More

    ಜನಮತ: ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಬೆಳೆಯಲಿ

    ಜನಮತ: ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಬೆಳೆಯಲಿಕರ್ನಾಟಕದ ಇತಿಹಾಸ ಎಂದರೆ ವಾಸ್ತವವಾಗಿ ಕಲ್ಯಾಣ ಕರ್ನಾಟಕದ ಸಮೃದ್ಧ ಇತಿಹಾಸವಾಗಿದೆ. ರಾಷ್ಟ್ರಕೂಟ, ಚಾಲುಕ್ಯ, ವಿಜಯನಗರ ರಾಜ್ಯಗಳು ಅರಳಿದ ನಾಡು, ಕೃಷ್ಣ, ಭೀಮಾ, ತುಂಗಭದ್ರಾ ನದಿಗಳ ತೀರದ ಪುಣ್ಯಕ್ಷೇತ್ರಗಳ ತಾಣ, ಸಾಹಿತ್ಯ, ಕಲೆ, ಸಂಗೀತ, ಗಣಿತ, ನ್ಯಾಯ, ಜಾನಪದ, ದಾಸರ ಹಾಡುಗಳು, ಶರಣರ ವಚನಗಳು, ತತ್ವಪದಗಳು ಸೇರಿದಂತೆ ಯಾವ ಕ್ಷೇತ್ರ ಪ್ರವೇಶಿಸಿದರೂ ಅಲ್ಲಿ ಕಲ್ಯಾಣ ಕರ್ನಾಟಕದ ಪ್ರಭಾವ ಕಾಣುತ್ತೇವೆ. ಪರಿಣಾಮ ಪೌರಾಣಿಕ, ಐತಿಹಾಸಿಕ ಮಹತ್ವದ ನೂರಾರು ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ. ಆ ಎಲ್ಲ ಕ್ಷೇತ್ರಗಳಿಗೆ ರಸ್ತೆ, ಯಾತ್ರಿ ನಿವಾಸ, ನೀರು, ವಿದ್ಯುತ್​ಗಳಂತಹ ಮೂಲಭೂತ ಸೌಲಭ್ಯ ಮತ್ತು ಧಾರ್ವಿುಕ ಆಚರಣೆಗಳಿಗೆ ಆದ್ಯತೆ ಕಲ್ಪಿಸಿದರೆ ಆರ್ಥಿಕತೆ ಅರಳುತ್ತದೆ. ಉದ್ಯೋಗಗಳ ಸೃಷ್ಟಿ ಆಗುತ್ತವೆ. ಇದೆಲ್ಲದರಿಂದ ಪ್ರದೇಶ ಅಭಿವೃದ್ಧಿ ಸಾಧಿಸುವುದರಿಂದ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ತಾನಾಗಿ ಕಳಚಿ ಬೀಳುತ್ತದೆ.

    ಕರ್ನಾಟಕದ ಉತ್ತರ ತುದಿಗಿರುವುದೇ ಧರೀ ನಾಡು ಬೀದರ. ಮೆಗ್ನಾಕಾರ್ಟಾಕ್ಕಿಂತ ಸಾಕಷ್ಟು ಮೊದಲೆ ಪ್ರಜಾಪ್ರಭುತ್ವ ರೂಢಿಸಿಕೊಂಡ ಪ್ರದೇಶವಿದು. ಭಾರತದ ಬಲಾಡ್ಯ ಚಾಲುಕ್ಯ ಚಕ್ರವರ್ತಿ 6ನೇ ವಿಕ್ರಮಾದಿತ್ಯ ಆಳಿದ್ದು ಕಲ್ಯಾಣ, ಇಂದಿನ ಬಸವಕಲ್ಯಾಣ ಬೀದರ ಜಿಲ್ಲೆಯಲ್ಲಿದೆ. ಬಸವಣ್ಣನವರ ದೇವಸ್ಥಾನ, 108 ಅಡಿ ಪುತ್ಥಳಿ, ಶಿವಶರಣರ ಗವಿಗಳು, ಸುಪ್ರಸಿದ್ಧ ಮಹಾದೇವ ನೆಲೆಸಿದ ಕ್ಷೇತ್ರ ಖಾನಾಪೂರ ಹತ್ತಿರದ ಮೈಲಾರ, ಪ್ರಸಿದ್ಧ ಬೀದರ ಕೋಟೆ, ವಿಖ್ಯಾತಿಯ ಬಿದರಿ ಕಲೆ ಜನ್ಮಸ್ಥಳ ಬೀದರ ಆಗಿದೆ.

    ಕಲ್ಯಾಣದ ಮಹಾದ್ವಾರವೆಂದು ಖ್ಯಾತವಾದ ಕಲಬುರ್ಗಿ ಜಿಲ್ಲೆ. ಭೀಮೆಯ ಸೆರಗಿನ ನಾಡು. ಜಿಲ್ಲೆಯಾದ್ಯಂತ ಭೀಮಾ ನದಿ ಉಪನದಿಗಳಿವೆ. ಭಕ್ತಿ-ದಾಸೋಹಗಳನ್ನು ಜೀವನವಿಡಿ ಪಾಲಿಸಿದ ಶರಣಬಸವೇಶ್ವರರ ಜನ್ಮಸ್ಥಾನ ಜೇವರ್ಗಿ ತಾಲ್ಲೂಕಿನ ಅರಳಗುಂಡಿಗೆ, ಕಾರ್ಯಕ್ಷೇತ್ರ ಕಲಬುರ್ಗಿಯಾಗಿದೆ. ಗಾಣಗಾಪೂರದ ದತ್ತ ಕ್ಷೇತ್ರ, ಭಾಗ್ಯವಂತಿ ದೇವಿ, ಮಹಾಂತ ಬೆಟ್ಟ, ಪೌರಾಣಿಕ ಮಹತ್ವದ ಮಣ್ಣೂರು ಅಪ್ಜಲಪುರ ತಾಲ್ಲೂಕಿನಲ್ಲಿವೆ. ಶಿವಮೊಗ್ಗದ ವರದಳ್ಳಿಯಲ್ಲಿ ನೆಲೆಸಿದ ಶ್ರೀಧರ ಸ್ವಾಮಿಗಳ ಜನ್ಮಸ್ಥಳ ಲಾಡಚಿಂಚೋಳಿ, ರಾಮ ಬಂದಿದ್ದನೆಂದು ನಂಬಿರುವ ನರೋಣಾದ ಕ್ಷೇತ್ರಪಾಳ್ಯ ಅಳಂದ ತಾಲ್ಲೂಕಿನಲ್ಲಿವೆ.

    ಕೃಷ್ಣೆಯ ಮಡಿಲಲ್ಲಿ ಮತ್ತು ಭೀಮೆಯ ಸೆರಗಲ್ಲಿ ಅರಳಿದ ಪುಟ್ಟ ಜಿಲ್ಲೆ ಯಾದಗಿರಿ. ಸಾವಿರಾರು ಕೆರೆಗಳಿಂದ ಸಮೃದ್ಧ ಪ್ರದೇಶ. ಸುರಪುರದ ರಾಜಾ ವೆಂಕಟಪ್ಪ ನಾಯಕರಂತಹ ಸ್ವಾತ್ರಂತ್ಯ ಯೋಧರಿಗೆ ಜನ್ಮ ಕೊಟ್ಟ ನಾಡಲ್ಲಿ ಗೋಪಾಲಕೃಷ್ಣಗುಡಿಯಿದೆ. ಕೃಷ್ಣಾ ತೀರದಲ್ಲಿ ವಿಶ್ವಕರ್ಮರ ಆರಾಧ್ಯ ದೈವ ತಿಂಥಣಿ ಮೌನೇಶ್ವರ ದೇವಸ್ಥಾನವಿದೆ.

    ಮುತ್ತು ರತ್ನಗಳನ್ನು ಅಳೆದು ಮಾರಿದ ಶ್ರೀಮಂತ ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಕನ್ನಡಿಗರ ಹೆಮ್ಮೆಯ ವಿಜಯ ನಗರ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿದೆ. ಕೃಷ್ಣ ತುಂಗಭದ್ರೆಯರ ಸಾನ್ನಿಧ್ಯದಿಂದ ಪವಿತ್ರತಮ ಜಿಲ್ಲೆ. ದಾಸ ಪರಂಪರೆಯ ಹರಿದಾಸರ ಕಾರ್ಯಕ್ಷೇತ್ರ ರಾಯಚೂರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ದ್ವಾರಬಾಗಿಲು ರಾಯಚೂರು. ರಾಮ ಬಂಟ ಹನುಮನುದಿಸಿದ ಕಿಷ್ಕಿಂದೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿದೆ. ಪಂಪಾ ಸರೋವರ ಇಲ್ಲಿದೆ. ಗವಿಸಿದ್ದೇಶ್ವರ ಶರಣರು ನೆಲೆಸಿದ ನಾಡು. ತುಂಗಭದ್ರೆ ನದಿಯ ನಾಡು. ಭತ್ತದ ಕಣಜ. ವಿಜಯನಗರದ ಅರಸರ ಆನೆಗೊಂದಿ ಸಂಸ್ಥಾನದ ವೈಭವ ಕಂಡ ಜಿಲ್ಲೆ. ಮೇಲೆ ಉಲ್ಲೇಖಿಸಿದ ಹಾಗೂ ಇನ್ನೂ ಹಲವಾರು ಸ್ಥಳಗಳು ಪ್ರಚಾರದ ಕೊರತೆಯಿಂದ ನಾಡಿನ ಖ್ಯಾತ ಪ್ರವಾಸಿ ತಾಣ ಎಂದು ಹೆಸರಾಗುವ ಅವಕಾಶದಿಂದ ವಂಚಿತವಾಗಿವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸುಸಂದರ್ಭದಲ್ಲಿ ಈ ಪ್ರದೇಶದ ಐತಿಹಾಸಿಕ, ಪೌರಾಣಿಕ ಸ್ಥಳಗಳ ಪರಿಚಯ ಮಾಡಿಸುವ ಪ್ರಯತ್ನವಾಗಲಿ.

    | ಮಹಾದೇವಯ್ಯ ಕರದಳ್ಳಿ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts