More

    ಮಲ್ಲಿಗೆ ರೈತರಿಗೊಂದು ಸಂಘ

    – ಅವಿನ್ ಶೆಟ್ಟಿ ಉಡುಪಿ

    ಉಡುಪಿ ಮಲ್ಲಿಗೆ ರೈತರು ರೈತ ಉತ್ಪಾದಕರ ಸಂಸ್ಥೆ (ಫಾರ್ಮರ್ ಪ್ರೊಡ್ಯುಸರ್ ಆರ್ಗನೈಝೇಶನ್) ಸಂಘಟನೆಗೆ ಸಿದ್ದತೆ ನಡೆಸಿದ್ದಾರೆ. ನಬಾರ್ಡ್ ಕೂಡ ಇದಕ್ಕೆ ನೆರವಾಗಲು ಮುಂದಾಗಿದೆ.
    ಕರಾವಳಿಯಲ್ಲಿ ತನ್ನದೇ ಸ್ಥಾನ ಪಡೆದಿರುವ ಉಡುಪಿ ಮಲ್ಲಿಗೆ ಬೆಳೆಗಾರರ ಸಂಖ್ಯೆ 10 ಸಾವಿರಕ್ಕೂ ಅಧಿಕ. ಗ್ರಾಹಕರ ಹಿತಾಸಕ್ತಿ ಜತೆಗೆ ಬೆಳೆಗಾರರಿಗೆ ಲಾಭವಾಗುವ ನಿಟ್ಟಿನಲ್ಲಿ ಸಂಘ ಕಟ್ಟುವ ಬಗ್ಗೆ ರೈತರು ಯೋಜನೆ ರೂಪಿಸಿದ್ದಾರೆ.
    ಮಲ್ಲಿಗೆ ಬೆಳೆಗಾರರ ಸಂಘವನ್ನು ಸ್ಥಾಪಿಸಲು ಎರಡು ರೀತಿಯ ಪ್ರಯತ್ನ ನಡೆಯುತ್ತಿದೆ. ಬೆಳೆಗಾರರನ್ನು ಸಂಘಟಿಸಿ ಸುಮಾರು ಒಂದು ಸಾವಿರ ಮಂದಿಯನ್ನು ಸದಸ್ಯರನ್ನಾಗಿ ಮಾಡಿ ಕೇಂದ್ರ ಸರ್ಕಾರ ಯೋಜನೆಯಾಗಿರುವ ರೈತರ ಕಂಪನಿ ಸ್ಥಾಪಿಸುವುದು. ಇನ್ನೊಂದು ನಬಾರ್ಡ್ ಅಧೀನದಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸುವುದು. ಮಣಿಪಾಲ ಮಾಹೆ ಅಧೀನದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಎಂಐಎಂ) ಉಪನ್ಯಾಸಕ ಡಾ.ಹರೀಶ್ ಜಿ.ಜೋಷಿ, ಉಡುಪಿ ಮಲ್ಲಿಗೆಯ ಅಧ್ಯಯನ ನಡೆಸಿ ನಬಾರ್ಡ್ ಮೂಲಕ ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಬಗ್ಗೆ ಇವರು ಬೆಳೆಗಾರರನ್ನು ಮನದಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಬೆನಗಲ್ ತರಕಾರಿ ಬೆಳೆಗಾರರ ಸಂಘ, ಕುಕ್ಕೆಹಳ್ಳಿ ತರಕಾರಿ ಬೆಳೆಗಾರರ ಸಂಘ ಮತ್ತು ಮಟ್ಟುಗುಳ್ಳ ಬೆಳೆಗಾರರ ಸಂಘಗಳನ್ನು ನಬಾರ್ಡ್ ಮೂಲಕ ಸ್ಥಾಪಿಸಲಾಗಿದೆ. ಇದರ ಉಸ್ತುವಾರಿಯನ್ನು ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಅಧೀನದ ಎಂಐಎಂ ಸಂಸ್ಥೆ ನೋಡಿಕೊಳ್ಳುತ್ತಿದೆ.

    9 ಲಕ್ಷ ರೂ.ಯೋಜನಾ ವೆಚ್ಚ
    ಪ್ರತಿ ಸಂಘಕ್ಕೂ ನಬಾರ್ಡ್ 9 ಲಕ್ಷ ರೂ. ನೆರವು ನೀಡುತ್ತದೆ. ಇದರಲ್ಲಿ ಬೆಳೆಗಾರರಿಗೆ ತರಬೇತಿ, ಬೇರೆ ಫಾರ್ಮ್‌ಗಳಿಗೆ ಭೇಟಿ ಕಾರ್ಯಕ್ರಮ, ಸಂಘದ ನೋಂದಣಿ, ಮಾರ್ಗಸೂಚಿಗಳ ರಚನಾ ಕಾರ್ಯ ನಡೆಸಲಾಗುತ್ತಿದೆ. ಉಳಿದ ಸಂಘಗಳನ್ನು 2014ರಲ್ಲೇ ರಚಿಸಲಾಗಿದೆ. ಆರಂಭದಲ್ಲಿ ಮೂರು ವರ್ಷ, ನಂತರ ಮತ್ತೆ ಎರಡು ವರ್ಷಗಳಿಗೆ ಅವುಗಳನ್ನು ವಿಸ್ತರಿಸಲಾಗಿದೆ. ಈ ಸಂಘಗಳ ಒಟ್ಟು ಐದು ವರ್ಷಗಳ ಅವಧಿ 2020ರ ಮಾ.31ಕ್ಕೆ ಕೊನೆಗೊಳ್ಳತ್ತದೆ. ಮುಂದೆ ಅವು ಸ್ವತಂತ್ರವಾಗಿ ಮುನ್ನಡೆಯಲಿವೆ.

    ಮಧ್ಯವರ್ತಿಗಳಿಗೆ ಬ್ರೇಕ್
    ಸಂಘದಿಂದ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ದರ ಸಿಗುವ ಜತೆಯಲ್ಲಿ ಒಟ್ಟಾಗಿರುವುದರಿಂದ ಮಧ್ಯವರ್ತಿಗಳ ಪ್ರವೇಶ ಅಸಾಧ್ಯ. ಬೆಳೆಗಾರರ ಸಮಸ್ಯೆಗಳನ್ನು ಸಂಘದ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಬೆಳೆಗಳಿಗೆ ವೈಜ್ಞಾನಿಕವಾಗಿ ದರ ಕೂಡ ನಿಗದಿ ಪಡಿಸಬಹುದಾಗಿದೆ. ಸಂಘದ ಕಚೇರಿ ನಿರ್ವಹಣೆಗೆ ನಬಾರ್ಡ್‌ನಿಂದ ಹಣ ದೊರೆಯುತ್ತದೆ ಮತ್ತು ಇತರ ಖರ್ಚು ವೆಚ್ಚಗಳಿಗೆ ಅನುದಾನ ಒದಗಿಸಲಾಗುತ್ತದೆ ಎನ್ನುತ್ತಾರೆ ಡಾ.ಹರೀಶ್ ಜೋಷಿ.

    ಮಲ್ಲಿಗೆ ಬೆಳೆಗಾರರಿಗೆ ಸಂಘ ಅಗತ್ಯವಾಗಿ ಬೇಕಿದೆ. ಈವರೆಗೆ ಗ್ರಾಹಕರ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಸಂಘ ಮಾಡಿದರೆ ಉತ್ಪಾದಕರ ಹಿತಾಸಕ್ತಿಯನ್ನೂ ಪರಿಗಣಿಸಬಹುದು. ಈ ಬಗ್ಗೆ ಬೆಳೆಗಾರರ ಸಭೆ ಕರೆದು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು.
    -ರಾಮಕೃಷ್ಣ ಶರ್ಮ ಬಂಟಕಲ್, ಅಧ್ಯಕ್ಷ, ಉಡುಪಿ ಕೃಷಿಕ ಸಂಘ

    ವಿಶ್ವವಿದ್ಯಾಲಯದ ಸಂಸ್ಥೆಗೆ ಈ ರೀತಿಯ ಬೆಳೆಗಾರರ ಸಂಘವನ್ನು ನಬಾರ್ಡ್ ವಹಿಸಿಕೊಟ್ಟಿರುವುದು ಇದೇ ಮೊದಲು. ಉಳಿದೆಡೆ ಸಂಘಗಳನ್ನು ಎನ್‌ಜಿಒ ಹಾಗೂ ಇತರ ಸಂಸ್ಥೆಗಳಿಗೆ ವಹಿಸಿದೆ. ಇದರಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಬೆಳೆಗಳ ಬಗ್ಗೆ ಸಂಶೋಧನೆ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಮಲ್ಲಿಗೆ ಬೆಳೆಗಾರರು ಆಸಕ್ತಿ ತೋರಿಸಿ ನಬಾರ್ಡ್ ಮೂಲಕ ಸಂಘ ಸ್ಥಾಪಿಸಿದರೆ ಅನುಕೂಲ. ಸಂಘ ಬೆಳೆಸಲು ಅನುಭವ ಕೂಡ ಸಿಗುತ್ತದೆ.
    ಡಾ.ಹರೀಶ್ ಜೋಷಿ, ಉಪನ್ಯಾಸಕ, ಎಂಐಎಂ ಮಣಿಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts