More

    ಜನಮತ | ಈಡೇರಿಸುವಂಥ ಭರವಸೆಗಳನ್ನು ನೀಡಿ…

    ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾರ್ಚ್- ಏಪ್ರಿಲ್​ನಲ್ಲಿ ವಿವಿಧ ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿವೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ನಾಯಕರಿಂದ ಆಶ್ವಾಸನೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ, ಜನರನ್ನು ಸ್ವಾವಲಂಬಿಯಾಗಿಸುವಂಥ ಯೋಜನೆ, ಕಾರ್ಯಕ್ರಮಗಳಿಗೆ ಯಾವುದೇ ರಾಜಕೀಯ ಪಕ್ಷ ಆದ್ಯತೆ ನೀಡಿಲ್ಲ ಎಂಬುದು ಕಳವಳದ ವಿಷಯ. ಬರೀ ಆಮಿಷಗಳನ್ನು ಅಥವಾ ಕೆಲ ನೆರವಿನ ಆಸೆ ತೋರಿಸಿಯೇ ಚುನಾವಣೆಗಳನ್ನು ಎದುರಿಸುವ ಸಾಂಪ್ರದಾಯಿಕ ಪದ್ಧತಿ ಇನ್ನೆಷ್ಟು ವರ್ಷ ಮುಂದುವರಿಯಬೇಕು? ಅಷ್ಟಕ್ಕೂ, ಈ ಪೈಕಿ ಎಷ್ಟು ಭರವಸೆಗಳು ಈಡೇರುತ್ತವೆ ಎಂಬುದನ್ನು ಅವಲೋಕಿಸಿದರೆ ರಾಜಕೀಯ ಪಕ್ಷಗಳ ಬದ್ಧತೆಯ ಕೊರತೆ ಅನಾವರಣವಾಗುತ್ತದೆ.

    ಸಾಲಮನ್ನಾ ಅಥವಾ ಒಂದಿಷ್ಟು ಆರ್ಥಿಕ ನೆರವಿನಂಥ ಕ್ರಮಗಳು ತಾತ್ಕಾಲಿಕ ಪರಿಹಾರ ಎನಿಸಬಹುದು. ಆದರೆ, ದೂರಗಾಮಿ ಯೋಜನೆಗಳ ಬಗ್ಗೆ, ಸುಧಾರಣೆಗಳ ಬಗ್ಗೆ ರಾಜಕೀಯ ಪಕ್ಷಗಳು ಏಕೆ ಯೋಚಿಸುತ್ತಿಲ್ಲ? ಯಾವುದೇ ರಾಜ್ಯದ ನಿದರ್ಶನ ತೆಗೆದುಕೊಂಡರೂ ನಿರುದ್ಯೋಗ ಅಲ್ಲಿನ ಪ್ರಮುಖ ಸಮಸ್ಯೆಯಾಗಿ ಕಂಡುಬರುತ್ತದೆ. ಹೀಗಿರುವಾಗ ಉದ್ಯೋಗಸೃಷ್ಟಿಯ ಹೊಸ ಕ್ರಮಗಳು, ಯುವಕರು ನವೋದ್ಯಮ ಆರಂಭಿಸಿ, ಸ್ವಾವಲಂಬಿ ಯಾಗುವಂಥ ಹೆಜ್ಜೆಗಳು ಹೆಚ್ಚಬೇಕು. ಅದೇ ಹಳೆಯ ಆಶ್ವಾಸನೆಗಳನ್ನು ಮತ್ತೆ ಮತ್ತೆ ಪ್ರಲಾಪಿಸುತ್ತ ಜನರ ದಿಕ್ಕು ತಪ್ಪಿಸುವುದು ಎಷ್ಟು ಸರಿ?

    ಚುನಾವಣೆಗಳು ಆಡಳಿತ ಬದಲಾವಣೆಗೆ ಮಾತ್ರವಲ್ಲ ವ್ಯವಸ್ಥೆ ಶುದ್ಧೀಕರಣದ ಸಾಧನಗಳೂ ಆಗಬೇಕು. ಜನರೂ ಅಷ್ಟೇ; ಅವರ ಮತದ ಮೌಲ್ಯವನ್ನು ಅರಿಯಬೇಕಿದೆ. ಎಷ್ಟೋ ಜನರು ಮತದಾನದಿಂದ ದೂರ ಉಳಿದರೆ, ಇನ್ನು ಕೆಲವರು ಹಣ, ಮತ್ತಿತರ ಆಮಿಷಕ್ಕೆ ಮತ ಮಾರಿಕೊಳ್ಳುತ್ತಾರೆ. ರಾಜಕೀಯ ಪಕ್ಷಗಳು ವಿವೇಚನೆಯಿಂದ ವರ್ತಿಸಿ, ಜನರೂ ಜಾಗೃತರಾಗಿ ಪ್ರಜ್ಞಾವಂತಿಕೆ ಅಳವಡಿಸಿಕೊಂಡರೆ ಪ್ರಜಾಪ್ರಭುತ್ವಕ್ಕೆ ಬಲ ತುಂಬಬಹುದು.

    | ರವಿ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts