More

    ಮಲ್ಲಿಗೆ ಬೆಳೆವ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ

    ಬೈಂದೂರು: ಸ್ವಸಹಾಯ ಸಂಘದ ಸದಸ್ಯರು ಮಲ್ಲಿಗೆ ಬೆಳೆದು ಖಂಬದಕೋಣೆ ಅಥವಾ ಬೈಂದೂರು ಮಲ್ಲಿಗೆಯ ಬ್ರ್ಯಾಂಡ್ ಹುಟ್ಟುಹಾಕಬೇಕು. ಕನಿಷ್ಠ 250 ಗಿಡಗಳನ್ನು ಬೆಳೆಯುವ ಸ್ವಸಹಾಯ ಸಂಘಕ್ಕೆ ಸಹಕಾರಿ ಸಂಘದಿಂದ 1ಲಕ್ಷ ರೂ. ಬಡ್ಡಿರಹಿತ ಸಾಲ ನೀಡಲಾಗುವುದು ಮತ್ತು ಹೂವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲಾಗುವುದು ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
    ಸಂಘ ಹಾಗೂ ರೈತಸಿರಿ, ರೈತಸೇವಾ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಸಂಘದ ರೈತಸಿರಿ, ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಆಸಕ್ತ ರೈತರಿಗಾಗಿ ನಾಗೂರಿನ ಶ್ರೀ ಕೃಷ್ಣಲಲಿತಾ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವಸಹಾಯ ಸಂಘ ಕೇವಲ ಲೇವಾದೇವಿ ಸಂಸ್ಥೆಯಾಗದೆ, ಕಾಯಕದ ಮೂಲಕ ಉತ್ಪಾದನಾ ಚಟುವಟಿಕೆ ನಡೆಸಿ ಸದಸ್ಯರ ಸ್ವಾವಲಂಬನೆ ಸಾಧಿಸುವ ಸಾಧನಗಳಾಗಬೇಕು ಎನ್ನುವುದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಆಶಯ ಎಂದು ತಿಳಿಸಿದರು.

    ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ, ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡು, ನಿರ್ದೇಶಕರಾದ ಮಂಜು ದೇವಾಡಿಗ, ಜಲಜಾಕ್ಷಿ, ಹೂವ ನಾಯ್ಕ ಇದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಸ್ವಾಗತಿಸಿದರು. ಹಿರಿಯ ವ್ಯವಸ್ಥಾಪಕ ಚಂದ್ರಯ್ಯ ಶೆಟ್ಟಿ ವಂದಿಸಿದರು. ಚಂದ್ರ ಮೊಗವೀರ ನಿರೂಪಿಸಿದರು. ನಂತರ ನಡೆದ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ, ಮಲ್ಲಿಗೆ ಬೆಳೆಗಾರ ರಾಮಕೃಷ್ಣ ಶರ್ಮ ಬಂಟಕಲ್ ಮಲ್ಲಿಗೆ ಕೃಷಿ ಕುರಿತು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಎಚ್.ಎಸ್.ಚೈತನ್ಯ ರೋಗ ಮತ್ತು ಕೀಟ ನಿಯಂತ್ರಣ ಬಗೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts