More

    ವೈಭಯುತವಾಗಿ ನಡೆದ ಜಯರಾಮೋತ್ಸವ: ಮನಸೂರೆಗೊಂಡ ಸಾಂಸ್ಕೃತಿಕ ಕಲಾತಂಡದ ಮೆರವಣಿಗೆ

    ಮಂಡ್ಯ: ಸ್ನೇಹಮಯಿ ಹಾಗೂ ಜನಪರ ರಾಜಕಾರಣಿ ಎಸ್.ಡಿ.ಜಯರಾಂ ಅವರ 25ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಸ್.ಡಿ.ಜಯರಾಂ ಅಭಿಮಾನಿಗಳಿಂದ ನಗರದಲ್ಲಿ ಆಯೋಜಿಸಿದ್ದ ಜಯರಾಮೋತ್ಸವ ವೈಭವಯುತವಾಗಿ ನಡೆಯಿತು.
    ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಅವರು ಹೊಸಹಳ್ಳಿ ವೃತ್ತದ ಆಟೋ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಎಸ್.ಡಿ.ಜಯರಾಂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಂತೆಯೇ ಬೆಳ್ಳಿ ರಥದಲ್ಲಿ ಹೂವುಗಳಿಂದ ಅಲಂಕರಿಸಿ ಅಳವಡಿಸಿದ್ದ ಎಸ್.ಡಿ.ಜಯರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
    ಖ್ಯಾತ ವೈದ್ಯ ಡಾ.ಸಿ.ಎಂ.ಪರಮೇಶ್, ಬಿಜೆಪಿ ಮುಖಂಡ ಡಾ.ಜಗನ್ನಾಥಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ. ಶಂಕರೇಗೌಡ, ಜಯಕರ್ನಾಟಕ ಸಂಘಟನೆಯ ಎಸ್.ನಾರಾಯಣ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಸಿನಿಮಾ ನಿರ್ದೇಶಕ ಸೂನಗಹಳ್ಳಿ ರಾಜು, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಸತ್ಯನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.
    ಸಂಸ್ಕೃತಿ-ಪರಂಪರೆಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಜನಪದ ಕಲಾಪ್ರಕಾರಗಳಿಗೇನೂ ಕೊರತೆ ಇಲ್ಲ. ಇಂತಹ ಹಲವಾರು ಕಲಾ ಪ್ರಕಾರಗಳ ಭವ್ಯ ಮೆರವಣಿಗೆ ಚಾಲನೆ ದೊರೆತ ನಂತರ ಕಲಾವಿದರು ಅತ್ಯುತ್ಸಾಹದಿಂದ ಡೊಳ್ಳು, ನಗಾರಿ-ತಮಟೆಗಳ ಶಬ್ಧಕ್ಕನುಗುಣವಾಗಿ ಹೆಜ್ಜೆ ಹಾಕುವಲ್ಲಿ ಮಗ್ನರಾದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನತೆ ಕಣ್ಣು ಮಿಟುಕಿಸದೆ ಸಾಂಸ್ಕೃತಿಕ ಕಲೆಗಳನ್ನು ಸಂಭ್ರಮಿಸಿದರು. ಮೈಸೂರು ದಸರಾ ಸಾಂಸ್ಕೃತಿಕ ಮೆರವಣಿಗೆಯ ರೀತಿಯಲ್ಲಿ ಜಯರಾಮೋತ್ಸವಕ್ಕೆ ಜಾನಪದ ಕಲಾತಂಡಗಳು ಮೆರುಗು ನೀಡಿದವು.
    ದೊಣ್ಣೆ ವರಸೆ, ವೀರಗಾಸೆ, ಗಾರುಡಿಗೊಂಬೆ, ಪೂಜಾ ಕುಣಿತ, ಸೋಮನ ಕುಣಿತ, ಡೊಳ್ಳು, ನಗಾರಿ, ಪಟ ಕುಣಿತ, ಕಂಸಾಳೆ, ಗೊರವರ ಕುಣಿತ, ತಮಟೆ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದವು. ಮಾತ್ರವಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ್ಯಹೋರಾಟಗಾರರು, ರಾಜ್ಯದ ಮುಖ್ಯಮಂತ್ರಿಗಳು, ಹಿರಿಯ ಚೇತನಗಳು ಸೇರಿದಂತೆ ಹಲವಾರು ಮಹನೀಯರ ಭಾವಚಿತ್ರಗಳನ್ನೊಳಗೊಂಡ ಆಟೋಗಳ ಮೆರವಣಿಗೆ ಎಲ್ಲರ ಗಮನ ಸೆಳೆಯುವಂತೆ ಮಾಡಿತ್ತು. ಹೊಸಹಳ್ಳಿ ವೃತ್ತದ ಆಟೋ ನಿಲ್ದಾಣದಿಂದ ಹೊರಟ ಮೆರವಣಿಗೆ ವಿ.ವಿ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ ತಲುಪಿ ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸಮಾವೇಶಗೊಂಡವು.
    ಬಳಿಕ ಮಂಡ್ಯ ವಿವಿಯ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ವೇದಿಕೆಯಲ್ಲಿ ಕಲಾವಿದರಿಂದ ಜಾನಪದ ಝೇಂಕಾರ ಹಾಗೂ ರಂಗಭೂಮಿ ಕಲಾವಿದರಿಂದ ರಂಗಸಂಭ್ರಮ ನಡೆಯಿತು. ಇದೇ ವೇಳೆ ಯುವಜನ, ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಯುವಜನರಿಗೆ ಎಸ್.ಡಿ.ಜಯರಾಂ ಯುವ ಪ್ರಶಸ್ತಿ, ಸಮುದಾಯ ಸೇವಾ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಸಂಗೀತ ಸಂಜೆ ಆಕರ್ಷಕವಾಗಿ ಮೂಡಿಬಂದು ಎಲ್ಲರ ಕಣ್ಮನ ಸೂರೆಗೊಂಡಿತು. ವಿವಿಧೆಡೆಯಿಂದ ಸಹಸ್ರಾರು ಜನರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts