More

    ಚಿಕ್ಕನಾಯಕನಹಳ್ಳಿಯ 16 ಕೆರೆಗಳಿಗೆ ಭದ್ರೆ ನೀರು ; ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮಾಹಿತಿ

    ಹುಳಿಯಾರು : ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 16 ಕೆರೆಗಳಿಗೆ ಕೊಳವೆಮಾರ್ಗದ ಮೂಲಕ ನೀರು ಹರಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
    ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಕೆರೆಗೆ ಭದ್ರಾ ನಾಲೆಯಿಂದ ನೀರು ಪೂರೈಕೆ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ಬೋರನಕಣಿವೆ ಜಲಾಶಯಕ್ಕೂ ಭದ್ರಾ ನಾಲೆಯಿಂದ 1.5 ಟಿಎಂಸಿ ನೀರು ಹರಿಸಲಾಗುವುದು. ಜಲಾಶಯದಿಂದ ಈಗಾಗಲೇ ಹುಳಿಯಾರು ಪಟ್ಟಣಕ್ಕೆ ನೀರು ಪೂರೈಕೆಯಾಗುತ್ತಿದೆ. ಅಸಮರ್ಪಕ ಹಾಗೂ ಅಶುದ್ಧ ನೀರು ಪೂರೈಕೆಯ ದೂರುಗಳು ಇವೆ. ಆದ್ದರಿಂದ, ಭದ್ರಾ ನೀರು ಹರಿದ ನಂತರದ ದಿನಗಳಲ್ಲಿ ಸಮರ್ಪಕ ಹಾಗೂ ಶುದ್ಧನೀರು ಪೂರೈಕೆಗೆ ಆದ್ಯತೆ ಕೊಡಲಾಗುವುದು. ಜಲಾಶಯದಿಂದ ಕೆಂಕೆರೆ, ಹೊಯ್ಸಳಕಟ್ಟೆ ಹಾಗೂ ಗಾಣಧಾಳು ಪಂಚಾಯಿತಿಯ ಹಳ್ಳಿಗಳಿಗೂ ಬಹುಗ್ರಾಮಗಳ ಕುಡಿಯುವ ನೀರು ಯೋಜನೆಯಡಿ ನೀರು ಕೊಡಲಾಗುವುದು ಎಂದು ಭರವಸೆ ನೀಡಿದರು.

    ತಾಪಂ ಮಾಜಿ ಸದಸ್ಯ ಕೆಂಕೆರೆ ನವೀನ್ ಮಾತನಾಡಿ, ಮಾಧುಸ್ವಾಮಿ ಅವರು ಶಾಸಕರಾದ ಮೇಲೆ ತಾಲೂಕಿಗೆ ಹೇಮಾವತಿ, ಭದ್ರಾ ಯೋಜನೆಗಳಿಂದ ನೀರು ಹರಿಯುತ್ತಿದೆ. ಈಗಾಗಲೇ ಹೇಮಾವತಿ ನೀರು ಬಂದಿದ್ದು, ಭದ್ರೆ ಹಾಗೂ ಎತ್ತಿನಹೊಳೆ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

    ಮಾಧುಸ್ವಾಮಿ ಅವರು ಸಣ್ಣ ನೀರಾವರಿ ಸಚಿವರಾದ ತಕ್ಷಣ ತಾಲೂಕಿನ ಶೇ.90 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ 250 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದಾರೆ. ಈ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
    ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಪ್ಪ, ಮಾಜಿ ಸದಸ್ಯ ಅಶೋಕ್‌ಬಾಬು, ಗ್ರಾಪಂ ಸದಸ್ಯರಾದ ದಿನೇಶ್, ಕೆ.ಕೆ. ಹನುಮಂತಪ್ಪ, ರೇವಣ್ಣ, ಯಳನಾಡು ಜಯಸಿಂಹ, ಮುಖಂಡರಾದ ವಸಂತಯ್ಯ, ಬರಕನಹಾಲ್ ವಿಶ್ವನಾಥ್, ಮೋಹನ್ ಮತ್ತಿತರರು ಇದ್ದರು.

    ತಿಮ್ಲಾಪುರ ಕೆರೆಗೆ ನೀರು! : ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹೇಮಾವತಿ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸುವ ಕಾಮಗಾರಿಯನ್ನು ಕಳೆದ ವರ್ಷ ಪೂರ್ಣಗೊಳಿಸಲಾಗಿತ್ತು. ಪ್ರಾಯೋಗಿಕವಾಗಿ ನೀರನ್ನೂ ಹರಿಸಲಾಗಿತ್ತು. ಸಾಸಲು, ಶೆಟ್ಟಿಕೆರೆ ಕೆರೆಗಳು ಹಾಗೂ ಕೆಲ ಚೆಕ್‌ಡ್ಯಾಂ ತುಂಬುವಷ್ಟರಲ್ಲಿ ನೀರಿನ ಅಲಭ್ಯತೆಯಿಂದಾಗಿ ತಿಮ್ಲಾಪುರ ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಈ ವರ್ಷ ಮತ್ತೆ ಹೇಮಾವತಿ ನೀರು ಹರಿಸಲಾಗುತ್ತಿದೆ. ಇನ್ನು 15 ದಿನಗಳಲ್ಲಿ ತಿಮ್ಲಾಪುರ ಕೆರೆಗೆ ನೀರು ಬರುವ ಸಾಧ್ಯತೆಯಿದೆ. ತಿಮ್ಲಾಪುರ ಕೆರೆ ತುಂಬಿದ ನಂತರ ಹುಳಿಯಾರು ಕೆರೆಗೂ ನೀರು ಹರಿಸಲಾಗುವುದು ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts