪಿ ಸೋಲಿನಲ್ಲಿ ಜೆಡಿಎಸ್ ಮತಗಳ ಗಳಿಕೆ ಪ್ರಮಾಣ ಕುಸಿತವೂ ಪ್ರಮುಖಾಂಶವಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿಗಳ ಪರ ಜೆಡಿಎಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪರ ಬಿಜೆಪಿ ಕಾರ್ಯಕರ್ತರು ಒಂದಾಗಿ ಗೆಲುವಿಗೆ ಶ್ರಮಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಜೆಡಿಎಸ್ ಜತೆ ಮಾಡಿಕೊಂಡ ಮೈತ್ರಿಯ ಉದ್ದೇಶ ಸಫಲಗೊಳಿಸುವ ಜವಾಬ್ದಾರಿ ರಾಜ್ಯ ನಾಯಕರ ಹೆಗಲೇರಿದ್ದು, ಲೋಕ ಚುನಾವಣೆಗೆ ಪರಿಸ್ಥಿತಿ ತಿಳಿಗೊಳಿಸಲು ಪಕ್ಷ ಉತ್ಸುಕವಾಗಿದೆ.

    ಮೊದಲ ಹಂತದ ಸಭೆ ಇಂದು: ಲೋಕಸಭೆ ಕ್ಷೇತ್ರವಾರು ಚರ್ಚೆ, ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವ ಸಂಬಂಧ ಮೊದಲ ಹಂತದ ಸಭೆ ಬುಧವಾರ (ಜ.10) ಯಲಹಂಕ ಸಮೀಪದ ಖಾಸಗಿ ಹೋಟೆಲ್​ನಲ್ಲಿ ನಿಗದಿಯಾಗಿದೆ. ಹಾಲಿ ಸಂಸದರ ಕಾರ್ಯಸಾಧನೆ, ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ವಸ್ತುಸ್ಥಿತಿ, ಆಕಾಂಕ್ಷಿಗಳು, ಪಕ್ಷದ ಪರಿಸ್ಥಿತಿ ಬಗ್ಗೆ ತರಿಸಿಕೊಂಡ ವರದಿ ಆಧಾರದಲ್ಲಿ ಚರ್ಚೆಯಾಗಲಿದೆ. ಎರಡನೇ ಹಂತದ ಸಭೆ ಜ.13ರಂದು ನಡೆಯಲಿದೆ. ಒಟ್ಟು 28 ಕ್ಷೇತ್ರಗಳ ಸಮಗ್ರ ಮಾಹಿತಿ, ಕ್ಷೇತ್ರದಲ್ಲಿ ಬಲ-ದೌರ್ಬಲ್ಯ, ಪರ್ಯಾಯ ಅಭ್ಯರ್ಥಿ ಸೇರಿ ಸಂಭಾವ್ಯರ ಪಟ್ಟಿ ಸಹಿತ ವರಿಷ್ಠರಿಗೆ ವರದಿ ಸಲ್ಲಿಕೆಯಾಗಲಿದೆ.

    ಕೆ.ಎಸ್.ಈಶ್ವರಪ್ಪ ದೆಹಲಿಗೆ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮಗನನ್ನು ಸ್ಪರ್ಧೆಗಿಳಿಸಲು ಹಿರಿಯ ನಾಯಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಯಸಿದ್ದು, ವರಿಷ್ಠರ ಬಳಿ ಪ್ರಸ್ತಾಪಿಸಲು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಸೋಮವಾರ ನಡೆದ ಪ್ರಮುಖರ ಸಭೆಯಲ್ಲಿ ಪುತ್ರನಿಗೆ ಹಾವೇರಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿ ಯಾರೊಬ್ಬರೂ ಸ್ಪಂದಿಸದ ಕಾರಣ ದೆಹಲಿಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಮಾಜಿ ಮಂತ್ರಿ ವಿ.ಸೋಮಣ್ಣ ದೆಹಲಿಗೆ ತೆರಳಿದ್ದಾರೆ. ಕಾಲಾವಕಾಶ ಪಡೆದು ವರಿಷ್ಠರನ್ನು ಭೇಟಿ ಮಾಡಲು ಇಚ್ಛಿಸಿದ್ದು, ಒಂದೆರಡು ದಿನ ಅಲ್ಲಿಯೇ ಬಿಡಾರ ಹೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ವರಿಷ್ಠರ ಭೇಟಿಗೆ ಸೋಮಣ್ಣ: ಬಿಜೆಪಿಯಲ್ಲಿ ಬಣಗಳ ರಾಜಕೀಯ ತಿಕ್ಕಾಟ ಇನ್ನೂ ಮುಗಿಯುತ್ತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದ ಬಣ ರಾಜಕೀಯ ಈಗ ದೆಹಲಿಯನ್ನು ಮುಟ್ಟಿದೆ. ಶಾಸಕ ಬಸನಗೌಡ ಯತ್ನಾಳ್ ದೆಹಲಿ ಭೇಟಿ ಮುಗಿದ ಬೆನ್ನಲ್ಲಿಯೇ ಮಾಜಿ ಸಚಿವ ವಿ.ಸೋಮಣ್ಣ ದೆಹಲಿ ಪೆರೆಡ್ ಮಾಡಿರುವುದು ವಿಶೇಷ. ಅಸಮಾಧಾನಿತರೆಲ್ಲರೂ ಒಟ್ಟಾಗಿ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ನಾಯಕರಿಗೆ ಒಟ್ಟಿಗೆ ಭೇಟಿ ಮಾಡಲು ವರಿಷ್ಠರು ಅವಕಾಶ ನೀಡಿಲ್ಲ. ಹಾಗಾಗಿ ಒಬ್ಬೊಬ್ಬರೇ ಪ್ರತ್ಯೇಕವಾಗಿ ಭೇಟಿಯಾಗಿ ದೂರು ದುಮ್ಮಾನ ಹೇಳಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೆಲ ದಿನಗಳು ಸಮಾಧಾನವಾಗಿರುವಂತೆ ಕಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಮತ್ತೆ ದೆಹಲಿ ಹಾದಿ ಹಿಡಿದಿದ್ದಾರೆ. ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದ ಸೋಮಣ್ಣ, ಚುನಾವಣೆಯಲ್ಲಿ ತಮಗೆ ಆಗಿರುವ ಅನ್ಯಾಯ ಮತ್ತು ಯಾರ್ಯಾರು ಏನೇನು ಪಿತೂರಿ ಮಾಡಿದರು ಎನ್ನುವ ವಿಷಯವನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts