More

    ನೋವನ್ನೂ ಸಕಾರಾತ್ಮಕ ಪರಿವರ್ತನೆಯ ಪಥವಾಗಿಸಿದರೆ…

    | ರವೀಂದ್ರ ಎಸ್​. ದೇಶಮುಖ್​ 

    ‘ಇಷ್ಟು ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗಿದೆ’ ಎಂಬ ಸಂದೇಶ ಓದಿದಾಕ್ಷಣ ಮುಖ ಇಷ್ಟಗಲ ಅರಳುತ್ತದೆ. ‘ವಿಟಮಿನ್ ಎಂ’ನ ಮಹಿಮೆಯೇ ಹಾಗೆ ಬಿಡಿ. ಅದಕ್ಕೇ ಹಿರಿಯರು ಹೇಳಿದ್ದು ‘ದುಡ್ಡಿದ್ದವನೇ ದೊಡ್ಡಪ್ಪ..’ ಅಂತ. ಹಾಗೇ, ತೀರಾ ಧನವ್ಯಾಮೋಹಿಗಳನ್ನು ಕಂಡೇ ಹೇಳಿದ್ದು-‘ಹಣ ಕಂಡ್ರೆ ಹೆಣ ಕೂಡ ಬಾಯಿ ಬಿಡುತ್ತೆ’ ಅಂತ. ಇರಲಿ. ಹಣದ ಮಹಿಮೆ, ಅದಕ್ಕೆ ಮನುಷ್ಯ ಪಡುವ ಕಷ್ಟ ಎಷ್ಟು ವರ್ಣಿಸಿದರೂ ಕಡಿಮೆಯೇ.

    ಬ್ಯಾಂಕ್ ಖಾತೆ, ಹಣದ ಇತರ ಖಾತೆಗಳಿಗೆಲ್ಲ ಕ್ರೆಡಿಟ್, ಡೆಬಿಟ್ ಸೌಲಭ್ಯಗಳಿರುವಂತೆ ಆಯುಸ್ಸಿಗೂ ಹೀಗೆ ಕ್ರೆಡಿಟ್ ಫೆಸಿಲಿಟಿ ಇದ್ದಿದ್ದರೆ… ಬಹುಶಃ ಜನರು ಆಗ ‘ಒಂದಿಷ್ಟು ಲಕ್ಷ ಬೇಕಾದರೆ ಕೊಟ್ಟುಬಿಡ್ತೇನೆ, ಆಯುುಸ್ಸು ಮಾತ್ರ ಕೇಳಬೇಡ ಕಣಯ್ಯ’ ಅಂತಿದ್ದರೇನೋ. ಅಥವಾ ತಮ್ಮ ಆಯುಸ್ಸನ್ನೇ ವರ್ಗಾಯಿಸಿ ಪ್ರೀತಿಪಾತ್ರರನ್ನು ಉಳಿಸಿಕೊಂಡು, ಮಾನವಸಂಬಂಧಗಳಿಗೆ ಹೊಸ ಭಾಷ್ಯ ಬರೆಯುತ್ತಿದ್ದರೇನೋ. ಯಯಾತಿ ಮತ್ತು ಪುರುವಿನ ಕಥೆ ಗೊತ್ತಿರುವಂಥದ್ದೇ. ಶುಕ್ರಾಚಾರ್ಯರಿಂದ ಶಪಿತನಾದ ರಾಜ ಯಯಾತಿ ವೃದ್ಧಾಪ್ಯ ಪಡೆದು ಶೋಕದಲ್ಲಿ ಮುಳುಗಿದ. ಐವರು ಪುತ್ರರಿಗೂ, ತನ್ನ ಮುಪ್ಪನ್ನು ಸ್ವೀಕರಿಸಿ, ಯೌವನ ನೀಡುವಂತೆ ಗೋಗರೆದ. ಯಾರೂ ಒಪ್ಪಲಿಲ್ಲ. ಯಯಾತಿ ಮತ್ತಷ್ಟು ಶೋಕಕ್ಕೆ ಜಾರಿದ. ಆತನ ಸ್ಥಿತಿ ನೋಡಲಾಗದೆ ಮಗ ಪುರು ತಂದೆಯ ವೃದ್ಧಾಪ್ಯ ಪಡೆದು, ತನ್ನ ಯೌವನವನ್ನು ಅವನಿಗೆ ವರ್ಗಾಯಿಸಿದ! ಮತ್ತೆ ನೂರಾರು ವರ್ಷಗಳ ಕಾಲ ವಿಲಾಸೀ ಜೀವನದಲ್ಲಿ ಮುಳುಗಿದ ಯಯಾತಿಗೆ ಅದೊಂದು ಕ್ಷಣದಲ್ಲಿ ‘ಅಯ್ಯೋ ಮಗನಿಗೆ ಅನ್ಯಾಯ ಮಾಡಿಬಿಟ್ಟೆ’ ಎಂದೆನಿಸಿ, ಪುರುವಿಗೆ ಮತ್ತೆ ಯೌವನ ಮರಳಿಸಿದ್ದಲ್ಲದೆ, ಆತನನ್ನೇ ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ. ಇದೇ ಪುರುವಿನ ಹಸ್ತಿನಾಪುರದಲ್ಲಿ ಕೌರವ, ಪಾಂಡವರ ಜನನ ಆಯಿತು!

    ಈ ಕಾಲದಲ್ಲೂ ಹೀಗೆ ಆಯುಸ್ಸನ್ನು ವರ್ಗಾವಣೆ ಮಾಡುವ ಸೌಲಭ್ಯ ಇದ್ದಿದ್ದರೆ ಮಾನವ ಸಂಬಂಧಗಳು ಇನ್ನೆಷ್ಟು ಸಂಕೀರ್ಣವಾಗುತ್ತಿದ್ದವೋ? ಅಥವಾ ಪ್ರೀತಿಪಾತ್ರರನ್ನು ಇನ್ನಷ್ಟು ಅವಧಿಗೆ ಉಳಿಸಿಕೊಳ್ಳುವ ಮಾಯಾದಂಡವೂ ಆಗಬಹುದಿತ್ತು ಎನ್ನಿ! ಯಾರೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ಮರಣಶಯ್ಯೆ ತಲುಪಿದ್ದರೆ ಆತ್ಮೀಯರು -‘ಆ ದೇವರು ನನ್ನ ಆಯುಸ್ಸನ್ನೂ ನಿನಗೆ ಕೊಡಲಿ. ನೀನು ಮೊದಲಿನಂತಾದರೆ ಸಾಕು…’ ಎನ್ನುವುದುಂಟು. ಅದು ಏನಿದ್ದರೂ ಬದುಕಿನ ಈ ಆಟಗಳನ್ನು ನೋಡಿದಾಗ ಅನಿಸುವುದು-‘ಒಂದಂತೂ ನಿಶ್ಚಿತ, ಇಲ್ಲಿ ಯಾವುದೂ ನಿಶ್ಚಿತವಲ್ಲ ಅಂತ!’ ಸಾವು ಎಂಬುದು ಮನುಷ್ಯನನ್ನು ತುಂಬ ಕಂಗೆಡಿಸುವ, ದುಃಖವನ್ನು ವೇದನೆಯಾಗಿ ಪರಿವರ್ತಿಸುವ, ಜೀವನವನ್ನೇ ನೈರಾಶ್ಯದ ಕೂಪಕ್ಕೆ ತಳ್ಳುವ ವಿಧಿಯ ಆಟ. ನಮ್ಮ ಹುಟ್ಟಿನೊಂದಿಗೇ ಸಾವಿನ ಕಡೆಗೆ ಪ್ರಯಾಣ ಆರಂಭವಾಗುತ್ತದೆ; ಇಲ್ಲಿ ಯಾರೂ ಶಾಶ್ವತರಲ್ಲ. ಒಂದಿಲ್ಲ ಒಂದು ದಿನ ಮೃತ್ಯುದೇವತೆಯ ಕರೆಗೆ ಓಗೊಡಲೇಬೇಕು ಎಂಬುದು ತಾತ್ವಿಕ ದೃಷ್ಟಿಯಲ್ಲಿ ವಾಸ್ತವವೇ ಆಗಿದ್ದರೂ ಅದೆಷ್ಟೋ ಸಾವುಗಳು ಇಂಥ ವಾಸ್ತವವನ್ನು ಅರಗಿಸಿಕೊಳ್ಳದಂತೆ ಮಾಡಿಬಿಡುತ್ತವೆ.

    2020- ಸಾವುಗಳಿಂದಲೇ ಕಂಗೆಡಿಸಿದ ವರ್ಷ. ಕರೊನಾದ ಅಟ್ಟಹಾಸ ಅಕಾಲಿಕ ಸರಣಿ ಸಾವುಗಳ ವಿಷಾದ ಲೋಕ ಸೃಷ್ಟಿಸಿದರೆ, ಇತರ ಕಾರಣಗಳಿಂದಲೂ ಬದುಕಿನ ಯಾತ್ರೆಯನ್ನು ಮಧ್ಯದಲ್ಲೇ ಮುಗಿಸಿದವರ ಸಂಖ್ಯೆಯೂ ಕಡಿಮೆಯೇನಲ್ಲ. ಕಳೆದ 11 ತಿಂಗಳುಗಳತ್ತ ತಿರುಗಿ ನೋಡಿದರೆ, ಅಯ್ಯೋ ಅದೆಷ್ಟು ಜನರು ಈಗ ನಮ್ಮ ಜತೆ ಇಲ್ಲ. ಪ್ರಣಬ್ ಮುಖರ್ಜಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸುಶಾಂತ್ ಸಿಂಗ್, ರಿಷಿ ಕಪೂರ್, ಚಿರು ಸರ್ಜಾ, ಸುರೇಶ ಅಂಗಡಿ, ನಿಶಿಕಾಂತ್ ಕಾಮತ್, ಪಂಡಿತ್ ಜಸ್​ರಾಜ್, ಇರ್ಫಾನ್ ಖಾನ್, ಸರೋಜ್ ಖಾನ್, ವಾಜಿದ್ ಖಾನ್, ರವಿ ಬೆಳಗೆರೆ… ಅದೆಷ್ಟು ಸೆಲಬ್ರಿಟಿಗಳು ಜೀವನದ ಪಯಣ ಮುಗಿಸಿದರು. ಅಷ್ಟೇ ಅಲ್ಲ, ನಮ್ಮದೇ ವೃತ್ತಿಬಾಂಧವರು, ಪರಿಚಯಸ್ಥರು, ಸ್ನೇಹಿತರು-ಎಲ್ಲೇ ಕಿವಿ ಇಟ್ಟರೂ ಸಾವಿನ ಸುದ್ದಿಗಳೇ ಅಪ್ಪಳಿಸಿದವು. ಸಾವಿನ ವಿಷಯದಲ್ಲಿ ಮನುಷ್ಯ ಅಸಹಾಯಕ ಎಂಬುದು ನಿಜ. ಆದರೆ, ಇದು ತಂದೊಡ್ಡುವ ಕಳವಳ, ದುಃಖ, ತಲ್ಲಣ, ಸೃಷ್ಟಿಸುವ ಶೂನ್ಯಭಾವ ಅಸಹನೀಯ. ಇಂಥ ಸಮಯದಲ್ಲಿ ಯಾವುದೇ ಸಮಾಧಾನ, ಸಾಂತ್ವನ ಮನಸ್ಸನ್ನು ನಾಟುವುದಿಲ್ಲ. ನೆನಪುಗಳು ಅಲೆಅಲೆಯಾಗಿ ಬಂದಪ್ಪಳಿಸಿ ಭಾವಕೋಶವನ್ನು ಪ್ರಕ್ಷುಬ್ಧವಾಗಿಸುತ್ತವೆ.

    ಬದುಕಿನ ವ್ಯಾಖ್ಯಾನ ಮಾಡುವಾಗ, ‘ಕೆಲವೊಬ್ಬರು ಬದುಕಿದ್ದೂ ಸತ್ತಿರುತ್ತಾರೆ, ಇನ್ನು ಕೆಲವರು ತಮ್ಮ ಸಾಧನೆಯಿಂದ ಸತ್ತ ಮೇಲೂ ಜನರ ನೆನಪಿನಲ್ಲಿ ಬದುಕಿರುತ್ತಾರೆ’ ಎಂಬ ಮಾತು ಪ್ರಚಲಿತದಲ್ಲಿದೆ. ಹಾಗಾದರೆ, ಬದುಕು ಎಂದರೇನು? ಎಂಬ ಮೂಲಭೂತ ಪ್ರಶ್ನೆಗೆ ಮತ್ತೆ ಹೊಸದಾಗಿ ಉತ್ತರ ಹುಡುಕುವ ಪ್ರಯತ್ನ ಆರಂಭವಾಗಬೇಕಿದೆ. ಮನುಷ್ಯನ ಜೀವನರೇಖೆ ಬರಬರುತ್ತ ಕ್ಷೀಣಿಸುತ್ತಿದೆ. ಅಂದಮೇಲೆ, ಜೀವನವನ್ನು ಜೀವಿಸುವ ಕಲೆಯನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕಿದೆ. ಕೆಲವೊಬ್ಬರು ಆಸ್ಪತ್ರೆಯ ಹಾಸಿಗೆ ಮೇಲೆ ಕೊನೆಯ ದಿನಗಳನ್ನು ಎಣಿಸುತ್ತಿರುವಾಗ, ‘ಲೈಫ್​ನಲ್ಲಿ ನಾನು ಅಂದುಕೊಂಡಂತೆ ಬದುಕಲಿಲ್ಲ. ಆಸೆಗಳ ವಿರುದ್ಧ ದಿಕ್ಕಿನಲ್ಲೇ ಸಾಗಿದೆ. ನೆಮ್ಮದಿ, ಸಂತೃಪ್ತಿ ಮರೀಚಿಕೆಯಾಗಿಯೇ ಉಳಿಯಿತು’ ಎನ್ನುತ್ತಾರೆ. ಅಂದರೆ, ಕೊರಗುತ್ತ, ವೇದನೆಪಟ್ಟುಕೊಳ್ಳುತ್ತಲೇ ಜೀವನಯಾತ್ರೆ ಮುಗಿಸುತ್ತಾರೆ. ನಾಲ್ಕು ದಿನದ ಬದುಕಿನಲ್ಲಿ ಒಂದಿಷ್ಟು ನೆಮ್ಮದಿಯಿಂದ ಇರಲು ಏನು ಅಡ್ಡಿ? ಎಂಬ ಪ್ರಶ್ನೆಯನ್ನು ನಮಗೇ ನಾವೇ ಕೇಳಿಕೊಂಡು ಅಂತರಾತ್ಮದ ಉತ್ತರಗಳನ್ನು ಆಲಿಸುತ್ತ ಹೋದರೆ ಮಾನಸಿಕ ಬಂಧನಗಳು ಕಳಚಿಕೊಳ್ಳುತ್ತ ಹೋಗುತ್ತವೆ. ಮನುಷ್ಯರಾದ ನಾವು ಹಾಗೆ ಮಾಡಬೇಕು, ಹೀಗೆ ಹೊಂದಿಸಬೇಕು ಎಂದೆಲ್ಲ ಏನೇನೋ ಲೆಕ್ಕಾಚಾರ ಇಟ್ಟುಕೊಂಡಿರುತ್ತೇವೆ. ಅದಕ್ಕಾಗಿ ಎಷ್ಟೆಲ್ಲ ಹೋರಾಟ ಮಾಡುತ್ತೇವೆ. ಯಾವುದೇ ಕಾರ್ಯಸಾಧನೆಗೆ ಮನುಷ್ಯಪ್ರಯತ್ನಗಳೇನೋ ಬೇಕು. ಆದರೆ, ನಾವು ಏನೇ ಅಂದುಕೊಂಡರೂ ಆಗುವುದೆಲ್ಲ ಒಂದು ಶಕ್ತಿ ಅಥವಾ ತತ್ತ್ವದ ಮೇಲೆ ಅವಲಂಬಿತವಾಗಿದೆ. ಅದನ್ನು ನಾವು ಭಗವಂತ, ಪರಮಾತ್ಮ, ವಿಧಿ(ಹಣೆಬರಹ) ಹೀಗೆ ಏನು ಬೇಕಾದರೂ ಕರೆಯಬಹುದು. ಆದರೆ ನಡೆಯುವುದು ಮಾತ್ರ ಆ ಶಕ್ತಿಯ ಆಣತಿಯಂತೆಯೇ.

    ಹಾಗಿದ್ದರೆ ನಾವೇನು ಮಾಡಬಹುದು? ಸಂಬಂಧಗಳನ್ನು ಗೌರವಿಸುತ್ತಲೇ ನಮ್ಮದೊಂದು ಸುಂದರಪಥ ನಿರ್ವಿುಸಿಕೊಳ್ಳಬೇಕು. ಸಂಬಂಧಗಳ, ಬಾಂಧವ್ಯಗಳ ಲೋಕದಲ್ಲಿ ಪ್ರೀತಿ, ಅಂತಃಕರಣಗಳೇ ವಿಜೃಂಭಿಸಬೇಕೇ ಹೊರತು ಕಲಹ, ಮನಸ್ತಾಪಗಳಿಗೆ ಜಾಗವಿರಬಾರದು. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಹೇಗೆ ಅಂತರಂಗದ ಪ್ರಕ್ರಿಯೆಯೋ ಹಾಗೇ ಇತರರನ್ನು ಅರ್ಥ ಮಾಡಿಕೊಳ್ಳಬೇಕಾದರೂ ಆಂತರ್ಯದ ಕರೆಗೆ ಕಿವಿಗೊಡಲೇಬೇಕು. ಮನುಷ್ಯ ಸಂಬಂಧಗಳ ಘನತೆಗೆ ಪೆಟ್ಟು ಬೀಳದಂತೆ ಬದುಕಿದರೆ ನಾವು ಜಗತ್ತನ್ನು ಬಿಡುವಾಗ ಕೊರಗುವ ಪರಿಸ್ಥಿತಿ ಇರುವುದಿಲ್ಲ. ಇರುವಷ್ಟು ದಿನ ಒಳ್ಳೆಯದನ್ನೇ ಮಾಡಿದ್ದೇನೆ ಎಂಬ ಸಣ್ಣ ಸಾರ್ಥಕತೆಯೇ ಪಾಪಪ್ರಜ್ಞೆಯನ್ನು ದೂರವಾಗಿಸುತ್ತದೆ.

    ಇನ್ನು, ಅಗಲಿದವರನ್ನು ನಾಲ್ಕು ದಿನ ಹೊಗಳಿ, ಬಳಿಕ ಸುಮ್ಮನಾದರೆ ಸಾಕಾಗುವುದಿಲ್ಲ. ನಮ್ಮನ್ನು ಪ್ರಭಾವಿಸಿದ, ಪಾಠ ಕಲಿಸಿದ, ಪ್ರೇರಣೆ ತುಂಬಿದ, ಸಹಾಯ ಮಾಡಿದ, ಕರುಣೆ ಹಂಚಿದ ಜೀವ ಅಗಲಿದ ಮೇಲೂ ನಮಗೆ ಅಭಿಮಾನ ಕಡಿಮೆ ಆಗಬಾರದು ಎಂದರೆ, ಅವರ ಜೀವನದ ಆದರ್ಶದ ಸಣ್ಣ ಎಳೆಯನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾರ್ಥಕ ಎನಿಸುವಂಥ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಏಕೈಕ ಪುತ್ರ ಅಗಲಿದ ಬಳಿಕ ಖಿನ್ನತೆಗೆ ಜಾರಿದ್ದ ಮುಂಬೈಯ ದಂಪತಿ, ಆ ಬಳಿಕ ಮಗನ ಖುಷಿಯ ಕ್ಷಣಗಳನ್ನು ನೆನಪಿಸಿಕೊಂಡು, ಪ್ರತಿನಿತ್ಯ ನೂರಾರು ನಿರಾಶ್ರಿತರಿಗೆ ಊಟ ಒದಗಿಸುತ್ತಿದ್ದಾರೆ. ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅವರು ಪತಿ ಅನಂತಕುಮಾರ್ ನೆನಪಿನಲ್ಲಿ ನಿತ್ಯ ನೂರಾರು ಜನರಿಗೆ ಊಟ ಒದಗಿಸುವ ಮಾದರಿ ಕಾರ್ಯಕ್ಕೆ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ನೋವನ್ನೂ ಜೀವನ ಪರಿವರ್ತನೆಯ ಸಕಾರಾತ್ಮಕ ಪಥವಾಗಿಸಿಕೊಳ್ಳುವುದೆಂದರೆ ಹೀಗೆ.

    ಅಗಲಿದವರಿಗೆ ನಿಜವಾದ ಶ್ರದ್ಧಾಂಜಲಿ ಎಂದರೆ ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು, ಅವರು ಬಿಟ್ಟುಹೋದ ಆದರ್ಶಗಳನ್ನು ಅನುಷ್ಠಾನಕ್ಕೆ ತರುವುದು. ಲೌಕಿಕ ಬದುಕಿನಲ್ಲಿ ಸದಾ ನೆನಪಿಸಿಕೊಳ್ಳುತ್ತ ಇರುವುದು. ಎಸ್​ಪಿಬಿ ಹಾಡುಗಳನ್ನು ಕೇಳುವುದು, ಬೆಳಗೆರೆ ಕೃತಿಗಳನ್ನು ಓದುವುದು, ರಿಷಿ, ಸುಶಾಂತ್ ಸಿನಿಮಾಗಳನ್ನು ನೋಡುವುದು… ಇವೆಲ್ಲ ನೆಮ್ಮದಿಯ ನಿಲ್ದಾಣಕ್ಕೆ ದಾರಿಗಳು. ಹೀಗೆ ಮಾಡ್ತಾ ಮಾಡ್ತಾನೇ ಮನದ ಶೋಕವೆಲ್ಲ ತೊಡೆದುಹಾಕಬಹುದಲ್ವೇ? ನಾವೂ ಒಂದು ದಿನ ಹೋಗಲೇಬೇಕು. ನಿನ್ನೆ ಕಳೆದುಹೋಗಿದೆ, ನಾಳೆ ಹೇಗಿರುತ್ತೋ ಗೊತ್ತಿಲ್ಲ, ಇವತ್ತು ಮನಃಪೂರ್ತಿ ಬದುಕಿಬಿಡೋಣ. ದುಃಖದ ಕೋಟೆಯನ್ನು ಒಡೆದು, ಪ್ರೀತಿಯ ಸಂಗಡದಲ್ಲಿ ಬದುಕೋಣ, ಬೆಳೆಯೋಣ. ಮನಸ್ಸಲ್ಲಿ ನೋವಿದ್ದರೆ ನಾವೇ ಕಣ್ಣೀರು ಹಾಕಿ ನಿರಾಳರಾಗೋಣ. ಕವಿಯೊಬ್ಬ ಹೇಳುವಂತೆ-‘ನಮ್ಮ ಕಣ್ಣೀರು ನಾವೇ ಒರೆಸಿಕೊಳ್ಳೋಣ. ಬೇರೆಯವರು ಬಂದು ಕಣ್ಣೀರು ಒರೆಸಿದರೂ ಅದು ತಾತ್ಕಾಲಿಕ…’. ಆಯುಸ್ಸನ್ನು ವರ್ಗಾವಣೆ ಮಾಡಲು ಸಾಧ್ಯ ಇಲ್ಲದಿದ್ದರೇನಂತೆ, ಖುಷಿ, ಧನ್ಯತೆ, ಸಂತೃಪ್ತಿ, ಸಹಕಾರಗಳನ್ನು ಖಂಡಿತ ವರ್ಗಾವಣೆ ಮಾಡಲು ಸಾಧ್ಯವಿದೆ! ನಮ್ಮ ಚೌಕಟ್ಟಿನಲ್ಲಿ ಈ ಜೀವನಮೌಲ್ಯಗಳಿಗೆಲ್ಲ ಜೀವ ತುಂಬೋಣ.

    ಕರೊನಾ ಅದೆಷ್ಟೋ ಪಾಠಗಳನ್ನು ಕಲಿಸಿದೆ. ಆದರೂ ಮನುಷ್ಯ ಮತ್ತೆ ಮತ್ತೆ ಅದೇ ತಪು್ಪಗಳನ್ನು ಮಾಡುತ್ತ, ಇಷ್ಟು ಬೇಗ ಆ ಪಾಠ ಮರೆಯುತ್ತಿದ್ದಾನೆ ಎಂಬ ಬೇಸರವನ್ನೂ ಇತ್ತೀಚೆಗೆ ಹಿರಿಯರೊಬ್ಬರು ವ್ಯಕ್ತಪಡಿಸಿದರು. ಬದುಕು-ಸಾವಿನ ಕುರಿತಾದ ಜಿಜ್ಞಾಸೆ, ಚಿಂತನೆಗಳು ನಮ್ಮನ್ನು ಇನ್ನಷ್ಟು ನೈತಿಕವಾಗಿ, ಜೀವನ್ಮುಖಿಯಾಗಿ, ನೆಮ್ಮದಿಯಾಗಿ ಬಾಳಲು ಪ್ರೇರೇಪಿಸಿದರೆ-ನಾವು ಮತ್ತು ಬದುಕು ಎರಡೂ ಗೆದ್ದಂತೆ!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts