More

    ಚುನಾವಣೆಗೆ ಮುನ್ನ ಬಿಜೆಪಿಗೆ ಶಾಕ್ ; ಜೆಡಿಎಸ್ ಸೇರಿದ ಜಿಪಂ ಮಾಜಿ ಸದಸ್ಯ ರಾಮಾಂಜನಪ್ಪ ; ತೆನೆಹೊತ್ತ ಮೂವರು ತಾಪಂ ಮಾಜಿ ಸದಸ್ಯರು

    ತುಮಕೂರು : ತಾಪಂ, ಜಿಪಂ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.
    ಜಿಪಂ ಮಾಜಿ ಸದಸ್ಯ ರಾಮಂಜನಪ್ಪ, ತಾಪಂ ಮಾಜಿ ಸದಸ್ಯರಾದ ಕವಿತಾ, ಪಿಎಲ್‌ಆರ್ ರಮೇಶ್, ಶಿವಣ್ಣ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಗುಬ್ಬಿ ತಾಲೂಕು ಹಾಗಲವಾಡಿ ಜಿಪಂ ಕ್ಷೇತ್ರ ಪ್ರತಿನಿಧಿಸುತ್ತಿದ್ದ ನಾಯಕ ಸಮುದಾದಯ ರಾಮಾಂಜನಪ್ಪ ಜೆಡಿಎಸ್ ಸೇರ್ಪಡೆಯಾಗಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾದಂತಾಗಿದೆ. ಇನ್ನೂ ಗ್ರಾಮಾಂತರ ಕ್ಷೇತ್ರದಲ್ಲಿ ತಾಪಂಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ್ದ ಹಿರೇಹಳ್ಳಿಯ ಪಿಎಲ್‌ಆರ್ ರಮೇಶ್, ಬೆಳ್ಳಾವಿಯ ಶಿವಣ್ಣ ಹಾಗೂ ವರ್ಷದ ಹಿಂದೆಯೇ ಪಕ್ಷದ ವರಿಷ್ಠರ ವಿರುದ್ಧ ಬಂಡಾಯವೆದ್ದಿದ್ದ ಕೋರಾ ಕ್ಷೇತ್ರದ ಕವಿತಾ ಜೆಡಿಎಸ್‌ಗೆ ಅಧಿಕೃತವಾಗಿ ಸೇರುವುದರೊಂದಿಗೆ ಬಿಜೆಪಿಗೆ ಆಘಾತ ನೀಡಿದ್ದಾರೆ. ಈ ಮುಖಂಡರನ್ನು ಪಕ್ಷದ ಕಚೇರಿಯಲ್ಲಿ ಭಾನುವಾರ ಪಕ್ಷದ ಬಾವುಟ ನೀಡಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಬರಮಾಡಿಕೊಂಡರು. ಹಾಲಿ ಗ್ರಾಪಂ ಸದಸ್ಯರಾದ ಕುಂಭಯ್ಯ, ಹೊನ್ನೇಶ್ ಸೇರಿ ಹಲವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.

    ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿ: ಗ್ರಾಮಾಂತರ ಕ್ಷೇತವೂ ಸೇರಿ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದು ಶೀಘ್ರದಲ್ಲಿ ಜೆಡಿಎಸ್ ಸೇರಲಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

    ಗ್ರಾಮಾಂತರದ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಅನೇಕ ಮಂದಿ ಪಕ್ಷ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕೊಟ್ಟಂತಹ ಜನಪರ ಕಾರ್ಯಯೋಜನೆಗಳು ಹಾಗೂ ನಮ್ಮ ಪಕ್ಷದ ಅಜೆಂಡಾ, ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಅನೇಕ ಮಂದಿ ಬಿಜೆಪಿಯ ಪ್ರಭಾವಿ ಮುಖಂಡರು ನನ್ನ ಸಂಪರ್ಕದಲ್ಲಿದ್ದು, ಈ ತಿಂಗಳ ಕೊನೆಯಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

    3 ತಿಂಗಳು ಮನೆಬಿಟ್ಟು ಹೋರಾಟ : ವಿಧಾನ ಪರಿಷತ್ ಚುನಾವಣೆಗೆ ನಾವೇ ಒಬ್ಬ ಅಭ್ಯರ್ಥಿಯನ್ನು ಕರೆದುಕೊಂಡು ಬಂದು ಆ ಪುಣ್ಯಾತ್ಮನನ್ನು ನಾವು 6 ಎಂಎಲ್‌ಎಗಳು ಸೇರಿ ಗೆಲ್ಲಿಸಿದೆವು. ನಾನು ಹಿಂದೆಯೇ ಕುಮಾರಣ್ಣನಿಗೆ ಹೇಳಿದ್ದೆ ಅವನಿಗೆ ಟಿಕೆಟ್ ಕೊಡದಂತೆ. ನಾನು ವಿರೋಧ ಮಾಡಿದ್ದೆ. ಕೊನೆಗೆ ದೇವೇಗೌಡರು ಕೂರಿಸಿಕೊಂಡು ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಗೆಲ್ಲಿಸಿದ್ದೆವು. ಈಗ ಪಕ್ಷಕ್ಕೆ ಬೆಮೆಲ್ ಕಾಂತರಾಜು ದ್ರೋಹ ಮಾಡಿದ್ದಾರೆ. ಮುಂದಿನ ಎಂಎಲ್ಸಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು 3 ತಿಂಗಳು ಮನೆಬಿಟ್ಟು ಹೋರಾಟ ಮಾಡುವೆ ಎಂದು ಗೌರಿಶಂಕರ್ ಹೇಳಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಕಾರ್ಯಾಧ್ಯಕ್ಷರಾದ ಹಾಲನೂರು ಅನಂತಕುಮಾರ್, ಟಿ.ಆರ್.ನಾಗರಾಜ್, ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಚಲುವರಾಜ್, ಯುವ ಜನತಾದಳದ ಜಿಲ್ಲಾಧ್ಯಕ್ಷ ಹಿರೇಹಳ್ಳಿ ಮಹೇಶ್, ವಿಜಯ್‌ಕುಮಾರ್ ಉಪಸ್ಥಿತರಿದ್ದರು.

    ಗ್ರಾಮಾಂತರ ಕ್ಷೇತ್ರ ಎಂದಿಗೂ ಭದ್ರಕೋಟೆ : ತುಮಕೂರು ಗ್ರಾಮಾಂತರ ಜೆಡಿಎಸ್ ಭದ್ರಕೋಟೆಯಾಗಿದ್ದು, ಇಡೀ ಜಿಲ್ಲೆಯನ್ನು ಮತ್ತೆ ಜೆಡಿಎಸ್ ಭದ್ರಕೋಟೆಯನ್ನಾಗಿಸುವ ಗುರಿ ನಮ್ಮ ಮುಂದಿದೆ. ಇಡೀ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 123 ಸೀಟು ಗೆಲ್ಲುವ ಗುರಿ ಇಟ್ಟುಕೊಂಡಂತೆ, ನಮ್ಮ ಜಿಲ್ಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲಿಸುವ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡುತ್ತಿರುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts