More

    ಕಲಾವಿದರಿಗೆ ಶಕ್ತಿ ಕೊಡುವ ಕೆಲಸವಾಗಲಿ ; ಜಿಪಂ ಅಧ್ಯಕ್ಷ ವೆಂಕಟೇಶ್ ಅಭಿಪ್ರಾಯ

    ಕೋಲಾರ : ಕಲಾವಿದರಿಗೆ ಜಿಲ್ಲಾಡಳಿತ, ಸರ್ಕಾರ ಶಕ್ತಿ ಕೊಟ್ಟರೆ ಕಲಾವಿದರು ಜಿಲ್ಲೆ, ನಾಡಿಗೆ ಕೀರ್ತಿ ತರುತ್ತಾರೆ ಎಂದು ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.

    ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಸ್ವರ ಮಾಧುರ್ಯ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಜಾನಪದ ಕಲಾ ಸಂಘ ಜನ್ನಘಟ್ಟ ವತಿಯಿಂದ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಝೇಂಕಾರ-ನೆಲದ ಸಂಸ್ಕೃತಿಗಾಗಿ ದುಡಿಯುವ ಕಲಾವಿದರಿಗೆ ನೂರು ಧ್ವನಿ ನೂರು ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲೆಮರೆ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

    ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಜನಪದ ಕಲೆ ನಶಿಸಿ ಹೋಗುತ್ತಿದೆ. ನಮ್ಮ ಪೂರ್ವಜರು ನುಡಿಸುತ್ತಿದ್ದ ತಂಬೂರಿ, ತಾಳ, ಗೆಜ್ಜೆ, ಕೇಳಿಕೆ, ನಾಟಕ, ಸೋಬಾನೆ ಪದ, ತಮಟೆ, ತುಡುಂ, ಜಗ್ಗಲಿಗೆ, ನಗಾರಿ, ಗಾರುಡಿಗೊಂಬೆ, ರಾಗಿ ಬೀಸುವ ಪದ ಮಾಯವಾಗಿದ್ದು, ಯಾಂತ್ರಿಕ ಉಪಕರಣಗಳಾದ ಮೊಬೈಲ್, ಕೀಬೋರ್ಡ್ ಕಂಪ್ಯೂಟರ್ ಮೇಲುಗೈ ಸಾಧಿಸಿದೆ. ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಯುವ ಪೀಳಿಗೆಗೆ ಜಾನಪದ ತರಬೇತಿ ನೀಡಿ ಮುಂದಿನ ಪೀಳಿಗೆಗೆ ಇವೆಲ್ಲವೂ ಕಲಿಸಿ ಉಳಿಸಬೇಕು ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಉಚಿತ ಬಸ್‌ಪಾಸ್, ಆರೋಗ್ಯ ತಪಾಸಣೆ, ಗುರುತಿನ ಚೀಟಿ, ನಿವೇಶನ ಇಲ್ಲದವರಿಗೆ ನಿವೇಶನ, ಮನೆ ಕಟ್ಟಲು ಧನಸಹಾಯ ನೀಡಬೇಕು. ಮಾಸಾಶನವನ್ನು 5,000 ರೂ.ಗೆ ಹೆಚ್ಚಿಸಬೇಕು, ಕಲಾವಿದರ ಕಲಾ ಗ್ರಾಮಕ್ಕೆ 10 ಎಕರೆ ಜಮೀನು ಮೀಸಲಿಡಬೇಕು. ಅಕಾಲಿಕ ಮರಣ ಹೊಂದಿದರೆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, 1 ಲಕ್ಷ ರೂ.ಗಳ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ವೇಮಗಲ್ ಡಿ.ನಾರಾಯಣಸ್ವಾಮಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಸಮೇತನಹಳ್ಳಿ ಲಕ್ಷ್ಮಣ್‌ಸಿಂಗ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್,ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ತಾಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್, ಉಪನ್ಯಾಸಕರಾದ ಜೆ.ಜಿ. ನಾಗರಾಜ್, ಅರಿವು ಡಾ.ಶಿವಪ್ಪ, ಕಸಾಪ ನಗರಾಧ್ಯಕ್ಷ ಆರ್. ಶಿವಕುಮಾರ್ ಗೌಡ, ಜನ್ನಘಟ್ಟ ಗ್ರಾಪಂ ಅಧ್ಯಕ್ಷ ವಿ.ಸತೀಶ್‌ಮೂರ್ತಿ, ಮುದುವತ್ತಿ ಗ್ರಾಪಂ ಅಧ್ಯಕ್ಷ ಎಂ.ನಾಗೇಂದ್ರಕುಮಾರ್ ಪಾಲ್ಗೊಂಡಿದ್ದರು.

    ಕಲಾವಿದರಿಗೆ ಗೌರವ: ಕಲಾವಿದರಾದ ಮಾರ್ಜೇನಹಳ್ಳಿ ತಿಮ್ಮಪ್ಪ, ಡಾ.ಶರಣಪ್ಪ ಗಬ್ಬೂರ್, ಎ.ಎನ್.ವೆಂಕಟೇಶ್, ಶಂಕರಪ್ಪ, ಚಂಗಲರಾಯಪ್ಪ, ಈಶ್ವರಪ್ಪ, ಹನುಮಪ್ಪ, ಕಲ್ಕೆರೆ ದೊಡ್ಡ ನಂಜಪ್ಪ, ಹುತ್ತೂರು ಶ್ರೀನಿವಾಸ್, ಬೆಳ್ಳೂರು ಬಿ.ವಿ.ರಾಮಕೃಷ್ಣಮೂರ್ತಿ, ನಾರಾಯಣಪುರ ನಾರಾಯಣಸ್ವಾಮಿ, ತೇಜುಶ್ರೀ, ತ್ಯಾವಾನಹಳ್ಳಿ ಕಾಶಿನಾಥ್, ಬಾಲಕೃಷ್ಣಪ್ಪ ಕೋಗಿಲೇರು, ವೇಮಗಲ್ ಪಿ.ಕೃಷ್ಣಪ್ಪ, ತಬಲ ರಮಣ, ನರಸಾಪುರ ಕೃಷ್ಣಪ್ಪ, ಬೇತಮಂಗಲ ವೆಂಕಟರಮಣ, ಹೊಸಮಟ್ನಹಳ್ಳಿ ಸತೀಶ್, ಐತರಾಸನಹಳ್ಳಿ ಸಂಜೀವಪ್ಪ, ಗದ್ದೇಕಣ್ಣರು ವೆಂಕಟಮ್ಮ, ಅರಾಭಿಕೊತ್ತನೂರು ಮುಳುವಾಗಲಪ್ಪ, ನಾಗನಹಳ್ಳಿ ರಾಮರೆಡ್ಡಿ ಸೇರಿ 100ಕ್ಕೂ ಹೆಚ್ಚು ಕಲಾವಿದರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts